ಬೆಂಗಳೂರು[ಡಿ.22]: ರಾಜ್ಯದಲ್ಲಿ ಹದಿನೈದು ವರ್ಷಗಳಿಗಿಂತ ಹಳೆಯ 45,05,115 ವಾಹನಗಳು ಸಂಚರಿಸುತ್ತಿವೆ. ಹದಿನೈದು ವರ್ಷಗಳಿಗಿಂತ ಹಳೆಯ ವಾಹನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ಹಾಗೂ ರಸ್ತೆ ಅಪಘಾತ ತಪ್ಪಿಸಲು ಇವುಗಳನ್ನು ನಿಷೇಧಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.

ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 15 ವರ್ಷಗಳಿಗಿಂತ ಹಳೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲು ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಇಂತಹ 45 ಲಕ್ಷ ವಾಹನ ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.

ಇವುಗಳಲ್ಲಿ 31.50 ದ್ವಿಚಕ್ರ ವಾಹನ, 7.55 ಲಕ್ಷ ಕಾರು, 27,5331 ಜೀಪು, 23,114 ಆಮ್ನಿ ಹಾಗೂ ಬಸ್ಸು, ಟ್ರಾಕ್ಟರ್‌ಗಳು 1,19,343, ಟ್ರೈಲರ್‌ಗಳು 65,965, ನಿರ್ಮಾಣ ಸಾಮಗ್ರಿ ವಾಹನ 3,135, ಇತರೆ ವಾಹನ 14,920 ಸೇರಿ ಒಟ್ಟು 41.60 ಲಕ್ಷ ಸಾರಿಗೆಯೇತರ ವಾಹನಗಳಿವೆ. ಸರಕು ಸಾಗಣೆ ವಾಹನ 96,411, ಲಘು ಸರಕು ವಾಹನ 1.28 ಲಕ್ಷ, ಬಸ್ಸುಗಳು 21,096, ಟ್ಯಾಕ್ಸಿಗಳು 60,991, ಲಘು ಪ್ರಯಾಣಿಕರ ವಾಹನ 1.85 ಲಕ್ಷ, ಇವುಗಳಲ್ಲಿ 4.99 ಲಕ್ಷ ಸಾರಿಗೆ ವಾಹನಗಳಿವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹದಿನೈದು ವರ್ಷಕ್ಕೂ ಹಳೆಯ 16.37 ಲಕ್ಷ ವಾಹನಗಳು ಇವೆ.

ಬಿಎಂಟಿಸಿ ಹಾಗೂ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಹತ್ತು ವರ್ಷಗಳ ಮೇಲ್ಪಟ್ಟು ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ಆದರೆ, ಖಾಸಗಿಯವರು ಈ ನಿಯಮ ಪಾಲಿಸದ ಕಾರಣ ರಸ್ತೆ ಸುರಕ್ಷತೆಗೆ ಆದ್ಯತೆ ದೊರೆಯುತ್ತಿಲ್ಲ. ಹೀಗಾಗಿ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ನಿಷೇಧ ಹೇರಿಲು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

7,189 ಆಂಬ್ಯುಲೆನ್ಸ್‌!

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯ ಅಂಬ್ಯುಲೆನ್ಸ್‌ಗಳೇ 7,189 ಸಂಚರಿಸುತ್ತಿವೆ. ಇದರಲ್ಲಿ ಬೆಂಗಳೂರಿನಲ್ಲೇ 444 ಕಾರ್ಯ ನಿರ್ವಹಿಸುತ್ತಿವೆ. ತುರ್ತು ಸೇವೆಯ ವಾಹನಗಳಲ್ಲೂ ಇಷ್ಟುಸಂಖ್ಯೆಯ ಹಳೆಯ ವಾಹನಗಳು ಚಾಲ್ತಿಯಲ್ಲಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಏಕೀಕೃತ ನಗರ ಭೂ-ಸಾರಿಗೆ ಪ್ರಾಧಿಕಾರ ರಚನೆ?

ಬಿಜೆಪಿಯ ಅರವಿಂದ ಲಿಂಬಾವಳಿ ಅವರ ಪ್ರಶ್ನೆಗೆ ಉತ್ತರಿಸಿರುವ ಸಾರಿಗೆ ಸಚಿವ ತಮ್ಮಣ್ಣ, ಬೆಂಗಳೂರಿನಲ್ಲಿ ಸರಾಸರಿ 5 ಲಕ್ಷಕ್ಕೂ ಅಧಿಕ ವಾಹನಗಳು ಪ್ರತಿ ವರ್ಷ ನೋಂದಣಿಯಾಗುತ್ತಿದೆ. 2015-16ರಲ್ಲಿ 5,53,116, 2016-17ರಲ್ಲಿ 6,04,786 ಮತ್ತು 2017-18ರಲ್ಲಿ 5,73,122 ವಾಹನ ನೋಂದಣಿಯಾಗಿದೆ. ವಾಹನ ಸಂಚಾರ ಕಟ್ಟಣೆ ಕಡಿಮೆ ಮಾಡಲು ಸರ್ಕಾರ ವಿವಿಧ ಕ್ರಮ ತೆಗೆದುಕೊಳ್ಳುತ್ತಿದೆ. ಬೆಂಗಳೂರು ಏಕೀಕೃತ ನಗರ ಭೂ-ಸಾರಿಗೆ ಪ್ರಾಧಿಕಾರ ರಚಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದಿದ್ದಾರೆ.