Asianet Suvarna News Asianet Suvarna News

ಮತ್ತೆ ಕೊರೋನಾ ಬಿಕ್ಕಟ್ಟಿನತ್ತ ರಾಜ್ಯ: ತಜ್ಞರ ಎಚ್ಚರಿಕೆಗೆ ಸರ್ಕಾರ ನಿರ್ಲಕ್ಷ್ಯ!

ಮತ್ತೆ ಕೊರೋನಾ ಬಿಕ್ಕಟ್ಟಿನತ್ತ ರಾಜ್ಯ| ತಜ್ಞರ ಎಚ್ಚರಿಕೆಗೆ ಸರ್ಕಾರ ನಿರ್ಲಕ್ಷ್ಯ| ಚಿತ್ರಮಂದಿರಗಳಲ್ಲಿ 50% ಮಿತಿ ಜಾರಿಯಾಗಿಲ್ಲ| - ಶಾಲೆಗಳನ್ನು ಬಂದ್‌ ಮಾಡಿ ಎಂದರೂ ಕೇಳ್ತಿಲ್ಲ| ಇದೇ ರೀತಿಯಾದರೆ ರಾಜ್ಯಕ್ಕೆ ಮಹಾರಾಷ್ಟ್ರ ಸ್ಥಿತಿ| ಕೋವಿಡ್‌ ತಾಂತ್ರಿಕ ಸಮಿತಿ ತಜ್ಞರಿಂದ ಎಚ್ಚರಿಕೆ

Karnataka Coronavirus cases Raisning Experts Warns The Govt Again On Its Negligence pod
Author
Bangalore, First Published Apr 1, 2021, 7:16 AM IST

ಬೆಂಗಳೂರು(ಏ.01): ಕೊರೋನಾ ಸೋಂಕು ತಡೆಗೆ ತಾಂತ್ರಿಕ ಸಮಿತಿ ನೀಡುವ ಶಿಫಾರಸುಗಳ ಬಗ್ಗೆ ರಾಜ್ಯ ಸರ್ಕಾರ ಇದೇ ರೀತಿಯ ದಿವ್ಯ ನಿರ್ಲಕ್ಷ್ಯ ಮುಂದುವರೆಸಿದರೆ ಇನ್ನು ಕೇವಲ ಮೂರ್ನಾಲ್ಕು ವಾರದಲ್ಲಿ ಮಹಾರಾಷ್ಟ್ರದಲ್ಲಿನ ಚಿಂತಾಜನಕ ಸ್ಥಿತಿ ರಾಜ್ಯಕ್ಕೂ ಬಂದೊದಗಲಿದೆ ಎಂದು ತಜ್ಞರು ನೇರ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ತಾಂತ್ರಿಕ ಸಮಿತಿಯ ಪ್ರಮುಖ ತಜ್ಞರ ಪ್ರಕಾರ, ಏಪ್ರಿಲ್‌ ಅಂತ್ಯದ ವೇಳೆಗೆ ಕರ್ನಾಟಕದಲ್ಲೂ ನಿತ್ಯ 30 ಸಾವಿರ ಪ್ರಕರಣ ವರದಿಯಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ, ನಾಲ್ಕೈದು ವಾರಗಳ ಹಿಂದೆ (ಫೆಬ್ರವರಿ ಮಾಸದ ಮಧ್ಯಂತರದಲ್ಲಿ) 3-4 ಸಾವಿರ ಇದ್ದ ಸಕ್ರಿಯ ಪ್ರಕರಣಗಳು ಇದೀಗ 30 ಸಾವಿರ ಮುಟ್ಟಿವೆ. ಕರ್ನಾಟಕದಲ್ಲಿ ಸೋಂಕಿನ ಹಬ್ಬುವಿಕೆ ವೇಗ ಮಹಾರಾಷ್ಟ್ರಕ್ಕಿಂತ ಹೆಚ್ಚಿದೆ. ಹೀಗಾಗಿ ಇನ್ನು ಮೂರು ವಾರದಲ್ಲೇ ಕರ್ನಾಟಕ ನಿತ್ಯ 30 ಸಾವಿರ ಸೋಂಕು ಕಂಡರೂ ಅಚ್ಚರಿಯಿಲ್ಲ.

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ತಕ್ಷಣದಿಂದ ವಿವಿಧ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ಅನೇಕ ದಿನಗಳ ಹಿಂದೆ ತಜ್ಞರು ಶಿಫಾರಸು ಮಾಡಿದ್ದರೂ ಸರ್ಕಾರ ಮಾತ್ರ ಒಂದು ರೀತಿಯಲ್ಲಿ ಕಾಟಾಚಾರಕ್ಕೆ ಎಂಬಂತೆ ಕ್ರಮ ಕೈಗೊಳ್ಳುತ್ತಿದೆ ಎಂದೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ಸಮಿತಿಯು ಕಳೆದ ಡಿಸೆಂಬರ್‌ನಲ್ಲೇ ಫೆಬ್ರವರಿ ಅಥವಾ ಮಾಚ್‌ರ್‍ನಲ್ಲಿ ರಾಜ್ಯಕ್ಕೆ ಎರಡನೇ ಅಲೆ ಅಪ್ಪಳಿಸುವ ಸಾಧ್ಯತೆಗಳಿವೆ, ಆದ್ದರಿಂದ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು, ಜನದಟ್ಟಣೆ ಆಗುವುದನ್ನು ತಪ್ಪಿಸಬೇಕು, ಸಿನಿಮಾ ಹಾಲ್‌ಗಳಲ್ಲಿ ಶೇ.50ರಷ್ಟುಮಾತ್ರ ಭರ್ತಿಗೆ ಮಾತ್ರ ಅವಕಾಶ ನೀಡಬೇಕು, ಧಾರ್ಮಿಕ ಕಾರ್ಯಕ್ರಮ, ಮದುವೆ, ಸಾಂಸ್ಕೃತಿಕ ಕಾರ್ಯಗಳಲ್ಲಿ ಮಿತ ಪ್ರಮಾಣದ ಜನರು ಪಾಲ್ಗೊಳ್ಳಬೇಕು ಎಂಬ ಸಲಹೆ ನೀಡಿತ್ತು. ಆದರೆ ಅದು ಜಾರಿಗೆ ಬರಲಿಲ್ಲ. ಪ್ರತಿಭಟನೆ, ರಾರ‍ಯಲಿ, ಮದುವೆ, ಸಿನಿಮಾ, ಸಭೆ, ಸಮಾರಂಭಗಳು ಎಗ್ಗಿಲ್ಲದೇ ನಡೆದವು. ಇದೆಲ್ಲರ ಪರಿಣಾಮ ಈಗ ಎದುರಿಸಬೇಕಾಗಿದೆ.

ಮಾಚ್‌ರ್‍ನಲ್ಲಿ ಪ್ರಕರಣ ಏರಿಕೆ ಆಗುತ್ತಿದ್ದಂತೆ 10 ಮತ್ತು 12ನೇ ತರಗತಿಯನ್ನು ಹೊರತುಪಡಿಸಿ ಉಳಿದೆಲ್ಲ ತರಗತಿಗಳನ್ನು ಬಂದ್‌ ಮಾಡಿ ಆನ್‌ಲೈನ್‌ ಶಿಕ್ಷಣ ನೀಡಬೇಕು. ಜಿಮ್‌, ಈಜುಕೊಳ ಬಂದ್‌ ಮಾಡಬೇಕು. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿತ ಮಾಡಬೇಕು. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಲಸಿಕೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಶಿಫಾರಸನ್ನು ಕೋವಿಡ್‌ ತಾಂತ್ರಿಕ ಸಮಿತಿ ಮಾಡಿದೆ. ಆದರೆ, ಸರ್ಕಾರ ಈ ಕ್ಷಣದವರೆಗೂ ಈ ಶಿಫಾರಸಿಗೆ ಯಾವುದೇ ಮನ್ನಣೆ ನೀಡಿಲ್ಲ ಎಂದು ಅವರು ಬೇಸರಿಸುತ್ತಾರೆ.

ಒಳಾಂಗಣ ಕಾರ್ಯಕ್ರಮಗಳಿಗೆ ಗರಿಷ್ಠ 200 ಜನರು ಮಾತ್ರ ಭಾಗವಹಿಸುವ ಮಿತಿ ಹೇರಿದ್ದು ಬಿಟ್ಟರೆ ನಾವು ನೀಡಿದ ಗಂಭೀರ ಸಲಹೆಗಳನ್ನು ಸರ್ಕಾರ ಪರಿಗಣಿಸಿಯೇ ಇಲ್ಲ. ಮಹಾರಾಷ್ಟ್ರದಲ್ಲಿ ಅಲ್ಲಿನ ಕೋವಿಡ್‌ ಕಾರ್ಯಪಡೆಯ ಶಿಫಾರಸನ್ನು ಸರ್ಕಾರ ಪಾಲಿಸದೇ ಇದ್ದ ಕಾರಣ ಮೂರ್ನಾಲ್ಕು ವಾರಗಳ ಹಿಂದೆ ದಿನಕ್ಕೆ 3-4 ಸಾವಿರ ಪ್ರಕರಣವಿದ್ದದ್ದು ಈಗ ದಿನಕ್ಕೆ 30 ಸಾವಿರಕ್ಕೆ ಏರಿದೆ. ರಾಜ್ಯವೂ ಮಹಾರಾಷ್ಟ್ರದ ಹಾದಿಯಲ್ಲೇ ಇದೆ ಎಂದು ಅವರು ಹೇಳುತ್ತಾರೆ.

ಕೋವಿಡ್‌ ನಿಯಮವನ್ನು ಉಲ್ಲಂಘಿಸುವ ಶಾಲಾ ಕಾಲೇಜು, ಪ್ರಭಾವಿ ಸಂಘಟನೆ, ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡಿದ್ದು ವರದಿಯಾಗಿಲ್ಲ. ನಾವು ನೀಡುವ ಶಿಫಾರಸಿಗೂ ಸರ್ಕಾರ ಮಾನ್ಯತೆ ನೀಡುತ್ತಿಲ್ಲ. ನಮ್ಮ ಸಲಹೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತೇವೆ ಎಂದಷ್ಟೆಸರ್ಕಾರ ಹೇಳುತ್ತಿದೆ. ಈಗ ಪ್ರಕರಣ 4 ಸಾವಿರ ದಾಟಿದರೂ ನಾವು ಹೊಸದಾಗಿ ಸಲಹೆ ನೀಡುವ ಅಗತ್ಯ ಇಲ್ಲ. ನೀಡಿರುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು ಎಂದು ತಾಂತ್ರಿಕ ಸಮಿತಿಯ ಮತ್ತೊಬ್ಬ ಸದಸ್ಯರು ಹೇಳುತ್ತಾರೆ.

ತಜ್ಞರು ಹೇಳೋದೇನು?

- ರಾಜ್ಯದಲ್ಲಿ ಸೋಂಕು ಹರಡುವಿಕೆ ವೇಗ ಮಹಾರಾಷ್ಟ್ರಕ್ಕಿಂತ ಹೆಚ್ಚಿದೆ

- 4-5 ವಾರ ಹಿಂದೆ 3 ಸಾವಿರ ಇದ್ದ ಸಕ್ರಿಯ ಕೇಸ್‌ 30 ಸಾವಿರಕ್ಕೇರಿದೆ

- ಇದೇ ರೀತಿಯಾದರೆ ಇನ್ನು 3 ವಾರದಲ್ಲಿ ನಿತ್ಯ ಸೋಂಕು 30 ಸಾವಿರಕ್ಕೆ

- ಮಾಚ್‌ರ್‍ನಲ್ಲಿ 2ನೇ ಅಲೆ ಬರುತ್ತೆಂದು ಡಿಸೆಂಬರ್‌ನಲ್ಲೇ ಹೇಳಿದ್ದೆವು

- ಕೋವಿಡ್‌ ಮುನ್ನೆಚ್ಚರಿಕೆ, ಜನದಟ್ಟಣೆ ತಪ್ಪಿಸಲು ಸೂಚಿಸಿದ್ದೆವು

- ಮದುವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನರ ಮಿತಿಗೆ ಸಲಹೆ ಮಾಡಿದ್ದೆವು

- ಅವು ಜಾರಿಗೆ ಬರಲಿಲ್ಲ. ಪ್ರತಿಭಟನೆ, ರಾರ‍ಯಲಿ, ಮದುವೆ ಎಗ್ಗಿಲ್ಲದೆ ನಡೆದವು

- ಇದೆಲ್ಲದರ ಪರಿಣಾಮವನ್ನು ರಾಜ್ಯ ಈಗ ಎದುರಿಸಬೇಕಾಗಿ ಬಂದಿದೆ

- 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ತರಗತಿ ಮುಚ್ಚಿ

- ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಮಾಡಿ ಎಂದು ಹೇಳಿದ್ದೇವೆ

- ಒಳಾಂಗಣ ಕಾರ್ಯಕ್ರಮಕ್ಕೆ ಮಿತಿ ಹೇರಿದ್ದು ಬಿಟ್ಟರೆ ಇನ್ನೇನೂ ಆಗಿಲ್ಲ

- ನಾವು ಹೊಸ ಸಲಹೆ ನೀಡುವ ಅಗತ್ಯವಿಲ್ಲ, ಹಳೆಯದನ್ನೇ ಪಾಲಿಸಲಿ

Follow Us:
Download App:
  • android
  • ios