ಬೆಂಗಳೂರು[ಫೆ.27]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದರ ನಿಮಿತ್ತ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ನಗರದ ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ಸಂಜೆ 5 ಗಂಟೆಗೆ ಈ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಕೇಂದ್ರದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಯಡಿಯೂರಪ್ಪ ಅವರ ಕುರಿತು ವಿವಿಧ ಕ್ಷೇತ್ರಗಳ ಅವರ ಒಡನಾಡಿಗಳು ಬರೆದಿರುವ ಲೇಖನಗಳನ್ನು ಒಳಗೊಂಡ ‘ದಣಿವರಿಯದ ಧೀಮಂತ’ ಎಂಬ ಅಭಿನಂದನಾ ಗ್ರಂಥವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಬಿಡುಗಡೆಗೊಳಿಸಲಿದ್ದಾರೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಫಿ ಟೇಬಲ್‌ ಪುಸ್ತಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ.

ಸಮಾರಂಭದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್‌ ಜೋಶಿ, ಸುರೇಶ್‌ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷ ಸುರೇಶ್‌ ಅಂಗಡಿ ಅವರು ಉಪಸ್ಥಿತರಿರಲಿದ್ದಾರೆ.

ಬುಧವಾರ ಸಮಾರಂಭ ನಡೆಯುವ ಸ್ಥಳದ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ನಂತರ ಮಾತನಾಡಿ, ಇದು ಪಕ್ಷಾತೀತ ಕಾರ್ಯಕ್ರಮ. ದೊಡ್ಡಮಟ್ಟದ ಕಾರ್ಯಕ್ರಮ ನಡೆಸುವ ಉದ್ದೇಶವಿತ್ತು. ಆದರೆ, ಯಡಿಯೂರಪ್ಪ ಅವರೇ ಬೇಡ ಎಂದರು. ಹಿಂದೆ 2006ರಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ರಾಜನಾಥ್‌ ಸಿಂಗ್‌ ಅವರೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಹೀಗಾಗಿ, ಅವರನ್ನೇ ಉದ್ಘಾಟಕರನ್ನಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಹಾರ ತುರಾಯಿ ತರಬೇಡಿ: ಬಿಎಸ್‌ವೈ

ನನ್ನ ಹುಟ್ಟುಹಬ್ಬದ ಸಂದರ್ಭ ಯಾರು ಕೂಡ ಹಾರ ತುರಾಯಿ ತರುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಎಲ್ಲರ ಹಾರೈಕೆ, ಹರಕೆ ಹಾಗೂ ಆಶೀರ್ವಾದಗಳಿಂದಲೇ ನಿಮ್ಮೆಲ್ಲರ ಸೇವೆ ಮಾಡುವ ಸ್ಥಾನದ ಸೌಭಾಗ್ಯ ಪಡೆದಿದ್ದೇನೆ. ನನ್ನ ಜೀವನದ ಎಲ್ಲ ಘಟ್ಟಗಳಲ್ಲಿಯೂ ನಿಮ್ಮೆಲ್ಲರ ಪ್ರೀತಿಯ ಮಹಾಪೂರದಲ್ಲಿ ಮಿಂದು ಪುನೀತನಾಗಿದ್ದೇನೆ, ವಿನೀತನಾಗಿದ್ದೇನೆ. ಹೀಗಾಗಿ, ಗುರುವಾರ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿ ತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬಾರದು ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ನೋಡಿ | ಇಂದಿನ ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ:

"