ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಲಮನ್ನಾ ಯೋಜನೆಯನ್ನು ಸೋಮವಾರದಿಂದಲೇ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರೈತರ ಸಾಲಮನ್ನಾ ಪ್ರಕ್ರಿಯೆ ಮೊದಲಿಗೆ ಕಲಬುರ್ಗಿ ಜಿಲ್ಲೆಯ ಸೇಡಂ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಸೋಮವಾರದಿಂದ ಪ್ರಾಯೋಗಿಕವಾಗಿ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ವಿಷಯ ತಿಳಿಸಿದ್ದಾರೆ.
ಈ ತಾಲೂಕುಗಳ ಬ್ಯಾಂಕ್ ಶಾಖೆಗಳು ಮಾಹಿತಿ ಪರಿಶೀಲನೆ ಪೂರ್ಣಗೊಳಿಸಿದ ನಂತರ ನವೆಂಬರ್ 12ರಿಂದ ರೈತರು ತಾವು ಸಾಲ ಪಡೆದ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಅವರು ಹೊಂದಿರುವ ಕೃಷಿ ಭೂಮಿಯ ಮಾಹಿತಿ ಒದಗಿಸುವಂತೆ ಸೂಚಿಸಲಾಗುವುದು. ನಂತರ ಇತರ ತಾಲೂಕುಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಸಾಲ ಮನ್ನಾ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ನಿರಂತರವಾಗಿ ಖುದ್ದು ಪರಿಶೀಲಿಸುತ್ತಿದ್ದು, ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ರೈತರು ಆತಂಕಪಡುವ ಅಗತ್ಯವಿಲ್ಲ. ಭೂದಾಖಲೆಗಳು ಮತ್ತು ಸರ್ವೇಕ್ಷಣಾ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ… ನೇತೃತ್ವದ ತಂಡವು ಸಾಲಮನ್ನಾ ಯೋಜನೆಗಾಗಿ ವಿಶೇಷ ತಂತ್ರಾಂಶ ರೂಪಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾಲಮನ್ನಾ ಯೋಜನೆಗೆ ಅರ್ಹತೆ ಪಡೆದ ರೈತರು ಯಾರೂ ಗಾಬರಿಯಾಗಬೇಕಾಗಿಲ್ಲ ಎಂದು ಮುಖ್ಯಮಂತ್ರಿಗಳು ಅಭಯ ನೀಡಿದ್ದಾರೆ.
ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿ ಸಾಲ ಪಡೆದ ರೈತರ ಮಾಹಿತಿ ಒದಗಿಸಿದ್ದು, ಈ ಮಾಹಿತಿಯನ್ನು ಸರ್ಕಾರ ಅಭಿವೃದ್ಧಿ ಪಡಿಸಿದ ತಂತ್ರಾಂಶದಲ್ಲಿ ಅಳವಡಿಸಿ, ಪರಿಶೀಲನೆ ನಡೆಸಲಾಗುತ್ತಿದೆ. ಸಹಕಾರಿ ಬ್ಯಾಂಕುಗಳಲ್ಲಿ ಈಗಾಗಲೇ ಮಾಹಿತಿ ಪರಿಶೀಲನಾ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ ಅಂತ್ಯದೊಳಗೆ ಆರು ಸಾವಿರ ಶಾಖೆಗಳ 20 ಲಕ್ಷ ರೈತರ ಮಾಹಿತಿ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಈ ಯೋಜನೆಯ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಈ ಯೋಜನೆ ಕುರಿತು ರೈತರ ಸಂದೇಹಗಳನ್ನು ಬಗೆಹರಿಸಲು ಶೀಘ್ರವೇ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 6, 2018, 7:45 AM IST