ಬೆಂಗಳೂರು [ನ.14]:  ನಕಲಿ ದಾಖಲೆ ನೀಡಿ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಕಾರ್ಡ್‌ ಪಡೆದ ಸ್ಥಿತಿವಂತರು ಸ್ವಯಂ ಪ್ರೇರಣೆಯಿಂದ ಪಡಿತರ ಕಾರ್ಡ್‌ ವಾಪಸ್‌ ನೀಡಲು ಆಹಾರ ಮತ್ತು ನಾಗರಿಕದ ಸರಬರಾಜು ಇಲಾಖೆ ‘ಅತ್ಯರ್ಪಣ’ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ 1.22 ಕೋಟಿ ಬಿಪಿಎಲ್‌ ಕಾರ್ಡ್‌ಗಳು ಇದ್ದು, 4.24 ಕೋಟಿ ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. ಒಬ್ಬ ಫಲಾನುಭವಿಗೆ 7 ಕೆಜಿ ಅಕ್ಕಿ ನೀಡುವುದರಿಂದ ಸಾವಿರಾರು ಟನ್‌ ಅಕ್ಕಿಯನ್ನು ಸರ್ಕಾರ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸಲಾಗುತ್ತಿದೆ. ನಕಲಿ ಪಡಿತರ ಕಾರ್ಡ್‌ಗಳು ಸರ್ಕಾರಕ್ಕೆ ತಲೆ ನೋವಾಗಿದ್ದು, ಲಕ್ಷಾಂತರ ಟನ್‌ ಪಡಿತರ ದುರ್ಬಳಕೆಯಾಗುತ್ತಿದೆ. ಹೀಗಾಗಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯರ್ಪಣ ಯೋಜನೆ ಜಾರಿಗೊಳಿಸಲು ಸರ್ಕಾರ ಯೋಜಿಸಿದೆ.

ಸ್ಥಿತಿವಂತರು ಅಡುಗೆ ಅನಿಲ ಯೋಜನೆಯ ‘ಗಿವ್‌ ಇಟ್‌ ಅಪ್‌’ ಸಬ್ಸಿಡಿ ಹಿಂತಿರುಗಿಸಿದ ಯೋಜನೆ ಮಾದರಿಯಲ್ಲಿ ‘ಅತ್ಯರ್ಪಣ’ ಯೋಜನೆಯಡಿ ಪಡಿತರ ಚೀಟಿ ಹಿಂದಿರುಗಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯನ್ನು 2020ರ ಜನವರಿಯಲ್ಲಿ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದ್ದು, ಅದಕ್ಕೂ ಮೊದಲೇ ಸ್ಥಿತಿವಂತರು ಕಾರ್ಡ್‌ ಹಿಂದಿರುಗಿಸಲು ಬಯಸಿದರೆ ಆಹಾರ ಇಲಾಖೆ ಹಿಂದಿರುಗಿಸಬಹುದು. ಯೋಜನೆ ಜಾರಿಗೊಂಡ ಮೂರು ತಿಂಗಳ ಒಳಗೆ ಪಡಿತರ ಕಾರ್ಡ್‌ ವಾಪಸ್‌ ನೀಡದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಚ್ಚರಿಸಿದೆ.

ಕಠಿಣ ಕ್ರಮದ ಎಚ್ಚರಿಕೆ:

ಪಡಿತರ ಕಾರ್ಡ್‌ಗೆ ಆಧಾರ್‌ ಜೋಡಣೆ ಮಾಡಿದ ನಂತರ ರಾಜ್ಯಾದ್ಯಂತ ಲಕ್ಷಾಂತರ ನಕಲಿ ಪಡಿತರ ಕಾರ್ಡ್‌ಗಳು ಪತ್ತೆಯಾಗಿದ್ದವು. ಬಳಿಕ ಆಧಾರ್‌ ಹೊಂದಿರುವವರು ಇ-ಕೆವೈಸಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಬೋಗಸ್‌ ಪಡಿತರ ಕಾರ್ಡ್‌ ಹೊಂದಿದದ್ದನ್ನು ಗುರುತಿಸಲಾಗಿತ್ತು. ಈ ವೇಳೆ ಸ್ಥಿತಿವಂತರು ಕೂಡಲೇ ಬಡತನ ರೇಖೆಗಿಂತ ಕೆಳಗಿನವರಿಗೆ ನೀಡಲಾಗುವ ಪಡಿತರ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್‌ ಕೇಸು ದಾಖಲಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ 51,037 ಪಡಿತರ ಕಾರ್ಡ್‌ಗಳು ಇಲಾಖೆಗೆ ವಾಪಸ್‌ ಬಂದಿದ್ದವು. ಇದೀಗ ಇಲಾಖೆ ಎರಡನೇ ಸುತ್ತಿನಲ್ಲಿ ಸುಳ್ಳು ದಾಖಲೆ ನೀಡಿ ಪಡಿತರ ಕಾರ್ಡ್‌ ಪಡೆದವರು ಕಾರ್ಡ್‌ ಹಿಂದಿರುಗಿಸಲು ಅವಕಾಶ ನೀಡಲಿದೆ.

 ಪ್ರತ್ಯೇಕ ಮೊಬೈಲ್‌ ಆ್ಯಪ್‌

ಸ್ಥಿತಿವಂತರು ಪಡಿತರ ಕಾರ್ಡ್‌ಗಳನ್ನು ಹಿಂದಿರುಗಿಸಲು ಅನುಕೂಲವಾಗುವಂತೆ ಪ್ರತ್ಯೇಕವಾದ ಮೊಬೈಲ್‌ ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಲಿಂಕ್‌ ರೂಪಿಸುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ ನಡೆಸಿದೆ. 

ಉಳ್ಳವರು ಸ್ವಯಂ ಪ್ರೇರಿತವಾಗಿ ಮೂರು ತಿಂಗಳ ಒಳಗೆ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹಿಂದಿರುಗಿಸದಿದ್ದರೆ ಇಲಾಖೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ, ಇಲಾಖೆ ಗೌಪ್ಯವಾಗಿ ಪರಿಶೀಲನೆ ನಡೆಸುವ ವೇಳೆ ಸಿಕ್ಕಿ ಬಿದ್ದರೆ ಅವರು ಕಾರ್ಡ್‌ ಪಡೆದಾಗಿನಿಂದ ಇದುವರೆಗೆ ಸ್ವೀಕರಿಸಿರುವ ಅಕ್ಕಿ ದರವನ್ನು ಮುಕ್ತ ಮಾರುಕಟ್ಟೆದರದಲ್ಲಿ ವಸೂಲಿ ಮಾಡಲಾಗುತ್ತದೆ. ಅಲ್ಲದೇ ದಂಡ ವಿಧಿಸಲು ಕೂಡ ಕ್ರಮ ವಹಿಸಲು ಇಲಾಖೆ ನಿರ್ಧರಿಸಿದೆ.