Asianet Suvarna News Asianet Suvarna News

ಅ.24ರಿಂದ 1 ವಾರ ರಾಜ್ಯದಲ್ಲಿ ಕನ್ನಡ ಹಬ್ಬ: ರಾಜ್ಯೋತ್ಸವಕ್ಕೆ ಸರ್ಕಾರ ಸಜ್ಜು!

* ವಿಶಿಷ್ಟವಾಗಿ ರಾಜ್ಯೋತ್ಸವಕ್ಕೆ ಸರ್ಕಾರ ಸಜ್ಜು

* ಅ.24ರಿಂದ 1 ವಾರ ರಾಜ್ಯದಲ್ಲಿ ಕನ್ನಡ ಹಬ್ಬ

* ‘ಕನ್ನಡಕ್ಕಾಗಿ ನಾವು’ ಅಡಿ 6 ರೀತಿ ಕಾರ‍್ಯಕ್ರಮ

Karnataka Gets Ready For Rajyotsava Govt To launch Week Long Kannadakkaagi Naavu Campaign From oct 24 pod
Author
Bangalore, First Published Oct 20, 2021, 7:53 AM IST

ಬೆಂಗಳೂರು(ಅ.20): ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನು(Kannada Rajyotsava) ವಿಶಿಷ್ಟವಾಗಿ ಆಚರಣೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ(Kannada And Culture Department) ಇದೇ ತಿಂಗಳ 24ರಿಂದ 30ರವರೆಗೆ ಒಂದು ವಾರ ಕಾಲ ‘ಕನ್ನಡಕ್ಕಾಗಿ ನಾವು’(kannadakkagi Naavu) ಎಂಬ ಅಭಿಯಾನ ಹಮ್ಮಿಕೊಂಡಿದೆ.

ಮಾತಾಡ್‌ ಮಾತಾಡ್‌ ಕನ್ನಡ(Maataad Maataad Kannada) ಎಂಬ ಘೋಷ ವಾಕ್ಯದ ಕಲ್ಪನೆಯಲ್ಲಿ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗಿದ್ದು, ಈ ಒಂದು ವಾರ ಕಾಲ ಆರು ರೀತಿಯ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ.

ಅಭಿಯಾನದ(Campaign) ವೇಳೆ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುವುದು, ಕನ್ನಡದಲ್ಲಿಯೇ(Kannada) ವ್ಯವಹರಿಸುವುದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು, ಐಟಿ-ಬಿಟಿ ಕಂಪನಿಯಲ್ಲಿ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡ ಹಬ್ಬದ ವಾತಾವರಣ ಸೃಷ್ಟಿಸುವುದು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಅಭಿಯಾನದ ಭಿತ್ತಿಪತ್ರ ಬಿಡುಗಡೆ ಮಾಡಿ ವಿವರ ನೀಡಿದ ಸಚಿವರು, ಒಂದು ವಾರ ಸಂಪೂರ್ಣ ಕನ್ನಡಮಯ ವಾತಾವರಣ ಸೃಷ್ಟಿಸುವ ಮೂಲಕ ‘ಕನ್ನಡಕ್ಕಾಗಿ ನಾವು’ ಅಭಿಯಾನ ನಡೆಸಲಾಗುವುದು ಎಂದರು.

1.ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ:

ರಾಜ್ಯದ ಐದು ರಂಗಾಯಣಗಳು ಮತ್ತು ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಸಹಯೋಗದಲ್ಲಿ ರಾಜ್ಯದ ಆಯ್ದ ಸಾರ್ವಜನಿಕ ಸ್ಥಳದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ರಾಜ್ಯದ ಹಿರಿಮೆ ಬಿಂಬಿಸುವ ನಾಟಕಗಳು, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನೊಳಗೊಂಡ ಕನ್ನಡ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲಿ, ಐಟಿ-ಬಿಟಿ ಸಂಸ್ಥೆಗಳ ಆವರಣದಲ್ಲಿ, ಮೆಟ್ರೋ, ವಿಧಾನಸೌಧ, ವಿವಿಧ ಕಾರ್ಖಾನೆಗಳ ಆವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

2.ಸಾಮೂಹಿಕ ಕನ್ನಡ ಗೀತ ಗಾಯನ:

ರಾಜ್ಯಾದ್ಯಂತ ಅ.28ರಂದು ಬೆಳಗ್ಗೆ 11 ಗಂಟೆಗೆ ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳ ಗಾಯನ ನಡೆಯಲಿದೆ. ಈಗಾಗಲೇ ಮೂರು ಕನ್ನಡದ ಗೀತೆಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ, ಕೆ.ಎಸ್‌.ನಿಸಾರ್‌ ಅಹಮದ್‌ ರಚಿತ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಸರ್ಕಾರಿ ಕಚೇರಿ, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಏಕಕಾಲಕ್ಕೆ ಈ ಮೂರು ಹಾಡುಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ವಿಧಾನಸೌಧದ ಮೆಟ್ಟಿಲ ಬಳಿ ವಿಧಾನಸೌಧ ಸಿಬ್ಬಂದಿಯಿಂದ ಮತ್ತು ಗಾಂಧಿ ಪ್ರತಿಮೆ ಬಳಿ ಅಧಿಕಾರಿ ವೃಂದದಿಂದ ಗೀತ ಗಾಯನ ಜರುಗಲಿದೆ.

3.ಕನ್ನಡದಲ್ಲಿ ಮಾತು ಮತ್ತು ಬರವಣಿಗೆ:

ಕನ್ನಡ ಭಾಷೆಯನ್ನು ಬೆಳೆಸುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಎಲ್ಲೆಡೆಯೂ ಕನ್ನಡ ಬಳಸುವಂತೆ, ಮೊಬೈಲ್‌ನಲ್ಲಿ ಕನ್ನಡ ಭಾಷೆಯಲ್ಲಿಯೇ ಸಂದೇಶ ಕಳುಹಿಸುವಂತೆ, ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಕೆ ಮಾಡುವಂತೆ ಪ್ರೇರೇಪಿಸಲಾಗುವುದು.

4.ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ:

ಅನ್ಯ ಭಾಷೆಯ ಪದಗಳ ಬಳಕೆ ಮಾಡದೆ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಫಿ ತೆಗೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಐದು ಸಾವಿರ ರು., ಮೂರು ಸಾವಿರ ರು. ಮತ್ತು ಎರಡು ಸಾವಿರ ರು. ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಗಣಿಸಿ, ಅಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50 ಸಾವಿರ ರು., ದ್ವಿತೀಯ ಬಹುಮಾನ 30 ಸಾವಿರ ರು. ಮತ್ತು ತೃತೀಯ ಬಹುಮಾನ 20 ಸಾವಿರ ರು. ನೀಡಲಾಗುತ್ತದೆ. ಅ.28ರೊಳಗೆ ವಿಡಿಯೋ ಸೆಲ್ಫಿ ತೆಗೆದು ಕಳುಹಿಸಿಕೊಡಬೇಕು.

5.ಗಡಿಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ:

ಗಡಿ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಭಾಗದ ತಾಲೂಕು ಪ್ರದೇಶದಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

6.ಬೆಂಗಳೂರಿನಲ್ಲಿ ಕರ್ನಾಟಕ ಸಾಂಸ್ಕೃತಿಕ ಉತ್ಸವ:

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಂಸ್ಕೃತಿಕ ಉತ್ಸವವನ್ನು ಅ.29, 30, 31ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಪುಸ್ತಕೋತ್ಸವ, ದೇಶೀಯ ಉಡುಪು, ಆಹಾರ ಮೇಳ, ಚಿತ್ರಕಲೆ, ಶಿಲ್ಪಕಲಾ ಮೇಳಗಳನ್ನು ಆಯೋಜಿಸಲಾಗುವುದು. ಅಲ್ಲದೆ, ಗೀತಗಾಯನ, ನೃತ್ಯ ರೂಪಕ, ಯಕ್ಷಗಾನ, ವಿಚಾರ ಸಂಕಿರಣ, ಶಾಸ್ತ್ರೀಯ ನೃತ್ಯ, ನಾಟಕ, ಜಾನಪತ ನೃತ್ಯ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಏನೇನು ಕಾರ್ಯಕ್ರಮ?

- ‘ಮಾತಾಡ್‌ ಮಾತಾಡ್‌’ ಕನ್ನಡ ಘೋಷ ವಾಕ್ಯ ಕಲ್ಪನೆಯಡಿ ಕಾರ್ಯಕ್ರಮ

- ಕನ್ನಡದಲ್ಲಿ ಮಾತಾಡಲು, ವ್ಯವಹರಿಸಲು, ಕನ್ನಡ ಬಳಸಲು, ಕಲಿಸಲು ಉತ್ತೇಜನ

- ನಾಟಕ, ನೃತ್ಯ, ಸಂಗೀತ, ಗೀತ ಗಾಯನ, ಮಾತು, ಬರವಣಿಗೆಗೆ ಪ್ರೇರೇಪಣೆ

- ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಕಾರ‍್ಯಕ್ರಮ

Follow Us:
Download App:
  • android
  • ios