ಬೆಂಗಳೂರು (ಫೆ.06):  ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಶನಿ​ವಾರ ನಡೆ​ಯ​ಲಿ​ರುವ ಹೋರಾಟದ ಭಾಗವಾಗಿ ರಾಜ್ಯದಲ್ಲೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಲು ಕರೆ ನೀಡಲಾಗಿದೆ.

"

ರೈತ, ದಲಿತ, ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಎರಡು ಕಡೆ ಹೆದ್ದಾರಿ ತಡೆ ನಡೆಯಲಿದೆ. ಬಡಗಲಪುರ ನಾಗೇಂದ್ರ ಸಂಘಟನೆ ನೇತೃತ್ವದಲ್ಲಿ ಬಿಡದಿ, ಮಂಡ್ಯ, ರಾಯಚೂರಿನ ಅಸ್ಕಿಹಾಲ್‌ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಲಿದೆ.

ದೇಶಾದ್ಯಂತ ರೈತರ ಚಕ್ಕಾ ಜಾಮ್; ಫೆ.6ರ ಪ್ರತಿಭಟನೆ ಸಮಯ, ಸ್ಥಳ, ಸಂಪೂರ್ಣ ಮಾಹಿತಿ! ...

ಚಾಮರಸ ಮಾಲಿಪಾಟೀಲ್‌ ನೇತೃತ್ವದಲ್ಲಿ ರಾಜ್ಯದ ಹಲವೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆಯಲಾಗುತ್ತದೆ. ಮತ್ತೊಂದೆಡೆ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಈಗಾಗಲೇ ದೆಹಲಿಗೆ ರಾಜ್ಯದ ಐದು ನೂರಕ್ಕೂ ಹೆಚ್ಚು ರೈತರು ತೆರಳಿದ್ದಾರೆ.

ಅಲ್ಲದೆ ಬೆಂಗಳೂರು-ಗೋವಾ, ಬೆಂಗಳೂರು- ಹೈದರಾಬಾದ್‌, ಬೆಂಗಳೂರು-ಪುಣೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡುವ ಸಾಧ್ಯತೆ ಇದೆ. ಹಾಗೆಯೇ ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ರಾಯಚೂರು, ಬೆಳಗಾವಿ, ಧಾರವಾಡ, ಕಲಬುರಗಿ, ಹಾವೇರಿ, ಕೊಪ್ಪಳ ಸೇರಿ ಬಹು​ತೇಕ ಎಲ್ಲ ಜಿಲ್ಲೆಗಳಲ್ಲೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಂದ್‌ ಮಾಡಲು ರೈತರು ನಿರ್ಧರಿಸಿದ್ದಾರೆ.

"

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್‌ ಬಲದ ಮೂಲಕ ಸಾಕಷ್ಟುಕಿರುಕುಳ ನೀಡುತ್ತಿದೆ. ಇದೇ ಸರ್ಕಾರ ಚಳವಳಿ ನಿರತ ರೈತರ ಜತೆಗೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ. ಚಳವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವುದು ಕೇಂದ್ರದ ಇಬ್ಬಗೆ ನೀತಿಗೆ ಸಾಕ್ಷಿ. ಇದರ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ರಾಷ್ಟ್ರಮಟ್ಟದ ಕಿಸಾನ್‌ ಸಂಯುಕ್ತ ಮೋರ್ಚಾ ಕರೆ ಮೇರೆಗೆ ರಾಜ್ಯದಲ್ಲೂ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

50 ಕಡೆ:  ದಾವ​ಣ​ಗೆ​ರೆ​ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕಡೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃ​ತ್ವ​ದಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ತಾಲೂಕು ರಸ್ತೆ​ಗ​ಳನ್ನು ತಡೆದು ಪ್ರತಿ​ಭ​ಟನೆ ನಡೆ​ಸ​ಲು ಉದ್ದೇ​ಶಿ​ಸ​ಲಾ​ಗಿ​ದೆ.

ಎಲ್ಲೆಲ್ಲಿ ಇಲ್ಲ?

ಉಡುಪಿ, ಕೊಡಗು, ಬೀದರ್‌, ಚಾಮ​ರಾ​ಜ​ನ​ಗ​ರ ಜಿಲ್ಲೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿ​ನಂಗಡಿ ಹೆದ್ದಾ​ರಿ​ಯಲ್ಲಿ ಮಾತ್ರ ಪ್ರತಿ​ಭ​ಟನೆ ನಡೆ​ಯ​ಲಿ​ದೆ.

ಯಾವ್ಯಾವ ಸಂಘ​ಟ​ನೆ​ಗಳ ಬೆಂಬ​ಲ?

ರೈತ, ದಲಿತ, ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಕಳಸಾ- ಬಂಡೂರಿ ಹೋರಾಟ ಸಮನ್ವಯ ಸಮಿತಿ, ಧಾರ್ಮಿಕ ಅಲ್ಪ​ಸಂಖ್ಯಾ​ತರ ಸಂಘ​ಟ​ನೆ​ಗ​ಳು ಸೇರಿ​ದಂತೆ ವಿವಿಧ ಸಂಘ​ಟ​ನೆ​ಗ​ಳು