ಬೆಂಗಳೂರು [ಮಾ.05]: 4 ನೇ ಬಾರಿ ಮುಖ್ಯಮಂತ್ರಿಯಾಗಿರುವ ಬಿ. ಎಸ್. ಯಡಿಯೂರಪ್ಪ ಅವರು ಗುರುವಾರ 2020 - 21 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಪ್ರಸಕ್ತ ಹಣ ಕಾಸು ಪರಿಸ್ಥಿತಿ ಹಿನ್ನೆಲೆ ಯಲ್ಲಿ ಎಲ್ಲವನ್ನೂ ಹೇಗೆ ಸರಿದೂಗಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

ತಮ್ಮ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ  ಮತ್ತೊಂದು ಬಜೆಟ್ ಮಂಡಿಸುವ ಗೋಜಿಗೆ ಹೋಗದ ಯಡಿಯೂರಪ್ಪ ಹಿಂದಿನ ಎಚ್ .ಡಿ. ಕುಮಾರಸ್ವಾಮಿ ಸರ್ಕಾರದ ಬಜೆಟ್‌ನ ಕಾರ್ಯಕ್ರಮಗಳನ್ನೇ ಮುಂದುವರೆಸಿದ್ದರು. 

ಇದೀಗ ಬಿಜೆಪಿ ಸರ್ಕಾರದ ಪೂರ್ಣ ಪ್ರಮಾ ಣದ ಬಜೆಟ್ ಮಂಡಿಸುತ್ತಿರುವುದರಿಂದ ಹಿಂದಿನ ಸರ್ಕಾರದ ಯಾವೆಲ್ಲ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಕೈಬಿಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 

ಇದು ಯಡಿಯೂರಪ್ಪ ಅವರ 7 ನೇ ಬಜೆಟ್ ಆಗಿದೆ. ಕಳೆದ ಬಾರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಗಾತ್ರ  2.34 ಲಕ್ಷ ಕೋಟಿ ರು. ಇತ್ತು. ಈ ಬಾರಿ ಬಜೆಟ್ ಗಾತ್ರ ಕಡಮೆಯಾಗಬಹುದು ಎಂಬ ವದಂತಿ ಹಬ್ಬಿದ್ದರೂ ಅದನ್ನು ಸ್ವತಃ ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ  ಬಹುತೇಕ 2.50 ಲಕ್ಷ ಕೋಟಿ ರು. ತಲುಪುವ ನಿರೀಕ್ಷೆಯಿದೆ.