ಮನೆ ನಿರ್ಮಿಸುವ ಬಡವರಿಗೆ ಇಲ್ಲಿದೆ ಗುಡ್ ನ್ಯೂಸ್
ಮನೆ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ಬಡಜನತೆಗೆ ಇಲ್ಲಿದೆ ಗುಡ್ ನ್ಯೂಸ್ ... ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಿದೆ.
ಬೆಂಗಳೂರು (ಮಾ.19): ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಮತ್ತು ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿಗಳ ಅಡಿ ರಾಜ್ಯದಲ್ಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್‌ಗಳ ಮೂಲಕ ಶೇ.6ರ ಬಡ್ಡಿ ದರದಲ್ಲಿ 2.25 ಲಕ್ಷ ರು. ಸಾಲ ನೀಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇದುವರೆಗೆ ಈ ಯೋಜನೆಗಳ ಫಲಾನುಭವಿಗಳಿಗೆ ಅಗತ್ಯವಾದ ಮೊತ್ತಕ್ಕೆ ತ್ವರಿತವಾಗಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗುತ್ತಿರಲಿಲ್ಲ. ಪರಿಣಾಮ ಖಾಸಗಿ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಪ್ರಯಾಸ ಪಡಬೇಕಾಗಿತ್ತು. ಹೀಗಾಗಿ, ಈ ತೊಂದರೆ ನಿವಾರಿಸುವ ಸಲುವಾಗಿ ಸೋಮಣ್ಣ ಅವರು ಮುತುವರ್ಜಿ ವಹಿಸಿ ಬ್ಯಾಂಕುಗಳಿಂದ ಸಾಲ ಕೊಡಲು ಮನವೊಲಿಸುವಲ್ಲಿ ಸಫಲರಾಗಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಬಳಿಕ ಶೇ.6ರ ಬಡ್ಡಿದರಲ್ಲಿ ಸಾಲ ನೀಡುವುದಕ್ಕೆ ಬ್ಯಾಂಕ್‌ಗಳು ಒಪ್ಪಿಗೆ ಸೂಚಿಸಿವೆ. ಮುಂದಿನ 15 ದಿನಗಳಲ್ಲಿ ಅಧಿಕೃತ ಒಪ್ಪಿಗೆ ಸಿಗಲಿದೆ. ಬಡ್ಡಿ ದರವನ್ನು ಶೇ.5ಕ್ಕೆ ಇಳಿಸಲು ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ತ್ವರಿತವಾಗಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಲು ಮಂಜೂರಾತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕೆಲಸ ಮಾಡುತ್ತಿದ್ದು, ಎಸ್‌ಸಿ/ಎಸ್‌ಟಿ ವರ್ಗದವರಿಗೆ ಮೂರೂವರೆ ಲಕ್ಷ ರು. ಮತ್ತು ಇತರರಿಗೆ 2 ಲಕ್ಷ ರು. ನೆರವನ್ನು ಸರ್ಕಾರವೇ ಸಬ್ಸಿಡಿ ರೂಪದಲ್ಲಿ ನೀಡಲಿದೆ. ಉಳಿದ 2.25 ಲಕ್ಷ ರು.ಗಳನ್ನು ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುವುದು ಎಂದರು.
ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ತುಳಸಿಯನ್ನು ಎಲ್ಲಿ ನೆಡಬೇಕು? ..
ವಸತಿ ಯೋಜನೆಯಡಿ ಬಡವರಿಗೆ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಮೂಲಕ 83,119 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, 54 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 97,134 ಮನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ, 34,008 ಮಂದಿಗೆ ಸಾಲ ನೀಡಲು ವಿವಿಧ ಬ್ಯಾಂಕ್‌ಗಳು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿವೆ ಎಂದು ಸಚಿವರು ತಿಳಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಫಲಾನುಭವಿಗಳಿಗೆ ವಿತರಿಸಲಾಗಿರುವ 3.13 ಲಕ್ಷ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹಕ್ಕು ಪತ್ರವನ್ನು ಹಸ್ತಾಂತರಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಹಕ್ಕುಪತ್ರ ಪಡೆದುಕೊಳ್ಳಲು ನಿಗದಿಪಡಿಸಿರುವ ಶುಲ್ಕದ ಮೊತ್ತ ಹೆಚ್ಚಾಯಿತು ಎಂಬ ದೂರು ಬಂದಿದ್ದು, ಕಡಿಮೆ ಮಾಡಲು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿಗಳಿಗೆ 1200 ರು.ನಿಂದ 10 ಸಾವಿರ ರು.ವರೆಗೆ ದರ ನಿಗದಿ ಪಡಿಸಲಾಗಿತ್ತು. ಈ ದರವನ್ನು 1200 ರು.ನಿಂದ 4 ಸಾವಿರ ರು.ವರೆಗೆ ಕಡಿಮೆ ಮಾಡಿ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್‌ಸಿ/ಎಸ್‌ಟಿ ವರ್ಗದವರಿಗೆ ಶೇ.50ರಷ್ಟುರಿಯಾಯತಿ ಸಿಗಲಿದೆ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೋಮಣ್ಣ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್, ರಾಜೀವ್ ಗಾಂಧಿ ವಸತಿ ನಿಮಗ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಇತರರು ಉಪಸ್ಥಿತರಿದ್ದರು.