ಟ್ಯಾಕ್ಸಿ ಪ್ರಯಾಣ ಇನ್ನು ಭಾರೀ ದುಬಾರಿ
ರಾಜ್ಯದಲ್ಲಿ ಸಾಮಾನ್ಯ ಜನರು ನಿತ್ಯ ಬಳಸುವ ಟ್ಯಾಕ್ಸಿ ದರ ಏರಿಕೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಟ್ಯಾಕ್ಸಿ ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ.
ಬೆಂಗಳೂರು (ಏ.02): ಧನ ದರ ಏರಿಕೆ, ಬಿಡಿಭಾಗಗಳ ದರ ಹೆಚ್ಚಳ, ನಿರ್ವಹಣೆ ದುಬಾರಿ ಸೇರಿದಂತೆ ವಿವಿಧ ಕಾರಣಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಟ್ಯಾಕ್ಸಿ ಚಾಲಕರ ನೆರವಿಗೆ ಸರ್ಕಾರ ಬಂದಿದ್ದು, ಪ್ರಯಾಣ ದರವನ್ನು ಪರಿಷ್ಕರಿಸಿದೆ. ಹೊಸ ಪರಿಷ್ಕೃತ ದರ ತಕ್ಷಣದಿಂದ ಜಾರಿಗೆ ಬರಲಿದೆ.
ಮೂರು ವರ್ಷದ ಬಳಿಕ ಟ್ಯಾಕ್ಸಿ ದರ ಪರಿಷ್ಕರಿಸಿದ್ದು, ವಾಹನಗಳ ಮೌಲ್ಯವನ್ನು ಆಧರಿಸಿ ‘ಎ’, ‘ಬಿ’, ‘ಸಿ’, ‘ಡಿ’ ಎಂದು ಟ್ಯಾಕ್ಸಿಗಳನ್ನು ವರ್ಗೀಕರಿಸಿ ದರ ಪರಿಷ್ಕರಿಸಲಾಗಿದೆ. ಅಗ್ರಿಗೇಟರ್ ನಿಯಮದಡಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ (ಓಲಾ, ಉಬರ್, ಸಿಟಿ ಟ್ಯಾಕ್ಸಿ, ಕೆಎಸ್‌ಟಿಡಿಸಿ ಟ್ಯಾಕ್ಸಿ ಇತ್ಯಾದಿ) ಈ ಪರಿಷ್ಕೃತ ಏಕರೂಪದ ದರ ಅನ್ವಯವಾಗಲಿದೆ. ಪರಿಷ್ಕೃತ ಪ್ರಯಾಣ ದರದ ಅನ್ವಯ ಮೊದಲ 4 ಕಿ.ಮೀ.ಗೆ ಕನಿಷ್ಠ 31 ರು. ಹಾಗೂ ಗರಿಷ್ಠ 70 ರು. ಹೆಚ್ಚಳವಾಗಿದೆ. ನಂತರದ ಪ್ರತಿ ಕಿ.ಮೀ.ಗೆ ಕನಿಷ್ಠ ದರ 7 ರು. ಹಾಗೂ ಗರಿಷ್ಠ ದರ 9 ರು. ಏರಿಕೆಯಾಗಿದೆ.
ಸಫಾರಿ ಕಾರಿನ ಅಂದ ಜೊತೆಗೆ ಸುರಕ್ಷತೆಗಾಗಿ ಸೆರಾಮಿಕ್ ಕೋಟಿಂಗ್ ಪರಿಚಯಿಸಿದ ಟಾಟಾ! ..
ಕಾಯುವಿಕೆ ಶುಲ್ಕ ಪ್ರತಿ 15 ನಿಮಿಷಕ್ಕೆ 10 ರು.: ಕಾಯುವಿಕೆ ದರ ಮೊದಲಿನ 20 ನಿಮಿಷದ (ಪ್ರಸ್ತುತ 15 ನಿಮಿಷ) ವರೆಗೆ ಉಚಿತ, ನಂತರದ ಪ್ರತಿ 15 ನಿಮಿಷಕ್ಕೆ 10 ರು. ನಿಗದಿಪಡಿಸಬಹುದಾಗಿದೆ. ಸಮಯದ ಆಧಾರದಲ್ಲಿ (ಬೆಳಗ್ಗೆ, ಸಂಜೆ ಪೀಕ್ ಅವರ್) ಪ್ರಯಾಣಿಕರಿಂದ ಬೇರೆ ಬೇರೆ ರೀತಿಯ ದರ ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿಗೊಳಿಸಿರುವ ಪ್ರಯಾಣ ದರ ಮಾತ್ರ ಪಡೆಯಬೇಕು. ಜಿಎಸ್‌ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಿ.ಮೀ. ಆಧಾರದಲ್ಲಿ ನಿಗದಿಗೊಳಿಸಿರುವ ಪ್ರಯಾಣ ದರ ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪಡೆಯುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಶೀಘ್ರ ಆಟೋ ಪ್ರಯಾಣ ದರ ಏರಿಕೆ?
ರಾಜ್ಯ ಸರ್ಕಾರ ಟ್ಯಾಕ್ಸಿ ಪ್ರಯಾಣ ದರ ಪರಿಷ್ಕರಿಸಿದ ಬೆನ್ನ ಹಿಂದೆಯೇ ಶೀಘ್ರದಲ್ಲೇ ಆಟೋ ಪ್ರಯಾಣ ದರವನ್ನೂ ಪರಿಷ್ಕರಿಸುವ ಸಾಧ್ಯತೆಯಿದೆ. 2013ರಲ್ಲಿ ಕಡೆಯದಾಗಿ ಆಟೋ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಇಂಧನ, ಆಟೋ ಎಲ್‌ಪಿಜಿ ದರ ಏರಿಕೆಯಿಂದ ತತ್ತರಿಸಿರುವ ಆಟೋ ಚಾಲಕರು, ಪ್ರಯಾಣ ದರ ಪರಿಷ್ಕರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದಾರೆ. ಪ್ರಸ್ತುತ ಆಟೋ ಪ್ರಯಾಣ ದರ ಆರಂಭದ ಮೊದಲ 1.9 ಕಿ.ಮೀ.ಗೆ 25 ರು. ಹಾಗೂ ನಂತರದ ಪ್ರತಿ ಕಿ.ಮೀ.ಗೆ 13 ರು. ಪ್ರಯಾಣ ದರವಿದೆ. ಇದನ್ನು ಮೊದಲ ಎರಡು ಕಿ.ಮೀ.ಗೆ 36 ರು. ಹಾಗೂ ನಂತರದ ಪ್ರತಿ ಕಿ.ಮೀ.ಗೆ 15 ರು.ಗೆ ಹೆಚ್ಚಳಕ್ಕೆ ಆಟೋ ಚಾಲಕರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಹಿಂದಿನ ಟ್ಯಾಕ್ಸಿ ದರ
ಟ್ಯಾಕ್ಸಿ ವರ್ಗ ಟ್ಯಾಕ್ಸಿ ಮೌಲ್ಯ ಕನಿಷ್ಠ ದರ(ರು.) ಮೊದಲ 4 ಕಿ.ಮೀ. ನಂತರದ ಪ್ರತಿ ಕಿ.ಮೀ.ಗೆ ಕನಿಷ್ಠ ದರ(ರು.) ಗರಿಷ್ಠ ದರ(ರು.)
ಎ 16 ಲಕ್ಷ ರು. ಮೇಲ್ಪಟ್ಟು 80 20 45
ಬಿ 10 ಲಕ್ಷ ರು.ನಿಂದ 16 ಲಕ್ಷ ರು. 64 16 34
ಸಿ 5 ಲಕ್ಷ ರು.ನಿಂದ 10 ಲಕ್ಷ ರು.ಮೇಲ್ಪಟ್ಟು 48 12 24
ಡಿ 5 ಲಕ್ಷ ರು. ಮೇಲ್ಪಟ್ಟು 44 11 22
ಟ್ಯಾಕ್ಸಿ ಪರಿಷ್ಕೃತ ದರ
ಟ್ಯಾಕ್ಸಿ ವರ್ಗ ಟ್ಯಾಕ್ಸಿ ಮೌಲ್ಯ ಕನಿಷ್ಠ ದರ(ರು.) ಮೊದಲ 4 ಕಿ.ಮೀ. ನಂತರದ ಪ್ರತಿ ಕಿ.ಮೀ.ಗೆ ಕನಿಷ್ಠ ದರ(ರು.) ಗರಿಷ್ಠ ದರ(ರು.)
ಎ 16 ಲಕ್ಷ ರು. ಮೇಲ್ಪಟ್ಟು 150 27 54
ಬಿ 10 ಲಕ್ಷ ರು.ನಿಂದ 16 ಲಕ್ಷ ರು.ವರೆಗೆ 120 24 48
ಸಿ 5 ಲಕ್ಷ ರು.ನಿಂದ 10 ಲಕ್ಷ ರು. ವರೆಗೆ 100 21 42
ಡಿ 5 ಲಕ್ಷ ರು. ವರೆಗೆ 75 18 36