ಸಿನಾನ್‌ ಇಂದಬೆಟ್ಟು

ಬೆಂಗಳೂರು(ಏ.23): ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ್ದ ಕನ್ನಡಿಗರು ಕೊರೋನಾ ಹಾವಳಿಯಿಂದಾಗಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸ ಕಳೆದುಕೊಂಡು 4-5 ತಿಂಗಳಿನಿಂದ ಸಂಬಳ ಇಲ್ಲದೆ, ಅಲ್ಲೂ ಇರಲಾಗದೆ ಊರಿಗೂ ಬರಲಾಗದೆ, ಸ್ವತಃ ಕೊರೋನಾ ಸೋಂಕಿಗೆ ತಗಲಿದವರು, ಮೃತಪಟ್ಟವರ ಶವ ಊರಿಗೆ ಕಳಿಸಲಾಗದವರು... ಹೀಗೆ ವಿವಿಧ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಮರುಭೂಮಿಯಲ್ಲಿ ಓಯಸಿಸ್‌ನಂತೆ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿದೆ ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ (ಕೆಸಿಎಫ್‌). ಯುಎಇ, ಸೌದಿ ಅರೇಬಿಯಾ ಮತ್ತಿತರೆ ಕೊಲ್ಲಿ ರಾಷ್ಟ್ರ, ಮಲೇಷ್ಯಾ, ಸಿಂಗಾಪುರ, ಬ್ರಿಟನ್‌ನಲ್ಲೂ ಕಷ್ಟದಲ್ಲಿರುವ ಕನ್ನಡಿಗರಿಗೆ ನೆರವಾಗುತ್ತಿದೆ.

ಯುಎಇ ಪೊಲೀಸರ ಸಹಭಾಗಿತ್ವದಲ್ಲಿ ಸಹಾಯವಾಣಿ ಆರಂಭಿಸಿ ಆಹಾರ, ಔಷಧ, ಚಿಕಿತ್ಸೆ ಹಾಗೂ ಆರ್ಥಿಕ ಸಹಾಯ ಮಾಡುತ್ತಿದೆ. 1300ಕ್ಕೂ ಹೆಚ್ಚು ಕನ್ನಡಿಗರಿಗೆ ಆಹಾರ ಹಾಗೂ ಮೆಡಿಕಲ್‌ ಕಿಟ್‌ ವಿತರಿಸಿದ್ದಾರೆ. ನೂರಕ್ಕೂ ಹೆಚ್ಚು ಕನ್ನಡಿಗರಿಗೆ ಕೋವಿಡ್‌ ಪರೀಕ್ಷೆ ಮಾಡಿಸಿದ್ದಾರೆ. ಸೋಂಕಿನಿಂದ ಮೃತ ಕನ್ನಡಿಗರ ಅಂತ್ಯ ಸಂಸ್ಕಾರ ಮಾಡಲೂ ಕೆಸಿಎಫ್‌ ಪತ್ಯೇಕ ತಂಡ ರಚಿಸಿದೆ. ಸದಸ್ಯರೇ ಕೈಯಿಂದ ಹಣ ಹಾಕಿ ಕೆಲಸ ಕಳೆದುಕೊಂಡವರಿಗೆ ವಸತಿ ಹಾಗೂ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ಸೂಪರ್‌ ಮಾರ್ಕೆಟ್‌ಗಳಿಗೆ ತೆರಳಿ, ಮನೆ ಮನೆಗೆ ಆಹಾರ ಪೂರೈಸಲೂ ತಂಡವೊಂದಿದೆ.

ಕಳೆದ 7 ವರ್ಷದಿಂದ ಕೆಸಿಎಫ್‌ ಕೆಲಸ ಮಾಡುತ್ತಿದೆ. ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸ್ವಯಂಸೇವಕರು ನಿಸ್ವಾರ್ಥ ಸೇವೆ ನೀಡುತ್ತಿದ್ದಾರೆ. ನಮ್ಮ ಕೆಲಸ ಕಂಡು ಬ್ರೆಜಿಲ್‌ನ ಅನ್ನಾ ಪೌಲ್‌ ಎಂಬವರು ಕರೆ ಮಾಡಿ ಧನ ಸಹಾಯ ಮಾಡಿದ್ದಾರೆ. ಇದಕ್ಕಿಂತ ಹೆಚ್ಚಿನ ಸಾರ್ಥಕತೆ ಇನ್ನೇನು ಬೇಕು.

- ಝೈನುದ್ದೀನ್‌ ಹಾಜಿ ಬೆಳ್ಳಾರೆ, ಕೆಸಿಎಫ್‌ ಸಾಂತ್ವನ ವಿಭಾಗದ ಅಧ್ಯಕ್ಷ

ನೆರವಿಗೆ ಮೊರೆ

ಕೆಸಿಎಫ್‌ ನೀಗಿಸಲಾಗದ ಸಮಸ್ಯೆಗಳೂ ಇವೆ. ವಿಸಿಟ್‌ ವೀಸಾ, ವರ್ಕರ್‌ ವೀಸಾದಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಬಂದು ಈಗ ಉಳಿಯಲೂ ಸ್ಥಳವಿಲ್ಲದ ಕನ್ನಡಿಗರಿದ್ದಾರೆ. ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಇಲ್ಲ. ಹೆರಿಗೆ 4-5 ಲಕ್ಷ ರು.ನಷ್ಟುದುಬಾರಿ. ದುಡಿಮೆ ಇಲ್ಲದೆ ಇಷ್ಟುಹಣ ಕಟ್ಟುವುದಾದರೂ ಹೇಗೆಂದು ಕಂಗಾಲಾಗಿದ್ದಾರೆ. ಇದೇ ರೀತಿಯ ಸಮಸ್ಯೆಗಳನ್ನು ಮಲಯಾಳಿಗಳು ಅನುಭವಿಸುತ್ತಿದ್ದು, ಅವರಿಗೆ ಕೇರಳ ಸರ್ಕಾರ ನೆರವಾಗುತ್ತಿದೆ. ನಮ್ಮ ನೆರವಿಗೆ ಕರ್ನಾಟಕ ಸರ್ಕಾರ ಬರಬೇಕು ಎಂದು ಅವರೆಲ್ಲ ಮೊರೆ ಇಟ್ಟಿದ್ದಾರೆ.