ಬೆಂಗಳೂರು ನಗರ ಜಿಲ್ಲೆಯಲ್ಲಿ ಮಿಷನ್ ವಾತ್ಸಲ್ಯ ಯೋಜನೆಯಡಿ, ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗಾಗಿ ಎರಡು ಬಾಲಮಂದಿರಗಳನ್ನು ಪ್ರಾರಂಭಿಸಲಾಗಿದೆ. ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಟ್ರಾನ್ಸ್‌ಜೆಂಡರ್ ಮಕ್ಕಳ ಪುನರ್ವಸತಿಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ಬೆಂಗಳೂರು (ಮಾ.14): ಮಿಷನ್ ವಾತ್ಸಲ್ಯ ಯೋಜನೆಯಡಿ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ (ಟ್ರಾನ್ಸ್ ಜೆಂಡರ್) ಮಕ್ಕಳಿಗಾಗಿ ಎರಡು ಬಾಲಮಂದಿರಗಳನ್ನು ಪ್ರಾರಂಭಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಅಧ್ಯಕ್ಷರಾದ ಜಿ.ಜಗದೀಶ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಂರಕ್ಷಣೆ ಮತ್ತು ಸಮನ್ವಯ ಸಮಿತಿ (ಡಿಸಿಪಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಮುಖಾಂತರ ಮಿಷನ್ ವಾತ್ಸಲ್ಯ ಯೋಜನೆಯಡಿಯಲ್ಲಿ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೆಳವಣಿಗೆ ಹಿತದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಟ್ರಾನ್ಸ್ ಜೆಂಡರ್ ಮಕ್ಕಳಿಗಾಗಿ ಎರಡು ಬಾಲಮಂದಿರಗಳನ್ನು ಪ್ರಾರಂಭಿಸಲು ಸರ್ಕಾರವು ಅನುಮೋದನೆ ನೀಡಿರುತ್ತದೆ. ಅದರಂತೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಥಮವಾಗಿ ಚಾಲನೆಗೊಳಿಸಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತ (ಟ್ರಾನ್ಸ್ ಜೆಂಡರ್) ಮಕ್ಕಳಿಗೆ ಪಾಲನೆ ಮತ್ತು ಪೋಷಣೆ ಹಾಗೂ ಪುನರ್ವಸತಿ ಅವಶ್ಯಕತೆ ಇರುವಂತಹವರು ಸರ್ಕಾರದಿಂದ ಅನುಷ್ಠಾನಗೊಳಿಸುತ್ತಿರುವ ಟ್ರಾನ್ಸ್ ಜೆಂಡರ್ ಬಾಲಕರ ಮತ್ತು ಟ್ರಾನ್ಸ್ ಜೆಂಡರ್ ಬಾಲಕಿಯರ ಬಾಲಮಂದಿರಗಳಿಗೆ ಮಕ್ಕಳನ್ನು ದಾಖಲಿಸಿದ್ದಲ್ಲಿ, ಅಂತಹ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಶಕ್ತಿ ಯೋಜನೆ ಮೇಲೆ ಲಿಂಗ ತಾರತಮ್ಯ ಕೇಸ್; ಮಹಿಳೆಯರಿಗೆ ಗ್ಯಾರಂಟಿ ಸ್ಥಗಿತ ಮಾಡುತ್ತಾ ಸರ್ಕಾರ!

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ನಗರ ಕೇಂದ್ರ, ಕಿದ್ವಾಯಿ ಆಸ್ಪತ್ರೆ ಹಿಂಭಾಗ, ಡಾ. ಎಮ.ಹೆಚ್ ಮಲಗೌಡ ರಸ್ತೆ, ಬೆಂಗಳೂರು 580029 ಅಥವಾ ದೂರವಾಣಿ ಸಂಖ್ಯೆ: 080-29523458 ಅನ್ನು ಸಂಪರ್ಕಿಸಬಹುದಾಗಿದೆ. ಈ ಬಾಲ ಮಂದಿರಗಳ ಉಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.