ಎಸ್ಎಂ ಕೃಷ್ಣ ವಿಧಿವಶ, ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಸರ್ಕಾರ!
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ವಿಧಿವಶರಾದ ಹಿನ್ನಲೆಯಲ್ಲಿ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಬೆಂಳೂರು(ಡಿ.10) ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ 92ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ಎಂ ಕೃಷ್ಣ ತಮ್ಮ ಬೆಂಗಳೂರಿನ ಸದಾಶಿವನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಇದರ ಹಿನ್ನಲೆಯಲ್ಲಿ ಮೂರು ದಿನದಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ. ಇದೇ ವೇಳೆ ನಾಳೆ(ಡಿ.11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿ), ಸರ್ಕಾರಿ ಕಚೇರಿ ಸೇರಿದಂತೆ ರಾಜ್ಯಾದ್ಯಂತ ರಜೆ ಘೋಷಣೆ ಮಾಡಲಾಗಿದೆ.
ಎಸ್ಎಂ ಕೃಷ್ಣ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಡಿಕೆ ಶಿವಕುಮಾರ್ ಬಳಿಕ ಮಾಧ್ಯಮದ ಜೊತೆ ಅಂತ್ಯಸಂಸ್ಕಾರ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ನಾಳೆ(ಡಿ.11) ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದ್ದಾರೆ. ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಶೋಕಾಚರಣೆ ಇರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಸ್ಎಂ ಕೃಷ್ಣ ವಿಧಿವಶರಾದ ಬೆನ್ನಲ್ಲೇ ಹುಟ್ಟೂರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದೆ.
ಅಳಿಯ ಸಿದ್ಧಾರ್ಥ ಸಾವಿನಿಂದ ತೀವ್ರ ನೊಂದಿದ್ದ ಎಸ್ಎಂ ಕೃಷ್ಣ, ಆಘಾತ ನೀಡಿದ ಘಟನೆ!
ನಾಳೆ ಬೆಳಗ್ಗೆ 8 ಗಂಟೆ ವರೆಗೆ ಬೆಂಗಳೂರಿನ ಮನೆಯಲ್ಲಿ ಎಸ್ಎಂ ಕೃಷ್ಣ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಬಳಿಕ 10 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆ ವರೆಗೂ ಎಸ್ಎಂ ಕೃಷ್ಣ ಹುಟ್ಟೂರು ಮದ್ದೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ 11ರ ಮಧ್ಯಾಹ್ನ 3 ಗಂಟೆ ನಂತರ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದ ಎಸ್ಎಂ ಕೃಷ್ಣ ದಕ್ಷ ಆಡಳಿತ ನೀಡಿದ್ದಾರೆ. ಮಗಳು ಹಾಗೂ ಧರ್ಮ ಪತ್ನಿ ಫೋನ್ ಮಾಡಿ ನೀಡಿದ ತಕ್ಷಣವೇ ಬೆಂಗಳೂರಿಗೆ ಹೊರಟು ಬಂದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಧಿವೇಶನ ಸಂಬಂಧ ಬೆಳಗಾವಿಯಲ್ಲಿದ್ದ ಡಿಕೆ ಶಿವಕುಮಾರ್ ಬೆಂಗಳೂರಿಗೆ ಆಗಮಿಸಿ ಎಂಎಸ್ ಕೃಷ್ಣ ಅಂತಿಮ ದರ್ಶನ ಪಡೆದಿದ್ದಾರೆ.
ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಧೀಮಂತ ನಾಯಕ ಎಸ್ಎಂ ಕೃಷ್ಣ, ಇವತ್ತು ನಾವು ನೋಡುತ್ತಿರುವ ಹಾಗೂ ಅನುಭವಿಸುತ್ತಿರುವ ಬೆಂಗಳೂರು ಎಸ್ಎಂ ಕೃಷ್ಣ ಅವರ ಕೊಡುಗೆಯಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
1999 ರಿಂದ 2004ರ ವರೆಗೆ ಎಸ್ಎಂ ಕೃಷ್ಣ ಕರ್ನಾಟಕ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಈ ವೇಳೆ ಬೆಂಗಳೂರನ್ನು ಐಟಿ ಸಿಟಿಯನ್ನಾಗಿ ಮಾರ್ಪಡಿಸಿದ್ದರು. ಟೆಕ್ ಕ್ಷೇತ್ರದಲ್ಲಿ ಬೆಂಗಳೂರನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಎಸ್ಎಂ ಕೃಷ್ಣಗೆ ಸಲ್ಲಲಿದೆ. ಯುಪಿಎ ಸರ್ಕಾರದಲ್ಲಿ ಎಸ್ಎಂ ಕೃಷ್ಣ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2004ರಿಂದ 2008ರ ವರಗೆ ಮಹಾರಾಷ್ಟ್ರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನಾಗಿ, ನಾಯಕನಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲಾರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಜೀವನದ ಬಹುತೇಕ ಸಮಯ ಕಾಂಗ್ರೆಸ್ ಸಮಯದಲ್ಲಿ ಕಳೆದಿದ್ದ ಎಸ್ಎಂ ಕೃಷ್ಣ 2017ರಲ್ಲಿ ಬಿಜೆಪಿ ಸೇರಿಕೊಂಡು ಅಚ್ಚರಿ ಮೂಡಿಸಿದ್ದರು.
ರಾಜಕೀಯ ಜೀವನದ ಕೊನೆಯ ಕಾಲವನ್ನು ಬಿಜೆಪಿಯಲ್ಲಿ ಕಳೆದ ಎಸ್ಎಂಸ್ ಕೃಷ್ಣ ವಯಸ್ಸು ಹಾಗೂ ಆರೋಗ್ಯ ಕಾರಣದಿಂದ ಸಕ್ರಿಯವಾಗಿರಲು ಸಾಧ್ಯವಾಗಲಿಲ್ಲ. ಎಸ್‌ಎಂ ಕೃಷ್ಣ ಬಿಜೆಪಿ ಸೇರ್ಪಡೆಗೆ ಪರ ವಿರೋಧ, ಹಲವು ಕಾರಣಗಳನ್ನು ಚರ್ಚಿಸಲಾಗುತ್ತದೆ. ಆದರೆ ಪಕ್ಷಾತೀತವಾಗಿ ಎಸ್ಎಂ ಕೃಷ್ಣ ಗೌರವಕ್ಕೆ ಪಾತ್ರರಾಗಿದ್ದಾರೆ ಅನ್ನೋದರಲ್ಲಿ ಎರಡು ಮಾತಿಲ್ಲ.