ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ಸಿಎಂ ಸ್ಥಾನ ಸಿಗಲಿಲ್ಲ’ ಎಂಬ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಯಾವಾಗ ಸರದಿ ಬರುತ್ತದೆಯೋ ಆಗ ಸಿಎಂ ಆಗುತ್ತೇವೆ, ಎಷ್ಟು ವರ್ಷ ಸಿಎಂ ಆದೆವು ಅನ್ನೋದು ಮುಖ್ಯವಲ್ಲ, ಏನು ಕೆಲಸ ಮಾಡಿದೆವು ಎಂಬುದು ಮುಖ್ಯ ಎಂದಿದ್ದಾರೆ.
ಬಾಗಲಕೋಟೆ (ಆ.2): ‘1979 ರಿಂದ 1995ರವರೆಗೆ ನಾನೇ ಕಾಂಗ್ರೆಸ್ ಪಕ್ಷದ ಸಂಘಟನೆ ನಿರ್ವಹಿಸಿದ್ದೆ. ಆದರೆ, ಆಗ ನನ್ನ ಬದಲು ಆರ್.ಗುಂಡೂರಾವ್ ಮುಖ್ಯಮಂತ್ರಿ ಆದರು. ಆಮೇಲೆ, ಬಂಗಾರಪ್ಪ ಸಿಎಂ ಆದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದರು. ಆದರೆ, ಆಗ ನಾನು ಸಿಎಂ ಆಗಲಿಲ್ಲ ಎಂದು ಪಶ್ಚಾತ್ತಾಪ ಪಡಲಿಲ್ಲ’ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಈ ಮೂಲಕ ಸಿಎಂ ಸ್ಥಾನ ಸಿಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಾಂಗ್ ನೀಡಿದರು.
ಇತ್ತೀಚೆಗೆ ವಿಜಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಖರ್ಗೆ ಅವರು, 1999ರಲ್ಲಿ ನಾನು ಪಕ್ಷ ಸಂಘಟಿಸಿದ್ದೆ. ಆದರೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆದರು. ಬಯಸಿದ್ದ ಸ್ಥಾನ ಸಿಗಲಿಲ್ಲ ಎಂದು ಬೇಸರದಿಂದ ನುಡಿದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೋಯ್ಲಿ, ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಸಿಎಂ ಆಗೇ ಆಗ್ತೀವಿ. ನಾನು 1980ರಲ್ಲೇ ಸಿಎಂ ಆಗಬೇಕಿತ್ತು, ಆಗಲಿಲ್ಲ. ಹತ್ತು ವರ್ಷ ಕಾದೆ. ಹಾಗಂತ ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹೇಳಲಿಕ್ಕೆ ಆಗೋದಿಲ್ಲ. ನಾವು ಎಷ್ಟು ವರ್ಷ ಸಿಎಂ ಆದೆವು ಅನ್ನೋದು ಮುಖ್ಯವಲ್ಲ, ಏನು ಕೆಲಸ ಮಾಡಿದೆವು ಎಂಬುದು ಮುಖ್ಯ. ನನ್ನ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ ಎಂದು ಮೊಯ್ಲಿ ಹೇಳಿದರು.
ಡಿಸಿಎಂ ಆದವರು ಸಿಎಂ ಆಗಲ್ಲ:
ಡಿಸಿಎಂ ಆದವರು ಸಿಎಂ ಆಗಬೇಕು ಅಂತ ಆಸೆ ಪಡ್ತಾರೆ. ಆದರೆ, ಕೆಲವೊಂದು ಬಾರಿ ಡಿಸಿಎಂ ಆದವರು, ಡಿಸಿಎಂ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಎಂದು ಪಶ್ಚಾತ್ತಾಪ ಪಡೋದು ಬೇಡ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಿವಿಮಾತು ಹೇಳಿದರು.
