ಕೊರೋನಾ ಮಹಾಮಾರಿ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸಾವು ನೋವುಗಳು ಸೋಂಕಿತರ ಪ್ರಮಾಣವು ಅತಿ ಹೆಚ್ಚಾಗಿದೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಲ ಕೋವಿಡ್ ಬೆಡ್ ಚಾರ್ಜ್ ಕೂಡ ಏರಿಕೆ ಮಾಡಲಾಗಿದೆ.
ಬೆಂಗಳೂರು (ಮೇ.05): ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ವಶದಲ್ಲಿರುವ ಹಾಸಿಗೆಗಳ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಆಕ್ಸಿಜನ್‌ಯುಕ್ತ ಹಾಸಿಗೆ ದರವನ್ನು ದಿನಕ್ಕೆ 1 ಸಾವಿರ ರು.ಗಳಷ್ಟುಮತ್ತು ಐಸಿಯುನಲ್ಲಿ ವೆಂಟಿಲೇಟರ್ ಸಹಿತ ಹಾಸಿಗೆ ದರವನ್ನು ದಿನಕ್ಕೆ 1500 ಸಾವಿರ ರು.ಗಳಷ್ಟುಹೆಚ್ಚಳ ಮಾಡಲಾಗಿದೆ.
ಮಂಗಳವಾರ ವಿಧಾನಸೌಧದಲ್ಲಿ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಗಂಭೀರವಲ್ಲದ ಕೋವಿಡ್ ಸೋಂಕಿತರ ಹಾಸಿಗೆ ದರ ಪ್ರತಿದಿನಕ್ಕೆ ಈಗ 5,200 ರು. ಇದ್ದು, ಇದರಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಆಕ್ಸಿಜನ್‌ಯುಕ್ತ ಹಾಸಿಗೆ ದರವನ್ನು ದಿನಕ್ಕೆ 7 ಸಾವಿರ ರು.ನಿಂದ 8 ಸಾವಿರ ರು.ಗೆ ಹೆಚ್ಚಿಸಲಾಗಿದೆ. ಐಸಿಯುನಲ್ಲಿ ವೆಂಟಿಲೇಟರ್ ಹೊರತಾದ ಹಾಸಿಗೆ ದರವನ್ನು 8,500ರಿಂದ 9,750 ರು.ಗೆ ಮತ್ತು ಐಸಿಯುನಲ್ಲಿ ವೆಂಟಿಲೇಟರ್ ಸಹಿತ ಹಾಸಿಗೆ ದರವನ್ನು 10 ಸಾವಿರ ರು.ನಿಂದ 11,500 ರು.ಗೆ ಹೆಚ್ಚಿಸಲಾಯಿತು. ಹೊಸ ದರಗಳು ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದಕ್ಕೆ ಸರ್ಕಾರ ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ ಎಂದು ಸಭೆಯ ಬಳಿಕ ಅಶ್ವತ್ಥನಾರಾಯಣ ತಿಳಿಸಿದರು.
ಬೆಡ್ ಹಂಚಿಕೆಯಲ್ಲಿ ಲೋಪವಾದ್ರೆ ಅಧಿಕಾರಿಗಳೇ ಹೊಣೆ: ಸಚಿವ ಸೋಮಣ್ಣ ...
ರೆಮ್‌ಡೆಸಿವಿರ್ ಕೊರತೆ ಆಗಕೂಡದು:
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರೆಮ್‌ಡೆಸಿವಿರ್ ಕೊರತೆ ಉಂಟಾಗಬಾರದು. ತಕ್ಷಣ 5 ಲಕ್ಷ ಡೋಸ್ ಆಮದು ಮಾಡಲು ಜಾಗತಿಕ ಟೆಂಡರ್ ಕರೆಯಬೇಕು. ಯಾವುದೇ ಕಂಪನಿಯಾದರೂ ಪರವಾಗಿಲ್ಲ. ವಿದೇಶದಿಂದ ಆಮದು ಮಾಡಿಕೊಂಡರೂ ಸರಿ, ರೆಮ್‌ಡೆಸಿವಿರ್ ಕೊರತೆಯಿಂದ ಜೀವ ಹೋಯಿತು ಎನ್ನುವ ಮಾತು ಕೇಳಿಬಾರದು. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕು. ದೇಶೀಯ ಅಥವಾ ಜಾಗತಿಕವಾಗಿ ಯಾವುದೇ ಕಂಪನಿ ಆಗಿರಲಿ, ರೆಮ್‌ಡೆಸಿವಿರ್ ಖರೀದಿಗೆ ಜಾಗತಿಕ ಟೆಂಡರ್ ಕರೆಯಬೇಕು ಸೂಚಿಸಿದರು.
ಇದೇ ವೇಳೆ ಖಾಸಗಿ ಆಸ್ಪತ್ರೆಗಳ ಬಿಲ್ ಬಾಕಿ ಇದ್ದರೆ ತಕ್ಷಣವೇ ಚುಕ್ತಾ ಮಾಡಿ. ಹಾಗೆಯೇ ಕೋವಿಡ್ ಯೋಧರಾಗಿ ಕೆಲಸ ಮಾಡುತ್ತಿರುವ ಯಾರ ವೇತನವೂ ತಡವಾಗಬಾರದು ಎಂದು ಮುಖ್ಯಕಾರ್ಯದರ್ಶಿಗಳಿಗೆ ಇದೇ ವೇಳೆ ತಿಳಿಸಿದರು.
ರಾಟ್‌ಕಿಟ್ ಖರೀದಿಸಿ:
ವ್ಯಕ್ತಿಯ ಸ್ಯಾಂಪಲ್ ಸ್ವೀಕರಿಸಿದ ಐದು ನಿಮಿಷದಲ್ಲಿ ಫಲಿತಾಂಶ ಕೊಡುವ ರಾಟ್‌ಕಿಟ್‌ಗಳನ್ನು ಎಷ್ಟುಅಗತ್ಯವೋ ಅಷ್ಟೂಖರೀದಿ ಮಾಡಬೇಕು. ಈ ಕಿಟ್‌ಗೆ ಐಸಿಎಂಆರ್ ಕೂಡ ಮಾನ್ಯತೆ ನೀಡಿದೆ. ರೋಗ ಲಕ್ಷಣಗಳಿದ್ದರೆ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು ಎಂದು ಇದೇ ವೇಳೆ ಉಪಮುಖ್ಯಮಂತ್ರಿ ಹೇಳಿದರು.
ಸಭೆಯಲ್ಲಿ ಕಾರ್ಯಪಡೆ ಸದಸ್ಯರು ಮತ್ತು ಸಚಿವರಾದ ಡಾ.ಕೆ.ಸುಧಾಕರ್, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಸಿ.ಸಿ.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇತರರು ಭಾಗವಹಿಸಿದ್ದರು.
ಸುಲಿಗೆಗಿಳಿದರೆ ಗೂಂಡಾ ಕಾಯ್ದೆ
ಯಾವುದೇ ಖಾಸಗಿ ಆಸ್ಪತ್ರೆ ಹಾಸಿಗೆ, ಔಷಧಿ, ಆಮ್ಲಜನಕ, ರೆಮ್‌ಡೆಸಿವಿರ್ ಸೇರಿದಂತೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆಯಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಯಾರಾದರೂ ಹೆಚ್ಚು ಶುಲ್ಕ ವಸೂಲಿ ಮಾಡಿದರೆ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ
ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆ
ಯಾವುದೇ ಖಾಸಗಿ ಆಸ್ಪತ್ರೆಯು ಹಾಸಿಗೆ, ಔಷಧಿ, ಆಮ್ಲಜನಕ, ರೆಮ್‌ಡೆಸಿವಿರ್ ಸೇರಿದಂತೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆಯಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಯಾರಾದರೂ ಹೆಚ್ಚು ಶುಲ್ಕ ವಸೂಲಿ ಮಾಡಿದರೆ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯ ಇರುವ ತಮ್ಮ ಮತ್ತು ಸರ್ಕಾರದ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್ ಪೋರ್ಟಲ್‌ನಲ್ಲಿ ಆಪ್‌ಡೇಟ್ ಮಾಡಬೇಕು. ಹಾಸಿಗೆಗಳ ಲೈವ್ ಸ್ಟೇಟಸ್ ಇರಬೇಕು. ಅಧಿಕಾರಿಗಳು ಇದರ ಮೇಲೆ ನಿಗಾ ಇಡಬೇಕು ಎಂದು ಅಶ್ವತ್ಥ ನಾರಾಯಣ ನಿರ್ದೇಶನ ನೀಡಿದರು.
ಉಳಿದಂತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್‌ಗಳು, ವೈದ್ಯರು, ನರ್ಸ್‌ಗಳಿಗೆ ಸೋಂಕು ತಗುಲುತ್ತಿದ್ದು, ಆಯಾ ಜಿಲ್ಲೆಗಳ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೋವಿಡ್ ಕರ್ತವ್ಯಕ್ಕೆ ತಕ್ಷಣಕ್ಕೆ ನಿಯೋಜನೆ ಮಾಡಬೇಕು. ಅಲ್ಲದೇ, ವೈದ್ಯಕೀಯ ಸಿಬ್ಬಂದಿ ಬಳಕೆ ಮಾಡುವ ವಸ್ತುಗಳ ಕೊರತೆಯಾಗಬಾರದು. ಮಾಸ್ಕ್ ಪಿಪಿಎ ಕಿಟ್, ಸ್ಯಾನಿಟೈಸರ್ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸದಾ ಲಭ್ಯ ಇರಬೇಕು ಎಂದು ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
