ಸಿದ್ಧಗಂಗಾ ಶ್ರೀಗಿಲ್ಲ ಭಾರತ ರತ್ನ: ಕರ್ನಾಟಕದ ಜನತೆಗೆ ನಿರಾಸೆ

ಭಾರತ ರತ್ನ ಘೋಷಣೆ: ಸಿದ್ಧಗಂಗಾ ಶ್ರೀಗಿಲ್ಲ ಭಾರತ ರತ್ನ ಗೌರವ: ಗಣ್ಯರು, ಸಾರ್ವಜನಿಕರ ಒತ್ತಾಸೆಗೆ ಕಡೆಗೂ ಸಿಗಲಿಲ್ಲ ಮನ್ನಣೆ

Karnataka Congress Disappointed By No Bharat Ratna For Seer

ತುಮಕೂರು[ಜ.26]: ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಈ ಬಾರಿಯೂ ‘ಭಾರತ ರತ್ನ’ ಗೌರವ ಲಭಿಸಲಿಲ್ಲ. ರಾಜ್ಯದ ಕೋಟ್ಯಂತರ ನಾಗರಿಕರ ಒಕ್ಕೊರಲ ಒತ್ತಾಯಕ್ಕೆ ಮನ್ನಣೆ ನೀಡದೆ ಕೇಂದ್ರ ಸರ್ಕಾರ ತೀವ್ರ ನಿರಾಸೆ ಉಂಟುಮಾಡಿದ್ದು, ಅಮೂಲ್ಯ ರತ್ನಕ್ಕೆ ಭಾರತ ರತ್ನ ನೀಡದಿರುವ ಬಗ್ಗೆ ರಾಜ್ಯಾದ್ಯಂತ ಅಸಮಾಧಾನ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಪ್ರಮುಖರು, ಸಂಸ ದರು ಹಾಗೂ ಕೋಟ್ಯಂತರ ನಾಗರಿಕರು ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಒತ್ತಾಯ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ಈ ಒತ್ತಾಯ ಕೇಳಿ ಬರುತ್ತಿದ್ದರೂ ಕೇಂದ್ರ ಸ್ಪಂದಿಸಿರಲಿಲ್ಲ.

ಸೋಮವಾರ ಶ್ರೀಗಳು ಲಿಂಗೈಕ್ಯರಾದ ಬಳಿಕ ‘ಭಾರತ ರತ್ನ’ ಒತ್ತಾಯ ಮತ್ತಷ್ಟು ಹೆಚ್ಚಾಗಿತ್ತು. ಜತೆಗೆ ಸೋಮವಾರ ಹಾಗೂ ಮಂಗಳವಾರ ಅಂತಿಮ ದರ್ಶನಕ್ಕೆ ಬಂದಿದ್ದ ಲಕ್ಷಾಂತರ ನಾಗರಿಕರು ‘ಶ್ರೀಗಳಿಗೆ ಭಾರತರತ್ನ’ ನೀಡಬೇಕು ಎಂದೇ ಘೋಷಣೆ ಕೂಗಿದ್ದರು. ಇದರಿಂದ ಈ ಬಾರಿ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಘೋಷಣೆಯಾಗಲಿದೆ ಎಂದೇ ನಿರೀಕ್ಷಿಸಲಾಗಿತ್ತು.

ಆದರೆ, ನಾಡಿನ ಕೋಟ್ಯಂತರ ಜನರ ಆಗ್ರಹಕ್ಕೆ ಸ್ಪಂದಿಸದೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಗೀತ ಮಾಂತ್ರಿಕ ಭೂಪೇನ್ ಹಜಾರಿಕ ಹಾಗೂ ಸಮಾಜಸೇವಕ ನಾನಾಜಿ ದೇಶ್‌ಮುಖ್ ಅವರಿಗೆ ಮಾತ್ರ ಶುಕ್ರವಾರ ಭಾರತರತ್ನ ಘೋಷಣೆ ಮಾಡಲಾಗಿದೆ. ಇದರಿಂದ ನಾಡಿನ ಜನರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಜಕೀಯ ಕ್ಷೇತ್ರಗಳಲ್ಲಿನ ಸಾಧಕರು ಕಣ್ಣಿಗೆ ಕಾಣುವಷ್ಟು ಬೇಗ ಅನ್ನ, ಅಕ್ಷರ, ಆಶ್ರಯದ ಮೂಲಕ ಲಕ್ಷಾಂತರ ಜನರ ಬಾಳಲ್ಲಿ ಬೆಳಕು ಮೂಡಿಸಿದ ದೇವರ ಸೇವೆ ಕಾಣಲಿಲ್ಲವೇ ಎಂದು ಕಿಡಿಕಾರಿದ್ದಾರೆ.

ಶ್ರೀಗಳಿಗೆ ಭಾರತರತ್ನ ನೀಡುವಂತೆ ಪಕ್ಷಭೇದ ಮರೆತು ಎಲ್ಲಾ ಪಕ್ಷದ ನಾಯಕರೂ ಆಗ್ರಹಿಸಿದ್ದರು. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಟ್ಟು ಭವಿಷ್ಯ ರೂಪಿಸಿದ ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಿದರೆ ಪ್ರಶಸ್ತಿಯ ಗೌರವವೇ ಹೆಚ್ಚಾಗುತ್ತದೆ ಎಂದು ಒತ್ತಾಯಿಸಿದ್ದರು. ಇದೀಗ ಶ್ರೀಗಳನ್ನು ಗುರುತಿಸದ ಬಗ್ಗೆ ಪಕ್ಷಭೇದ ಮರೆತು ರಾಜ್ಯದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios