ಎನ್‌.ಎಲ್‌. ಶಿವಮಾದು

ಬೆಂಗಳೂರು[ಫೆ.11]: ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಆಂಗ್ಲ ಮಾಧ್ಯಮ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಉತ್ತೇಜಿತಗೊಂಡಿರುವ ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಮತ್ತೆ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗಿದೆ.

ಇದಕ್ಕೆ ಮುಖ್ಯ ಕಾರಣ- ಮಕ್ಕಳು ಸರ್ಕಾರಿ ಶಾಲೆಗೆ ಬರುವಂತೆ ಮಾಡಲು ಆಂಗ್ಲ ಮಾಧ್ಯಮ ಎಂಬುದು ಅತಿ ದೊಡ್ಡ ಆಕರ್ಷಣೆ ಎಂದು ಇಲಾಖೆ ಭಾವಿಸಿರುವುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಸಾಕಷ್ಟುಪ್ರಯತ್ನ ಮಾಡಲಾಗುತ್ತಿದೆ. ಸುವಾಸನೆ ಭರಿತ ಹಾಲು, ಮಧ್ಯಾಹ್ನದ ಬಿಸಿಯೂಟ, ಸೈಕಲ್‌, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಸೇರಿದಂತೆ ಸರ್ಕಾರದ ಬೇರೆಲ್ಲಾ ಯೋಜನೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಆಂಗ್ಲ ಮಾಧ್ಯಮ ಪರಿಣಾಮಕಾರಿ ಮಾರ್ಗವಾಗಿದೆ ಎಂಬುದು ಇಲಾಖೆಯ ಅಂದಾಜು.

ಇದಕ್ಕೆ 2019-20ನೇ ಸಾಲಿನಲ್ಲಿ ಆರಂಭವಾದ ಆಂಗ್ಲ ಮಾಧ್ಯಮ ಶಾಲೆಗಳಿಗೆ ದೊರೆತ ಪೋಷಕರ ಪ್ರತಿಕ್ರಿಯೆಯೇ ಕಾರಣ. ವಾಸ್ತವವಾಗಿ, ನೂತನವಾಗಿ ಆರಂಭಗೊಂಡ ಒಂದು ಸಾವಿರ ಆಂಗ್ಲ ಶಾಲೆಗಳಲ್ಲಿ ಒಂದನೇ ತರಗತಿಗೆ ತಲಾ 30 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗಿತ್ತು. ಅದರಂತೆ ಒಟ್ಟು 30 ಸಾವಿರ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ರವೇಶ ನೀಡಲಾಗಿತ್ತು. ಆದರೆ, ಪೋಷಕರಿಂದ ವಿಪರೀತ ಬೇಡಿಕೆ ಬಂದಿದ್ದಲ್ಲದೆ, 30ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಂತೆ ಒತ್ತಾಯ ಆರಂಭಗೊಂಡಿತ್ತು. ಇದರಿಂದ ಪ್ರೇರಿತಗೊಂಡು ಇಲಾಖೆಯು ಮತ್ತೆ ಹೊಸದಾಗಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

224 ಕೆಪಿಎಸ್‌ ಆರಂಭಕ್ಕೆ ಪ್ರಸ್ತಾಪ:

ಒಂದು ಸಾವಿರ ಹೆಚ್ಚುವರಿ ಆಂಗ್ಲ ಮಾಧ್ಯಮ ಶಾಲೆಗಳು ಮಾತ್ರವಲ್ಲದೆ, ಇದೇ ಅವಧಿಯಲ್ಲಿ ಆರಂಭಗೊಂಡು ಸಾಕಷ್ಟುಯಶಸ್ವಿಯಾಗಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳ ಸಂಖ್ಯೆ ಹೆಚ್ಚಿಸುವ ಉಮೇದಿ ಕೂಡ ಇಲಾಖೆಗೆ ಇದೆ. ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು 2019-20ರ ಅವಧಿಯಲ್ಲಿ ಆರಂಭಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರಕಿರುವ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತೆ 224 ಕೆಪಿಎಸ್‌ ಶಾಲೆಗಳನ್ನು ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

4 ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ:

ಇದಲ್ಲದೆ, ಬಹಳ ದಿನಗಳಿಂದ ಬಾಕಿ ಉಳಿದಿರುವ ಎಲ್‌ಕೆಜಿ ಆರಂಭಿಸುವ ಯೋಜನೆಯೂ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2019) ಪ್ರಕಾರ, 3 ವರ್ಷದ ಮಕ್ಕಳು ಕೂಡ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ, ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಬೇಕು ಎಂಬ ಚಿಂತನೆ ಹಲವು ವರ್ಷಗಳಿಂದ ಇಲಾಖೆಯಲ್ಲಿದೆ. ಆದರೆ, ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಬಾರಿ ಸರ್ಕಾರಿ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಒಂದುಗೂಡಿಸಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುವ ಎಲ್‌ಕೆಜಿ ಆರಂಭಿಸಲು ಹಾಲಿ ಅಂಗನವಾಡಿ ಇರುವ ಸುಮಾರು ನಾಲ್ಕು ಸಾವಿರ ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆಯಾದರೆ, ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.