ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದಶಕಗಳಿಂದ ಕಾಡುತ್ತಿರುವ ಎಂಡೋಸಲ್ಫಾನ್‌ ಮಾಹಿತಿ ಕಲೆಹಾಕಲು ಸರ್ಕಾರ ಸಿದ್ಧತೆ ನಡೆಸಿದೆ. 2015ರಲ್ಲಿ ಈ ಬಗ್ಗೆ ಸಮೀಕ್ಷೆ ನಡೆದ ಬಳಿಕ ರಾಜ್ಯ ಮಟ್ಟದಲ್ಲಿ ಸಮೀಕ್ಷೆ ನಡೆದಿರಲಿಲ್ಲ.

ಜಿ.ಡಿ.ಹೆಗಡೆ

ಕಾರವಾರ (ಅ.17): ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದಶಕಗಳಿಂದ ಕಾಡುತ್ತಿರುವ ಎಂಡೋಸಲ್ಫಾನ್‌ ಮಾಹಿತಿ ಕಲೆಹಾಕಲು ಸರ್ಕಾರ ಸಿದ್ಧತೆ ನಡೆಸಿದೆ. 2015ರಲ್ಲಿ ಈ ಬಗ್ಗೆ ಸಮೀಕ್ಷೆ ನಡೆದ ಬಳಿಕ ರಾಜ್ಯ ಮಟ್ಟದಲ್ಲಿ ಸಮೀಕ್ಷೆ ನಡೆದಿರಲಿಲ್ಲ. ಹೀಗಾಗಿ ಎಂಡೋಸಲ್ಫಾನ್‌ ಪೀಡಿತರಿಗೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿತ್ತು. ಜತೆಗೆ ಕಳೆದ 6-7 ವರ್ಷಗಳಲ್ಲಿ ಸಂತ್ರಸ್ತರ ಅಂಕೆ-ಸಂಖ್ಯೆ ಕೂಡ ಬದಲಾವಣೆಯಾಗಿದೆ. ಸರ್ಕಾರದ ವೈದ್ಯಕೀಯ ಸೌಲಭ್ಯ ನೀಡಲು ಕೂಡ ತೊಂದರೆ ಉಂಟಾಗುತ್ತಿತ್ತು. 

ಹೀಗಾಗಿ ಎಂಡೋಸಲ್ಫಾನ್‌ ಪೀಡಿತ ಈ ಮೂರು ಜಿಲ್ಲೆಗಳನ್ನು ಒಳಗೊಂಡು ಒಂದೇ ಮಾದರಿಯಲ್ಲಿ ರಾಜ್ಯ ಮಟ್ಟದಲ್ಲೇ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಸಮೀಕ್ಷೆಗಾಗಿಯೇ ಪ್ರತ್ಯೇಕ ಮಾರ್ಗಸೂಚಿ ನೀಡಲು ಈಗಾಗಲೇ ಸರ್ಕಾರ ತೀರ್ಮಾನಿಸಿದ್ದು, ಅಂಕೆ-ಸಂಖ್ಯೆ ಎಲ್ಲ ಕಡೆಯದ್ದು ಸಿಗುವಂತೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ದಾಪುರ ಈ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ಪ್ರದೇಶವಾಗಿದೆ. ಮೂರು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್‌ ಮೂಲಕ ರಾಜ್ಯದ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಭಾಗದ ಗೇರು ಬೆಳೆಯುವ ಪ್ರದೇಶದಲ್ಲಿ ಎಂಡೋಸಲ್ಫಾನ್‌ ಔಷಧಿ ಸಿಂಪಡಿಸಲಾಗಿತ್ತು. 

ಕಾರವಾರದಲ್ಲಿ ಮತ್ತೆ ಭಾಷಾ ವಿವಾದಕ್ಕೆ ಕಿಡಿ ಇಟ್ಟ ಮಾಜಿ ಸಚಿವ ಆನಂದ ಆಸ್ನೋಟೆಕರ್

ಆದರೆ ಇದು ಗೇರು ಗಿಡಕ್ಕೆ ಬಾಧಿಸುವ ಹುಳುಗಳನ್ನು ಕೊಂದು, ರೋಗ ವಾಸಿ ಮಾಡುವುದಕ್ಕಿಂತ ಮಾನವರಿಗೆ ಕಾಯಿಲೆ ತಂದೊಡ್ಡಿ ಪೀಡೆಯಾಗಿತ್ತು. ಜನಿಸುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ಧಿ ಮಾಂದ್ಯತೆ ಒಳಗೊಂಡು ವಿವಿಧ ಸಮಸ್ಯೆಗಳು ಕಾಡುತ್ತಿವೆ. ಸರ್ಕಾರದ ಸಮೀಕ್ಷೆ ಪ್ರಕಾರ ಶೇ.25ಕ್ಕಿಂತ ಕಡಿಮೆ ಅಂಗವಿಕಲತೆ ಇರುವವರು 10 ಪುರುಷರು, 16 ಮಹಿಳೆಯರು, 3 ಮಕ್ಕಳು ಒಟ್ಟು 29, ಶೇ.26ರಿಂದ 59ರಷ್ಟು ಅಂಗವಿಕಲತೆ ಪುರುಷರು-179, ಮಹಿಳೆಯರು-196, ಮಕ್ಕಳು-304, ಒಟ್ಟು 679, ಶೇ.60ರಷ್ಟು ಅಂಗವಿಕಲತೆ ಇರುವ ಪುರುಷರು 296, ಮಹಿಳೆಯರು 267, ಮಕ್ಕಳು 415 ಒಟ್ಟು 978 ಎಲ್ಲವನ್ನೂ ಸೇರಿ 1686 ಜನರು ಈ ರೋಗಕ್ಕೆ ತುತ್ತಾಗಿದ್ದಾರೆ. 174 ಜನರು ಮೃತಪಟ್ಟಿದ್ದಾರೆ.

ಸಂಚಾರಿ ಆರೋಗ್ಯ ಘಟಕ ಬಂದ್‌: ಅಗತ್ಯ ಚಿಕಿತ್ಸೆಯನ್ನು ಮನೆಬಾಗಿಲಲ್ಲೇ ಒದಗಿಸಬೇಕು ಎನ್ನುವ ಉದ್ದೇಶದಿಂದ 2018ರಲ್ಲಿ ಶಿರಸಿಯ ಸ್ಕೋಡ್‌ವೆಸ್‌ ಸಂಸ್ಥೆಯ ಸಹಯೋಗದಲ್ಲಿ ಎಂಡೋಸಲ್ಫಾನ್‌ ಪೀಡಿತರಿಗಾಗಿ ಪ್ರತ್ಯೇಕ ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿರುವ ಬಾಧಿತರಿಗಾಗಿ ಆರು ಆ್ಯಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದಾಗಿ ಎಂಡೋಸಲ್ಫಾನ್‌ ಪೀಡಿತರಿಗೆ ಸಾಕಷ್ಟುಅನುಕೂಲ ಉಂಟಾಗಿತ್ತು. ಆದರೆ ಇದೀಗ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಮುಗಿದಿದ್ದು, ಆ್ಯಂಬುಲೆನ್ಸ್‌ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಸಂತ್ರಸ್ತರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಎಂಡೋಸಲ್ಫಾನ್‌ ಪೀಡಿತರ ಚಿಕಿತ್ಸೆ ನೀಡುವುದರ ಜತೆಗೆ ಸಂಚಾರಿ ಆರೋಗ್ಯ ಘಟಕವನ್ನೂ ಪುನರ್‌ ಆರಂಭಿಸಿಬೇಕಿದೆ.

ತಾಲೂಕು ಸಂಖ್ಯೆ
ಭಟ್ಕಳ 700
ಹೊನ್ನಾವರ 527
ಕುಮಟಾ 174
ಅಂಕೋಲಾ 110
ಸಿದ್ದಾಪುರ 109
ಶಿರಸಿ 66
ಒಟ್ಟು 1686

ಕೈಗಾ ಅಣು ವಿದ್ಯುತ್ ಸ್ಥಾವರ: 5 ಹಾಗೂ 6ನೇ ಘಟಕ ಸ್ಥಾಪನೆಗೆ ಎನ್‌ಜಿಟಿ ಬ್ರೇಕ್!

ಎಂಡೋಸಲ್ಫಾನ್‌ ಕುರಿತಾಗಿ ರಾಜ್ಯ ಸರ್ಕಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೊಸ ಮಾದರಿಯಲ್ಲಿ ಒಂದೇ ರೀತಿಯ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ಮಾರ್ಗಸೂಚಿ ನೀಡುವುದಾಗಿ ಹೇಳಿದ್ದು, ಸರ್ಕಾರದಿಂದ ಬಂದ ಬಳಿಕ ಮಾರ್ಗಸೂಚಿಯಂತೆ ಸಮೀಕ್ಷೆ ನಡೆಸಲಾಗುತ್ತದೆ.
-ಡಾ.ಶರದ್‌ ನಾಯಕ, ಡಿಎಚ್‌ಒ