ಸರ್ಕಾರಿ ಕಚೇರಿಯಲ್ಲಿ ಫೋಟೊ , ವೀಡಿಯೋ ಚಿತ್ರೀಕರಣ ಬಂದ್ ವಿಚಾರಕ್ಕೆ ಸಂಬಂಧಿಸಿ ಆದೇಶ ವಾಪಸ್ ಪಡೆದ ಪತ್ರದಲ್ಲಿ ಪ್ರತಿಯೊಂದು ಅಕ್ಷರವೂ ತಪ್ಪು ತಪ್ಪಾಗಿ ಟೈಪ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು(ಜು.16): ರಾಜ್ಯದ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಸರ್ಕಾರಿ ಕಚೇರಿಯಲ್ಲಿ ಫೋಟೊ , ವೀಡಿಯೋ ಚಿತ್ರೀಕರಣ ಬಂದ್ ವಿಚಾರಕ್ಕೆ ಸಂಬಂಧಿಸಿ ಆದೇಶ ವಾಪಸ್ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ವಿಧಾನಸೌಧಕ್ಕೆ ಬಂದು ನಿದ್ದೆ ಗಣ್ಣಿನಲ್ಲಿ ಅಧಿಕಾರಿ ಆದೇಶ ವಾಪಸ್ ಸೂಚನೆಯನ್ನು ಟೈಪ್ ಮಾಡಿದ್ರಾ ಅಥವಾ ಅಧಿಕಾರಿಗೆ ಕನ್ನಡ ಟೈಪಿಂಗ್ ಸರಿಯಾಗಿ ಬರುತ್ತಿಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಯಾಕೆಂದರೆ ಚಿತ್ರೀಕರಣ ಬ್ಯಾನ್ ಆದೇಶ ವಾಪಸ್ ಪಡೆದಿರುವ ಪತ್ರದಲ್ಲಿ ಪ್ರತಿಯೊಂದು ಅಕ್ಷರವೂ ತಪ್ಪು ತಪ್ಪಾಗಿ ಟೈಪ್ ಮಾಡಲಾಗಿದೆ.
ಆದೇಶದಲ್ಲಿ ಅಕ್ಷರ ದೋಷಗಳು ಇಂತಿದೆ.
ನಡವಳಿಗಳು ( ನಡಾವಳಿಗಳು )
ಪ್ರಸತಾವನೆ ( ಪ್ರಸ್ತಾವನೆ)
ಮೇಲೇ ( ಮೇಲೆ )
ಬಾಗ - 1 ( ಭಾಗ - 1)
ಕರ್ನಾಟಾ ರಾಜ್ಯಪಾಲರ ( ಕರ್ನಾಟಕ )
ಕರ್ನಾಟಾ ಸರ್ಕಾರ ( ಕರ್ನಾಟಕ ಸರ್ಕಾರ )
ಇನ್ನು ಸಾಮಾಜಿಕ ಜಾಲತಾಣದಲ್ಲಿ ಆದೇಶ ಪತ್ರದ ತಪ್ಪಿನ ಬಗ್ಗೆ ವ್ಯಾಪಕ ಚರ್ಚೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಲಾಖೆ ತಪ್ಪಾದ ಪದವನ್ನು ಸರಿಪಡಿಸಿ ಮತ್ತೆ ಹೊಸದಾಗಿ ಆದೇಶ ಪತ್ರ ಬಿಡುಗಡೆಗೊಳಿಸಿದೆ.
ರಾಜ್ಯದ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡುವುದನ್ನು ನಿಷೇಧಿಸಿ ಸರ್ಕಾರ ಜುಲೈ 15 ರಂದು ಆದೇಶ ಹೊರಡಿಸಿತ್ತು. ತನ್ಮೂಲಕ ಲಂಚ ಪಡೆಯುವುದು, ಲಂಚಕ್ಕೆ ಬೇಡಿಕೆ ಇಡುವುದು, ಸೇವೆ ನೀಡದೆ ಸಾರ್ವಜನಿಕರೊಂದಿಗೆ ಉಡಾಫೆ ವರ್ತನೆ ತೋರುವುದು ಸೇರಿದಂತೆ ಸರ್ಕಾರಿ ನೌಕರರು ಮಾಡುತ್ತಿದ್ದರು ಎನ್ನಲಾದ ತಪ್ಪುಗಳನ್ನು ವಿಡಿಯೋ ಅಥವಾ ಫೋಟೋ ಮೂಲಕ ಸೆರೆಹಿಡಿಯುವುದಕ್ಕೆ ತಡೆ ಬಿದ್ದಂತಾಗಿತ್ತು. ಶುಕ್ರವಾರ ಈ ಬಗ್ಗೆ ಆದೇಶ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ತೆಗೆಯುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿತ್ತು. ಈ ಆದೇಶ ಹೊರಬರುತ್ತಿದ್ದಂತೆಯೇ ಸರಕಾರದ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಸರಕಾರ ಈ ಆದೇಶವನ್ನು ಹಿಂದಕ್ಕೆ ಪಡೆದಿದೆ.
ನೌಕರರ ಸಂಘದ ಮನವಿ ಏನು: ನೌಕರರ ಸಂಘವು ಸರ್ಕಾರಕ್ಕೆ ಪತ್ರ ಬರೆದು, ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಕೆಲವರು ಕಚೇರಿಯ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ, ವಿಡಿಯೋ ಮಾಡದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿತ್ತು.
ಸಿದ್ದರಾಮಯ್ಯ ಕಿಡಿ: ಸರ್ಕಾರಿ ಕಚೇರಿಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡದಂತೆ ನಿಷೇಧಿಸಿರುವುದು ಸರ್ಕಾರದ ಹೊಣಗೇಡಿತನದ ಕ್ರಮ. ಇನ್ನು ಮುಂದೆ ಧೈರ್ಯವಾಗಿ ಭ್ರಷ್ಟಾಚಾರ ನಡೆಸಲು ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.
