ಒಣ ದ್ರಾಕ್ಷಿ ಬೆಲೆಯಲ್ಲಿ ಭಾರಿ ಕುಸಿತ, ಪ್ರತಿ ಕೆ.ಜಿ.ಗೆ 100 ರೂ.ಗೆ ಇಳಿಕೆ: ರೈತರು ಕಂಗಾಲು
ಒಣದ್ರಾಕ್ಷಿ ದರ ಕುಸಿತ ಹಿನ್ನೆಲೆ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ವರ್ಷ ಇದೇ ಸಮಯಕ್ಕೆ ಸಗಟು ಮಾರುಕಟ್ಟೆಯಲ್ಲಿ 200 ರೂ. ಪ್ರತಿ ಕೆಜಿಗೆ ಇದ್ದ ಒಣದ್ರಾಕ್ಷಿ ಈಗ 100 ರಿಂದ 125 ರೂ.ಗೆ ಕುಸಿತ ಕಂಡಿದೆ.

ಬೆಂಗಳೂರು (ಆ.22): ಒಣದ್ರಾಕ್ಷಿ ದರ ಕುಸಿತ ಹಿನ್ನೆಲೆ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ವರ್ಷ ಇದೇ ಸಮಯಕ್ಕೆ ಸಗಟು ಮಾರುಕಟ್ಟೆಯಲ್ಲಿ 200 ರೂ. ಪ್ರತಿ ಕೆಜಿಗೆ ಇದ್ದ ಒಣದ್ರಾಕ್ಷಿ ಈಗ 100 ರಿಂದ 125 ರೂ.ಗೆ ಕುಸಿತ ಕಂಡಿದೆ.
ಹೀಗಾಗಿ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ ಬಿಟ್ರೆ ರಾಜ್ಯದಲ್ಲಿ ಅತಿಹೆಚ್ಚು ದ್ರಾಕ್ಷಿಯನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತೆ. ಶೇಕಡ 20ರಷ್ಟು ಮಾತ್ರ ಹಸಿ ದ್ರಾಕ್ಷಿ ಮಾರಾಟ ಮಾಡಿ ಉಳಿದ ಶೇಕಡ 80ರಷ್ಟು ಒಣದ್ರಾಕ್ಷಿ ಸಂಸ್ಕರಣೆ ಮಾಡುತ್ತಾರೆ. ಸದ್ಯ ಒಣದ್ರಾಕ್ಷಿ ದರ ಕುಸಿತ ಹಿನ್ನೆಲೆ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ ದ್ರಾಕ್ಷಿ ಬೆಳೆಗಾರರ ಆ ಬೇಡಿಕೆ ಏನು ಗೊತ್ತಾ ಈ ಸ್ಟೋರಿ ನೋಡಿ.
ರಾಜ್ಯದಲ್ಲಿ ವಿಜಯಪುರ ಬಿಟ್ಟರೆ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವುದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿಯೇ. ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ಹುಕ್ಕೇರಿಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಅಥಣಿ ತಾಲೂಕಿನಲ್ಲಿಯೇ ಸುಮಾರು 5500 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ಅಂದಾಜು 80 ಸಾವಿರ ಟನ್ ದ್ರಾಕ್ಷಿ ಬೆಳೆಯಲಾಗುತ್ತದೆ. ಈ ಪೈಕಿ ಶೇಕಡ 80ರಷ್ಟು ಒಣದ್ರಾಕ್ಷಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ 2ನೇ ವಾರದಲ್ಲಿ ದ್ರಾಕ್ಷಿ ಕೋಯ್ಲು ಮುಗಿದ ಬಳಿಕ ಒಣದ್ರಾಕ್ಷಿ ಸಂಸ್ಕರಣೆ ಮಾಡಲಾಗುತ್ತೆ. ಬೆಳಗಾವಿಯಲ್ಲಿ ಒಣದ್ರಾಕ್ಷಿ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ಗಳ ಕೊರತೆಯಿದೆ. ಗಡಿಭಾಗ ಮಹಾರಾಷ್ಟ್ರದ ಸಾಂಗಲಿ, ಜತ್ತ ಭಾಗದಲ್ಲಿ ಬಾಡಿಗೆ ಆಧಾರದಲ್ಲಿ ಕೋಲ್ಡ್ ಸ್ಟೋರೇಜ್ಗಳಲ್ಲಿ ಒಣದ್ರಾಕ್ಷಿಯನ್ನು ರೈತರು ಸಂಗ್ರಹಿಸಿಡುತ್ತಾರೆ. ಉತ್ತಮ ದರ ಬಂದ ಬಳಿಕ ಮಾರಾಟ ಮಾಡುವ ಲೆಕ್ಕಾಚಾರದಲ್ಲಿದ್ದ ದ್ರಾಕ್ಷಿ ಬೆಳೆಗಾರರಿಗೆ ಸದ್ಯ ಏಕಾಏಕಿ ದರ ಕುಸಿತ ಶಾಕ್ ನೀಡಿದೆ.
ಅರ್ಧ ಕರ್ನಾಟಕ ಬರಗಾಲ, ಮುಂದೆಯೂ ಮಳೆ ಮುನ್ಸೂಚನೆಯಿಲ್ಲ: ಸಚಿವ ಕೃಷ್ಣಬೈರೇಗೌಡ
ಒಣದ್ರಾಕ್ಷಿ ತಯಾರಿಕೆಗೆ 150 ರೂ. ಮಾರಾಟ ದರ 100 ರೂ.: ಹೀಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಮಾತನಾಡಿರುವ ಅಥಣಿ ಮಾಜಿ ಶಾಸಕ ಹಾಗೂ ಒಣದ್ರಾಕ್ಷಿ ಸಂಸ್ಕರಣಾ ಘಟಕದ ಅಧ್ಯಕ್ಷ ಶಹಜಹಾನ್ ಡೊಂಗರಗಾಂವ್, ಒಣದ್ರಾಕ್ಷಿ ಬೆಲೆ 200 ರೂಪಾಯಿಯಿಂದ 80 ರೂ.ಗಳಿಂದ 110 ರೂ.ಗೆ ಮಾರಾಟ ಆಗುತ್ತಿದೆ. ದ್ರಾಕ್ಷಿ ಕೋಯ್ಲು ಮಾಡಿ ಒಣದ್ರಾಕ್ಷಿ ತಯಾರಿಕೆ ಮಾಡಿ ಮಾರಾಟ ಮಾಡಲು ಪ್ರತಿ ಕೆಜಿಗೆ 150 ರೂ. ಖರ್ಚಾಗುತ್ತದೆ. ಸಾಲ ಮಾಡಿ ದ್ರಾಕ್ಷಿ ಬೆಳೆದ ರೈತರು ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಬೇಕು. ಪ್ರತಿ ಕೆಜಿ ಒಣದ್ರಾಕ್ಷಿಗೆ 200 ರೂ. ಬೆಂಬಲ ಬೆಲೆ ಘೋಷಿಸಬೇಕು. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಒಣದ್ರಾಕ್ಷಿಯನ್ನು ಸರ್ಕಾರವೇ ಖರೀದಿಸಿ ಅಂಗನವಾಡಿ ಕೇಂದ್ರಗಳಲ್ಲಿ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಸಿಯೂಟದಲ್ಲಿ ಒಣದ್ರಾಕ್ಷಿ ಕೊಡಿ: ಇನ್ನು ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಥಣಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯಗೆ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ದ್ರಾಕ್ಷಿ ಬೆಳೆಗಾರರ ಪರವಾಗಿ ಮನವಿ ಮಾಡಿದ್ದರು. ಪೌಷ್ಠಿಕ ಅಂಶ ಇರುವ ಒಣದ್ರಾಕ್ಷಿಯನ್ನು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವೇಳೆ ನೀಡಲು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರದಲ್ಲಿ ಒಣದ್ರಾಕ್ಷಿ ನೀಡಬೇಕು ಎಂದು ಮಹಾರಾಷ್ಟ್ರದ ಸಚಿವ ಸಂಪುಟದಲ್ಲಿ ಇತ್ತೀಚೆಗೆ ತೀರ್ಮಾನ ಆಗಿದೆ. ಅದೇ ರೀತಿ ಕರ್ನಾಟಕದಲ್ಲೂ ರೈತರಿಂದ ಒಣದ್ರಾಕ್ಷಿ ಖರೀದಿಸಿ ಅಂಗನವಾಡಿಗಳಿಗೆ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಒಣದ್ರಾಕ್ಷಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಚರ್ಚೆ: ಯಶವಂತಪುರಕ್ಕೆ 7.63 ಕೋಟಿ ರೂ. ಅನುದಾನ ಮಂಜೂರು
ಒಟ್ಟಾರೆಯಾಗಿ ದರ ಕುಸಿತದಿಂದ ಕಂಗಾಲಾಗಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ. ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಒಣದ್ರಾಕ್ಷಿ ಖರೀದಿಸಿ ಅಂಗನವಾಡಿಗಳಿಗೆ ಸರಬರಾಜು ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಾ? ಒಣದ್ರಾಕ್ಷಿಗೆ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತಾ? ಎಂಬುದನ್ನು ಕಾದು ನೋಡಬೇಕು.