ಬೆಂಗಳೂರು(ಮೇ.02): ಆಡಳಿತದಲ್ಲಿ ಸುಧಾರಣೆ ಮತ್ತು ಆರ್ಥಿಕ ಮಿತವ್ಯಯಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ಕೆಲವು ಇಲಾಖೆಗಳ ವಿಲೀನ ಮತ್ತು ಅನಗತ್ಯ ಹುದ್ದೆಗಳ ರದ್ದುಗೊಳಿಸುವ ಸಂಬಂಧ 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದು ಜಾರಿಯಾದರೆ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 2000 ಕೋಟಿ ರು. ಉಳಿತಾಯವಾಗುವ ನಿರೀಕ್ಷೆಯಿದೆ.

ಕಂದಾಯ ಸಚಿವ ಆರ್‌.ಅಶೋಕ್‌ ನೇತೃತ್ವದಲ್ಲಿ ರಚನೆಯಾಗಿರುವ ಸಚಿವ ಸಂಪುಟದ ಉಪ ಸಮಿತಿಯು ಮೊದಲ ಸಭೆಯನ್ನು ನಡೆಸಿದೆ. ಯಾವ ಇಲಾಖೆಯೊಂದಿಗೆ ಯಾವ ಇಲಾಖೆ ವಿಲೀನಗೊಳಿಸುವುದು ಮತ್ತು ಅನಗತ್ಯವಾಗಿರುವ ಯಾವ ಹುದ್ದೆಗಳನ್ನು ರದ್ದುಗೊಳಿಸಬೇಕು ಎಂಬುದರ ಕುರಿತು 15 ದಿನದಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದೆ. ಈ ಸಂಬಂಧ ಮೂವರು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಐಎಎಸ್‌ ಅಧಿಕಾರಿಗಳಾದ ಮೌನೀಶ್‌ ಮುದ್ಗಿಲ್, ಎಸ್‌.ಜಿ.ರವೀಂದ್ರ ಮತ್ತು ಏಕ್‌ರೂಪ್‌ ಕೌರ್‌ ಅವರಿಗೆ ಉಸ್ತುವಾರಿ ನೀಡಲಾಗಿದೆ.

ಮತ್ತೆ ರಾಜ್ಯದಲ್ಲಿ ಕೊರೋನಾ‘ಸ್ಫೋಟ’, ದಾವಣಗೆರೆಯಲ್ಲಿ ಮೊದಲ ಬಲಿ!

ಉಪ ಸಮಿತಿಯು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ಈ ಹಿಂದೆ ರಚನೆಯಾಗಿದ್ದ ಆಡಳಿತ ಸುಧಾರಣಾ ಆಯೋಗ, ವೆಚ್ಚ ಸುಧಾರಣಾ ಆಯೋಗ, ಕಾಲ ಕಾಲಕ್ಕೆ ರಚನೆಯಾಗಿರುವ ಸಮಿತಿಗಳು, 6ನೇ ವೇತನ ಆಯೋಗ ನೀಡಿರುವ ಶಿಫಾರಸುಗಳ ಆಧಾರದಲ್ಲಿ ಆಡಳಿತ ಬಿಗಿಗೊಳಿಸುವುದು ಸರ್ಕಾರದ ಚಿಂತನೆಯಾಗಿದೆ. ಹಲವು ಇಲಾಖೆಗಳಲ್ಲಿ ಕೆಲಸ ಇಲ್ಲದಿದ್ದರೂ ಹುದ್ದೆಗಳಿವೆ. ಕೆಲಸ ಇರುವ ಕಡೆ ಸಿಬ್ಬಂದಿ ಇಲ್ಲ. ಹೀಗಾಗಿ ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರವು ಇಲಾಖೆಗಳಲ್ಲಿನ ಮತ್ತು ಅನಗತ್ಯ ಹುದ್ದೆಗಳ ರದ್ದುಗೊಳಿಸುವ ಕ್ರಮಕ್ಕೆ ಮುಂದಾಗಿದೆ.

ಸರ್ಕಾರಕ್ಕೆ ಅನಗತ್ಯ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸಲು ಮುಂದಾಗಿದೆ. ಪ್ರಾದೇಶಿಕ ಆಯುಕ್ತರ ಹುದ್ದೆ, ಕೃಷಿ ಇಲಾಖೆಯಲ್ಲಿನ ಜಂಟಿ ನಿರ್ದೇಶಕರ ಹುದ್ದೆ, ಒಂದೇ ಇಲಾಖೆಯಲ್ಲಿರುವ ಎರಡೆರಡು ಪ್ರಧಾನ ಕಾರ್ಯದರ್ಶಿ ಹುದ್ದೆ, ಎರಡೆರಡು ಆಯುಕ್ತರ ಹುದ್ದೆ, ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಸಿಬ್ಬಂದಿ, ಇಂಜಿನಿಯರಿಂಗ್‌ ಹುದ್ದೆಗಳನ್ನು ರದ್ದು ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ಕೃಷಿ ಮತ್ತು ತೋಟಗಾರಿಕೆ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ, ಸಹಕಾರ ಮತ್ತು ಕೃಷಿ ಮಾರುಕಟ್ಟೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ, ರಾಜ್ಯ ಲೆಕ್ಕ ಪರಿಶೀಲನಾ ಇಲಾಖೆ ಮತ್ತು ಲೆಕ್ಕಪತ್ರ ಇಲಾಖೆ, ಕಾನೂನು ಮಾಪನ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಭಾಷಾಂತರ ಇಲಾಖೆ ಮತ್ತು ಕನ್ನಡ ಮತ್ತಿ ಸಂಸ್ಕೃತಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳನ್ನು ಒಗ್ಗೂಡಿಸುವುದು ಸರ್ಕಾರದ ಯೋಚನೆಯಾಗಿದೆ.

2 ಸಾವಿರ ಕೋಟಿ ಉಳಿತಾಯ:

ಈ ಕುರಿತು ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಕೆಲ ಅಧಿಕಾರಿಗಳು ತಮಗೆ ಬೇಕಾದಂತೆ ಹುದ್ದೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಹಲವು ಇಲಾಖೆಯಲ್ಲಿ ಅನಗತ್ಯ ಹುದ್ದೆಗಳಿವೆ. ಅವುಗಳನ್ನು ರದ್ದುಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ. ಅಲ್ಲದೇ, ಇಲಾಖೆಗಳ ವಿಲೀನ ಕುರಿತು ಸಹ ಸಮಾಲೋಚನೆ ನಡೆಸಲಾಗಿದೆ. ಅನಗತ್ಯ ಹುದ್ದೆಗಳನ್ನು ರದ್ದು ಮಾಡುವುದರಿಂದ ಮತ್ತು ಇಲಾಖೆಗಳ ವಿಲೀನಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ 2 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಿದರು.

ಕೇಂದ್ರದ ಪ್ರಕಾರ ಕೇಂದ್ರದಲ್ಲಿ ಮೂರೇ ಕೆಂಪು ಜಿಲ್ಲೆ!

ಮೂವರು ಅಧಿಕಾರಿಗಳಿಗೆ ಸಮಗ್ರ ವರದಿ ನೀಡುವ ಜವಾಬ್ದಾರಿ ನೀಡಲಾಗಿದೆ. 15 ದಿನದಲ್ಲಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ವರದಿ ನೀಡಿದ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.