Asianet Suvarna News Asianet Suvarna News

Operation For Monkeys : ರಾಜ್ಯದಲ್ಲಿ ಮಂಗಗಳ ಸಂತಾನ ಹರಣಕ್ಕೆ ಯೋಜನೆ

  • ರಾಜ್ಯದಲ್ಲಿ ಮಂಗಗಳ ಸಂತಾನ ಹರಣಕ್ಕೆ ಯೋಜನೆ
  •  ಇತಿಹಾಸದಲ್ಲಿ ಇದೇ ಮೊದಲು: ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಜಾರಿ
  • ಯಶಸ್ವಿಯಾದರೆ ಇತರೆಡೆ ವಿಸ್ತರಣೆ
Karnataka Govt Plan For Reduce  Number of Monkeys snr
Author
Bengaluru, First Published Jan 2, 2022, 7:17 AM IST | Last Updated Jan 2, 2022, 7:17 AM IST

ವರದಿ :  ರಮೇಶ್‌ ಬನ್ನಿಕುಪ್ಪೆ

 ಬೆಂಗಳೂರು (ಜ.02):  ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಂಗಗಳಿಗೆ (monkey)  ಸಂತಾನ ಹರಣ ಯೋಜನೆಯೊಂದನ್ನು ರಾಜ್ಯ ಸರ್ಕಾರ ರೂಪಿಸಿದೆ.  ಶಿವಮೊಗ್ಗ (shivamogga)  ಜಿಲ್ಲೆ ಸೇರಿದಂತೆ ಮಂಗಗಳ ಹಾವಳಿ ಹೆಚ್ಚಿರುವ ಜಿಲ್ಲೆಗಳಲ್ಲಿ ಈ ಸಂತಾನ ಹರಣ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಗೊಳಿಸಲು ಮುಂದಾಗಿದೆ.

ಕಳೆದ ವರ್ಷ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದ್ದ ಮಂಗಗಳ ಹಾವಳಿ ತಪ್ಪಿಸುವಂತೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿತ್ತು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಮಂಗಗಳ ಹಾವಳಿ ತಪ್ಪಿಸಲು ಯೋಜನೆ ರೂಪಿಸುವಂತೆ ಅರಣ್ಯ ಇಲಾಖೆಗೆ (Forest Department) ಸೂಚನೆ ನೀಡಿ, ಈ ಉದ್ದೇಶಕ್ಕಾಗಿ 25 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ.

ಕೂಡಲೇ ಕಾರ್ಯತತ್ಪರವಾಗಿರುವ ಅರಣ್ಯ ಇಲಾಖೆ ಮಂಗಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲು ನೆರವಾಗುವ ಮೊಬೈಲ್‌ ಆ್ಯಂಬುಲೆನ್ಸ್‌ ಸಿದ್ಧಪಡಿಸಿ ಪೂರೈಸುವಂತೆ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಮನವಿ ಮಾಡಿದ್ದು, ಸಿದ್ಧತಾ ಕಾರ್ಯ ನಡೆಯುತ್ತಿದೆ. ಈ ಬಾಬ್ತಿಗಾಗಿ 13 ಲಕ್ಷ ರು.ಗಳನ್ನು ಈಗಾಗಲೇ ವಿನಿಯೋಗಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಂಗಗಳ ಸಂಖ್ಯೆ ಕಡಿಮೆ ಮಾಡುವುದು ಸುದೀರ್ಘ ಪ್ರಕ್ರಿಯೆಯಾಗಿದೆ. ಪ್ರಸ್ತುತ ಸಂತಾನ ಹರಣ ಮಾಡಿದ ತಕ್ಷಣ ಅವುಗಳ ಸಂಖ್ಯೆ ಕ್ಷೀಣಿಸುವುದಿಲ್ಲ. ಮುಂದಿನ ಹತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಂತಾನ ಹರಣ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಗಗಳ ಹಾವಳಿ ಹೆಚ್ಚಿರುವ ಭಾಗಗಳಿಗೆ ವಿಸ್ತರಿಸುವುದಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಪರಿಪಾಲಕ) ವಿಜಯ್‌ಕುಮಾರ್‌ ಗೋಗಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ವೈದ್ಯರಿಗೆ ತರಬೇತಿ

ಮಂಗಗಳು ವಿಶೇಷ ಪ್ರಾಣಿಗಳಾಗಿವೆ. ಅವುಗಳಿಗೆ ಸಂತಾನ ಹರಣ ಮಾಡಿದ ಬಳಿಕ ಚೇತರಿಸಿಕೊಳ್ಳುವುದಕ್ಕೆ ಕನಿಷ್ಠ ಎರಡು ದಿನಗಳ ಸಮಯ ಬೇಕಾಗುತ್ತದೆ. ಅಲ್ಲದೆ, ಅವುಗಳಿಗೆ ಅನಸ್ತೇಶಿಯಾ ನೀಡಲು, ಶಸ್ತ್ರ ಚಿಕಿತ್ಸೆಯ ನಂತರ ಅವುಗಳ ಆರೈಕೆ ಮಾಡುವ ಸಂಬಂಧ ಪಶು ವೈದ್ಯರಿಗೆ (Doctor)  ತರಬೇತಿ ನೀಡಲಾಗುತ್ತಿದೆ ಎಂದು ವಿಜಯ್‌ಕುಮಾರ್‌ ಗೋಗಿ ಅವರು ಹೇಳಿದರು.

ಹಿಮಾಚಲ ಪ್ರದೇಶ ಮಾದರಿ

ಹಿಮಾಚಲ ಪ್ರದೇಶದ (Himachal Pradesh) ಶಿಮ್ಲಾ ನಗರದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿತ್ತು. ಅದನ್ನು ನಿಯಂತ್ರಿಸಲು ಈಗಾಗಲೇ ಮಂಗಗಳ ಸಂತಾನ ಹರಣ ಚಿಕಿತ್ಸೆ ನೀಡಲಾಗಿದ್ದು, ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಅದೇ ರೀತಿಯ ಯೋಜನೆ ರೂಪಿಸಲಾಗಿದೆ ಎಂದು ವಿಜಯ್‌ ಕುಮಾರ್‌ (Vijay Kumar) ಮಾಹಿತಿ ನೀಡಿದರು.

ರಾಜ್ಯದಲ್ಲಿ ಕೋತಿಗಳ ಸಂತಾನ ನಿಯಂತ್ರಿಸುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪಶು ವೈದ್ಯರಿಗೆ ತರಬೇತಿ ಮತ್ತು ಮೊಬೈಲ್‌ ಆಂಬ್ಯುಲೆನ್ಸ್‌ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ ಶಿವಮೊಗ್ಗದಲ್ಲಿ ಶಸ್ತ್ರಚಿಕಿತ್ಸೆ ಪ್ರಾರಂಭಿಸಿ ಹಂತ ಹಂತವಾಗಿ ರಾಜ್ಯದಲ್ಲಿ ಮಂಗಗಳ ಹಾವಳಿ ಹೆಚ್ಚಿರುವ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.

  ವಿಜಯ್‌ಕುಮಾರ್‌ ಗೋಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಪರಿಪಾಲಕ)

  • ರಾಜ್ಯದಲ್ಲಿ ಮಂಗಗಳ ಸಂತಾನ ಹರಣಕ್ಕೆ ಯೋಜನೆ
  •  ಇತಿಹಾಸದಲ್ಲಿ ಇದೇ ಮೊದಲು: ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಜಾರಿ
  • ಯಶಸ್ವಿಯಾದರೆ ಇತರೆಡೆ ವಿಸ್ತರಣೆ
  • ಈಗ ಸಂತಾನ ಹರಣ ಮಾಡಿದರೆ 10 ವರ್ಷಗಳಲ್ಲಿ ಮಂಗಗಳ ಸಂಖ್ಯೆ ಹಂತಹಂತವಾಗಿ ಇಳಿಕೆ
  • ಏನಿದು ಯೋಜನೆ?
  • - ಮಂಗಗಳ ಹಾವಳಿ ತಪ್ಪಿಸುವಂತೆ ಶಿವಮೊಗ್ಗದಲ್ಲಿ ಆಗ್ರಹ ಕೇಳಿಬಂದಿತ್ತು
  • - ಮಂಗಗಳ ಉಪಟಳ ತಡೆಗೆ ಯೋಜನೆ ರೂಪಿಸಲು ಸೂಚಿಸಿದ್ದ ಸರ್ಕಾರ
  • - ಇದಕ್ಕಾಗಿ ಅರಣ್ಯ ಇಲಾಖೆಗೆ ಸರ್ಕಾರದಿಂದ 25 ಲಕ್ಷ ರು. ಬಿಡುಗಡೆ
  • - ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಖರೀದಿ ಇಲಾಖೆ ಯತ್ನ
  • - ಆ್ಯಂಬುಲೆನ್ಸ್‌ ತಯಾರಿಗೆ ಪಶು ವೈದ್ಯ ಸಂಸ್ಥೆಗೆ ಅರಣ್ಯ ಇಲಾಖೆ ಮನವಿ
  • - ಆ್ಯಂಬುಲೆನ್ಸ್‌ ಸಿದ್ಧತಾ ಕಾರ್ಯ ಪ್ರಗತಿ. 13 ಲಕ್ಷ ರು. ವೆಚ್ಚ
Latest Videos
Follow Us:
Download App:
  • android
  • ios