ಯುವಜನಾಂಗ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹುಕ್ಕಾ ಬಾರ್‌ಗಳನ್ನು ರಾಜ್ಯಾದ್ಯಂತ ನಿಷೇಧಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. 

ಬೆಂಗಳೂರು (ಸೆ.20): ಯುವಜನಾಂಗ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹುಕ್ಕಾ ಬಾರ್‌ಗಳನ್ನು ರಾಜ್ಯಾದ್ಯಂತ ನಿಷೇಧಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಮಂಗಳವಾರ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮತ್ತು ಯುವಜನ ಸಬಲೀಕರಣ ಸಚಿವ ಬಿ.ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹುಕ್ಕಾ ಬಾರ್‌ ನಿಷೇಧ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ‘ಕೋಟ್ಪಾ ಕಾಯ್ದೆ’ಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಹುಕ್ಕಾ ಬಾರ್‌ ಸೇರಿದಂತೆ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯನ್ನು ಶಾಲೆಗಳ ಜತೆಗೆ ದೇವಾಲಯ, ಅಸ್ಪತ್ರೆಗಳ ಸುತ್ತಮುತ್ತಲೂ ನಿಷೇಧ ಮಾಡಲಾಗುವುದು ಎಂದು ಹೇಳಿದರು. ತಂಬಾಕು ಖರೀದಿಗೆ 18 ವರ್ಷದ ಮೇಲ್ಪಟ್ಟವರಿಗೆ, ಕಾನೂನನಲ್ಲಿ ಇದ್ದ ಅವಕಾಶವನ್ನು ಪರಿಷ್ಕರಿಸಲಾಗುವುದು. 18 ವರ್ಷದ ಬದಲು 21 ವರ್ಷದ ಮೇಲ್ಪಟ್ಟವರು ಎಂದು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ ಎಂದರು.

ಜೆಡಿಎಸ್‌ನಲ್ಲೇ ಸಮರ್ಥ ಅಭ್ಯರ್ಥಿಗಳಿರಬೇಕಾದರೆ ನನಗ್ಯಾಕೆ ಲೋಕಸಭಾ ಟಿಕೆಟ್: ಸಿ.ಎಸ್.ಪುಟ್ಟರಾಜು

ಸಚಿವ ನಾಗೇಂದ್ರ ಮಾತನಾಡಿ, ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಹುಕ್ಕಾ ಬಾರ್ ಗಳನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡಿ ಮಾದಕ ವಸ್ತುಗಳ ಮುಕ್ತ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುವುದು. ಕ್ಯಾನ್ಸರ್‌ ತಜ್ಞ ಡಾ.ವಿಶಾಲ್ ರಾವ್ ರವರ ತಂಡವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಚಾರ ಮಾಡಿ ಮಾದಕ ವಸ್ತುಗಳ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿ ಸರ್ಕಾರಕ್ಕೆ ಒಂದು ವರದಿಯನ್ನು ಕೂಡ ಸಲ್ಲಿಕೆ ಮಾಡಿದೆ. ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.