ರಾತ್ರಿ ಕರ್ಫ್ಯೂ ಇಡೀ ರಾಜ್ಯಕ್ಕೆ ವಿಸ್ತರಿಸಿ| ಬೆ.10ರಿಂದ ಸಂಜೆ 5 ‘ಕರ್ಫ್ಯೂ ರೀತಿ ನಿರ್ಬಂಧ’ ತನ್ನಿ| ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಮಿತಿ ತಜ್ಞರ ಶಿಫಾರಸು

ಬೆಂಗಳೂರು(ಏ.15): ಕೋವಿಡ್‌ ಪ್ರಕರಣ ಹೆಚ್ಚಿರುವ ರಾಜ್ಯದ 8 ನಗರಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ವಿಧಿಸಲಾಗಿರುವ ‘ಕೊರೊನಾ ರಾತ್ರಿ ಕರ್ಫ್ಯೂ’ವನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಹಾಗೂ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ‘ರಾತ್ರಿ ಕರ್ಫ್ಯೂ ಮಾದರಿಯಲ್ಲಿ ನಿರ್ಬಂಧ’ ವಿಧಿಸಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇದೇ ವೇಳೆ, ಅಗತ್ಯ ವಸ್ತು ಖರೀದಿಗೆ ದಿನಕ್ಕೆ 2 ಅವಧಿ ನಿಗದಿಪಡಿಸುವಂತೆ ಸಮಿತಿ ಇನ್ನೊಂದು ಮಹತ್ವದ ಶಿಫಾರಸು ಮಾಡಿದೆ. ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬೆಳಗಿನ 5ರಿಂದ 10 ಗಂಟೆವರೆಗೆ ಮತ್ತು ಸಂಜೆ 5ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಬೇಕು. ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ‘ರಾತ್ರಿ ಕರ್ಫ್ಯೂ ಮಾದರಿಯಲ್ಲಿ ನಿರ್ಬಂಧ’ ವಿಧಿಸಬೇಕು. ಈ ಮೂಲಕ ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಬಹುದು ಎಂಬ ಸಲಹೆಯನ್ನು ಸಮಿತಿ ನೀಡಿದೆ.

ಲಾಕ್‌ಡೌನ್‌ ಬೇಡ:

ಆದರೆ, ಲಾಕ್‌ಡೌನ್‌ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಸಮಿತಿ, ಜನಸಂದಣಿ ನಿಯಂತ್ರಿಸಲು ಜನ ಹೆಚ್ಚು ಸೇರುವ ಪ್ರದೇಶ ಹಾಗೂ ಮಾರುಕಟ್ಟೆಗಳಲ್ಲಿ ಜನ ಗುಂಪುಗೂಡದಂತೆ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಬೇಕು. ಹೊಟೇಲ್‌, ಬಾರ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಮಾತ್ರ ಅವಕಾಶ ನೀಡಬೇಕು. ಅಂತಾರಾಜ್ಯ ಗಡಿಗಳಲ್ಲಿ ಮುಂದಿನ ಒಂದೂವರೆ ತಿಂಗಳು ಕಟ್ಟೆಚ್ಚರ ವಹಿಸಬೇಕು ಎಂದು ಸಮಿತಿ ತಿಳಿಸಿದೆ ಎನ್ನಲಾಗಿದೆ.

18ರಂದು ಚರ್ಚೆ:

ರಾಜ್ಯದ ಕೋವಿಡ್‌ ಪರಿಸ್ಥಿತಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ತಿಂಗಳ 18ರಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಮಧ್ಯೆ ಸರ್ವಪಕ್ಷಗಳ ಸಭೆಗೂ ಮುಂಚಿತವಾಗಿ ತಾಂತ್ರಿಕ ಸಲಹಾ ಸಮಿತಿ ಇನ್ನೊಂದು ವರದಿ ನೀಡುವ ಸಾಧ್ಯತೆಯೂ ಇದೆ.

ಚಿಕಿತ್ಸೆ ಕುರಿತ ಶಿಫಾರಸುಗಳು:

ಆಸ್ಪತ್ರೆಗಳಲ್ಲಿ ಗುಣಮುಖರಾಗುತ್ತಿರುವ ರೋಗಿಗಳನ್ನು ಕೊರೋನಾ ಕೇರ್‌ ಸೆಂಟರ್‌ಗೆ ವರ್ಗಯಿಸಬೇಕು. ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ಆಕ್ಸಿಜನ್‌, ಬೆಡ್‌, ಔಷಧಗಳ ಪೂರೈಕೆ ಮತ್ತು ದಾಸ್ತಾನು ಮಾಡಬೇಕು. ಟೆಲಿ ಐಸಿಯು, ಟೆಲಿ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಬೇಕು. ಹೋಮ್‌ ಐಸೋಲೇಷನ್‌ನಲ್ಲಿರುವವರಿಗೆ ಮೆಡಿಕಲ್‌ ಕಿಟ್‌. ಆಕ್ಸಿಮೀಟರ್‌ ಒದಗಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ರೆಮ್‌ಡೆವೆರ್‌ ಪೂರೈಕೆ ಮಾಡಬೇಕು. ವೈದ್ಯರು, ಸ್ಟಾಫ್‌ ನರ್ಸ್‌ಗಳಿಗೆ ಕೊರೋನಾ ಮುಚ್ಚೆಚ್ಚರಿಕೆ ನಡೆಗಳ ಬಗ್ಗೆ ತರಬೇತಿ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ಎರಡು ಆಂಬ್ಯುಲೆನ್ಸ್‌ ನಿಯೋಜಿಸಬೇಕು. ಬೆಂಗಳೂರು ನಗರದಲ್ಲಿ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಪ್ರೆರೇಪಿಸಬೇಕು ಎಂದು ಸಮಿತಿ ಹೇಳಿದೆ.

ಸರ್ಕಾರಕ್ಕೆ ತಜ್ಞರು ಮಾಡಿದ ಶಿಫಾರಸು

- ಅಗತ್ಯ ವಸ್ತು ಖರೀದಿಗೆ ಬೆಳಗ್ಗೆ, ಸಂಜೆ ತಲಾ 5 ತಾಸು ಮಾತ್ರ ಅವಕಾಶ

- ಬೆಳಗ್ಗೆ 5ರಿಂದ 10, ಸಂಜೆ 5ರಿಂದ ರಾತ್ರಿ 10ರವರೆಗೆ ಮಾತ್ರ ಖರೀದಿ

- ಈ ಮೂಲಕ ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು

- ಲಾಕ್‌ಡೌನ್‌ ಜಾರಿಗೊಳಿಸುವುದು ಬೇಡ, ಆದರೆ ಜನಸಂದಣಿ ತಪ್ಪಿಸಬೇಕು

- ಜನ ಗುಂಪುಗೂಡದಂತೆ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಬೇಕು

- ಹೋಟೆಲ್‌, ಬಾರ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಬೇಕು

- ಅಂತಾರಾಜ್ಯ ಗಡಿಗಳಲ್ಲಿ ಮುಂದಿನ ಒಂದೂವರೆ ತಿಂಗಳು ಕಟ್ಟೆಚ್ಚರ ವಹಿಸಬೇಕು