ಕೊರೋನಾದಿಂದ ಗುಣಮುಖರಾದವರಿಗೆ ಆರೈಕೆ ಭತ್ಯೆ ಘೋಷಣೆ: ಕಂಡಿಷನ್ ಅಪ್ಲೈ..!
ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ರಾಜ್ಯ ಸರ್ಕಾರ ಆರೈಕೆ ಭತ್ಯೆ ಘೋಷಿಸಿದೆ. ಆದ್ರೆ, ಕೊರೋನಾ ವಾಸಿಯಾದವರು ಒಂದು ಕೆಲಸ ಮಾಡಬೇಕು. ಏನದು..? ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಜುಲೈ.15): ಕೊವಿಡ್ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದರೆ ಪ್ರತಿಯೊಬ್ಬರಿಗೂ 5 ಸಾವಿರ ರೂ. ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಪ್ಲಾಸ್ಮಾ ದಾನ ಮಾಡಿದರೆ ಸರ್ಕಾರ 5,000 ರೂಪಾಯಿ ಆರೈಕೆ ಭತ್ಯೆ ನೀಡಬೇಕೆಂದು ಕೋವಿಡ್ ಮಾನವ ಶಕ್ತಿ ಮತ್ತು ತರಬೇತಿ ಟಾಸ್ಕ್ ಫೋರ್ಸ್ ಈ ಹಿಂದೆ ಶಿಫಾರಸು ಮಾಡಿತ್ತು. ಇದೀಗ, ಈ ಶಿಫಾರಸ್ಸಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಪ್ಲಾಸ್ಮಾ ದಾನಿಗಳಿಗೆ ಲಕ್ಷಗಟ್ಟಲೆ ಆಫರ್!
ಕೊರೋನಾ ಸೋಂಕಿನಿಂದ ಚೇತರಿಸಿಕೊಳ್ಳಲು ಪ್ಲಾಸ್ಮಾ ಥೆರಪಿ ಮಾಡಲಾಗುತ್ತಿದ್ದು, ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೋಂಕು ಮುಕ್ತರಾದವರು 14 ದಿನಗಳ ಬಳಿಕ ತಮ್ಮ ರಕ್ತದಲ್ಲಿನ ಪ್ಲಾಸ್ಮಾ ಕಣಗಳನ್ನು ನೀಡಬಹುದು. ಪ್ಲಾಸ್ಮಾ ತೆಗೆದುಕೊಳ್ಳುವವರ ರಕ್ತದ ಗುಂಪು ಒಂದೇ ಆಗಿರಬೇಕು ಎಂದು ಸ್ಪಷ್ಟಪಡಿಸಿದರು.
ಸಕ್ರೀಯ ರೋಗಿಗಳ ಚಿಕಿತ್ಸೆಗೆ ಈಗಾಗಲೇ ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾ ಸಹಕಾರಿಯಾಗಲಿದೆ. ಹೀಗಾಗಿ, ಸೋಂಕಿನಿಂದ ಗುಣಮುಖರಾದವರು ಡಿಸ್ಚಾರ್ಜ್ ಆದ 14 ರಿಂದ 28 ದಿನಗಳ ಒಳಗಾಗಿ ಪ್ಲಾಸ್ಮಾ ದಾನ ಮಾಡಬಹುದು. ಪ್ಲಾಸ್ಮಾ ದಾನ ಮಾಡಿದವರಿಗೆ ಈ ಆರೈಕೆ ಭತ್ಯೆಯ ಮೂಲಕ ಉತ್ತಮ ಗುಣಮಟ್ಟದ ಆಹಾರ ಖರೀದಿಸಲು ನೆರವಾಗಲಿದೆ ಎಂದು ಹೇಳಿದರು.