ಪೇಸಿಎಂ ಪೋಸ್ಟರ್: ಕಾಂಗ್ರೆಸ್ಸಿಂದ ನಟನ ಫೋಟೋ ಬಳಕೆ, ವಿವಾದ
ಪೇಸಿಎಂ ಪೋಸ್ಟರ್‌ಲ್ಲಿ ನಟ ಅಖಿಲ್ ಅಯ್ಯರ್ ಪ್ರತ್ಯಕ್ಷ, ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ: ನಟನ ಎಚ್ಚರಿಕೆ
ಬೆಂಗಳೂರು(ಸೆ.24): ‘ಪೇ ಸಿಎಂ‘ ಹಾಗೂ ‘ಶೇ.40 ಕಮಿಷನ್’ ಅಭಿಯಾನದ ವೇಳೆ ಅನುಮತಿ ಇಲ್ಲದೇ ತಮ್ಮ ಫೋಟೋ ಅನ್ನು ಫೋಸ್ಟರ್‌ನಲ್ಲಿ ಬಳಕೆ ಮಾಡಿರುವುದಕ್ಕೆ ರಾಜ್ಯ ಕಾಂಗ್ರೆಸ್ ವಿರುದ್ಧ ಬೆಂಗಳೂರು ಮೂಲದ ಬಾಲಿವುಡ್ ನಟ ಅಖಿಲ್ ಅಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಅಭಿಯಾನದ ಭಾಗವಾಗಿ ಪೇ ಸಿಎಂ ಫೋಸ್ಟರ್‌ಗಳನ್ನು ನಗರದ ವಿವಿಧ ಭಾಗದಲ್ಲಿ ಅಂಟಿಸಲಾಗುತ್ತಿದೆ. ಈ ವೇಳೆ ರಾಜ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಫೋಸ್ಟರ್ ಒಂದರಲ್ಲಿ, ‘ಶೇ.40 ಕಮಿಷನ್ ಸರ್ಕಾರವು ರಾಜ್ಯದ 54 ಸಾವಿರ ಯುವಕರ ವೃತ್ತಿಜೀವನವನ್ನು ನಾಶ ಪಡಿಸಿದೆ’ ಎಂಬ ಹೇಳಿಕೆಯ ಜತೆಗೆ ನಟ ಅಖಿಲ್ ಅಯ್ಯರ್ ಅವರ ಫೋಟೋ ಅನ್ನು ಬಳಕೆ ಮಾಡಿಕೊಂಡಿದೆ.
PayCM: ಬಿಜೆಪಿ ಭ್ರಷ್ಟಾಚಾರ ಬಿಟ್ಹಾಕಿ, ಕ್ರಿಯೇಟಿವಿಟಿಗೆ ಮಾತ್ರ ನೆಟ್ಟಿಗರು ಫುಲ್ ಫಿದಾ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅಖಿಲ್, ‘ಅನುಮತಿ ಪಡೆಯದೇ ನನ್ನ ಫೋಟೋ ಅನ್ನು ಅನಧಿಕೃತವಾಗಿ ರಾಜ್ಯ ಕಾಂಗ್ರೆಸ್ ಬಳಕೆ ಮಾಡಿಕೊಳ್ಳಲಾಗಿದ್ದು, ಈ ಅಭಿಯಾನದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಈ ಕುರಿತು ರಾಜ್ಯ ಕಾಂಗ್ರೆಸ್ ವಿರುದ್ಧ ಕಾನೂನು ಸಮರ ನಡೆಸುವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಮುಖಂಡರಾದ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.