ಬೆಂಗಳೂರು (ಜೂ. 08):  ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮತ್ತು ರೋಗಿಗಳ ಚಿಕಿತ್ಸೆಯ ವೆಚ್ಚ ಭರಿಸಲು ‘ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿ’ ಖಾತೆಗೆ ಮಾರ್ಚ್ 25 ರಿಂದ ಮೇ 19 ರವರೆಗೆ ಸಾರ್ವಜನಿಕರಿಂದ ಬರೋಬ್ಬರಿ 267 ಕೋಟಿ ರು. ಹರಿದುಬಂದಿದೆ. ಕೊರೋನಾ ರೋಗ ನಿಯಂತ್ರಿಸಲು ಅವಶ್ಯ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ಆಪತ್‌ ನಿಧಿಯಾಗಿ ಈ ಮೊತ್ತವನ್ನು ಸರ್ಕಾರ ಕಾಯ್ದಿರಿಸಿದೆ. ಈ ಕುರಿತು ಮಾಹಿತಿಯನ್ನು ಮಾಹಿತಿ ಹಕ್ಕು ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸರ್ಕಾರದಿಂದ ಪಡೆದುಕೊಂಡಿದ್ದಾರೆ.

ಸರ್ಕಾರ ಕೊಟ್ಟ ಮಾಹಿತಿ ಏನು: ಮುಖ್ಯಮಂತ್ರಿ ಕೋವಿಡ್‌-19 ಪರಿಹಾರ ನಿಧಿ ಖಾತೆಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಮತ್ತು ನಿಗಮ ಮಂಡಗಳಿಂದ ಒಟ್ಟು 267,72,37,574 ರು. ಸಂಗ್ರಹವಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ಚಿಕಿತ್ಸೆಗೆ ಮತ್ತು ರೋಗ ಹರಡುವುದನ್ನು ತಪ್ಪಿಸಲು ವೆಚ್ಚ ಭರಿಸುತ್ತಿದೆ.

ಕೋವಿಡ್‌ ಪರಿಹಾರ ನಿಧಿಗೆ ವೇತನ ನೀಡಿ ಮಾದರಿಯಾದ ಬಸ್‌ ಕಂಡಕ್ಟರ್‌..!

‘ಮುಖ್ಯಮಂತ್ರಿ ಕೋವಿಡ್‌-19 ಪರಿಹಾರ ನಿಧಿ ಖಾತೆಯಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ರೋಗ ನಿಯಂತ್ರಿಸಲು ಅವಶ್ಯ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ‘ಆಪತ್‌ ನಿಧಿ’ಯಾಗಿ ಕಾಯ್ದಿರಿಸಲಾಗಿದೆ. ಅದರಂತೆ ಮೇ 19ರವರೆಗೂ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್‌-19 ನಿಧಿ ಖಾತೆ ಸಂಖ್ಯೆ 39234923151ನಲ್ಲಿ ಒಟ್ಟು 267,72,37,574 ರು. ಲಭ್ಯವಿದೆ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರದ ಆಡಳಿತ ಹಾಗೂ ಸರ್ವಜನಿಕ ಮಾಹಿತಿ ಇಲಾಖೆ ಅಧೀನ ಕಾರ್ಯದರ್ಶಿ ಜಿ.ಎಲ್‌.ಗಣೇಶ ಕುಮಾರ್‌ ಮಾಹಿತಿ ನೀಡಿದ್ದಾರೆ.