- ಆಡಳಿತಕ್ಕೆ ವೇಗ ತರಲು ಅಧಿಕಾರಿಗಳಿಗೆ ಸೂಚನೆ- ಇಲಾಖೆಗಳ ಜತೆ ಸಮನ್ವಯ ಸಾಧಿಸಲು ತಾಕೀತು- ಡೀಸಿಗಳ ನಂತರ ಸಿಎಂರಿಂದ ಕಾರ‍್ಯದರ್ಶಿಗಳ ಸಭೆ
ಬೆಂಗಳೂರು(ಮೇ.18): ಸರ್ಕಾರದ ಯೋಜನೆಗಳ ಜಾರಿಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕಾಯ್ದುಕೊಳ್ಳಬೇಕು ಮತ್ತು ರೈತರಿಗೆ, ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗ ಸೇರಿದಂತೆ ಜನರಿಗೆ ನೇರವಾಗಿ ಡಿಬಿಟಿ ಮೂಲಕ ಆರ್ಥಿಕ ನೆರವು ನೀಡುವ ಕಾರ್ಯಕ್ರಮವನ್ನು ಜೂನ್ ತಿಂಗಳೊಳಗೆ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸಭೆ ನಡೆಸಿದ ಬೆನ್ನಲ್ಲೇ ಮಂಗಳವಾರ ವಿಧಾನಸೌಧದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಜತೆ ಸಿಎಂ ತುರ್ತು ಸಭೆ ನಡೆಸಿದರು. ಈ ವೇಳೆ ಬಜೆಟ್ ಅನುಷ್ಠಾನ, ಆಡಳಿತ ಚುರುಕುಗೊಳಿಸುವುದು, ಕಡತ ವಿಲೇವಾರಿ ಮತ್ತು ಇನ್ನಿತರ ವಿಷಯಗಳ ಕುರಿತು ಚರ್ಚಿಸಿದರು.
ಭೂಸ್ವಾಧೀನ ಬೇಗ ಪೂರ್ಣಗೊಳಿಸಿ:
ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಸಕಾಲಿಕವಾಗಿ ಅನುಷ್ಠಾನಗೊಳಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಕಾರ್ಯಕ್ರಮಗಳು ಮುಟ್ಟಬೇಕು. ಆರ್ಥಿಕ ಅಭಿವೃದ್ಧಿಗೆ ಪುಷ್ಟಿನೀಡುವ ಯೋಜನೆಗಳಿಗೆ ಭೂಸ್ವಾಧೀನ, ಟೆಂಡರ್ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಮುಗಿಸಬೇಕು. ಆಡಳಿತಕ್ಕೆ ವೇಗ ತಂದು, ದಕ್ಷತೆಯಿಂದ ಕೆಲಸಗಳಾಗಬೇಕು. ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡಬೇಕು. ಆಡಳಿತಾತ್ಮಕ ಪ್ರಕ್ರಿಯೆಗೆ ಹೊಸ ಚಾಲನೆ ನೀಡುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಸಮಿತಿ ತಿಳಿಸುವಂತೆ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಆಗಸ್ಟ್ ಒಳಗೆ ಎಲ್ಲಾ ಟೆಂಡರ್ ಅಂತಿಮ:
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಹಂತದಲ್ಲಿ ಅನುಷ್ಠಾನದ ಮೇಲ್ವಿಚಾರಣೆ ಮಾಡಬೇಕು. ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಕಾರ್ಯಾದೇಶದ ಜತೆಗೆ ಡಿಪಿಆರ್ ಆಗಬೇಕು. ಅಂದಾಜುಪಟ್ಟಿ, ಟೆಂಡರ್ ಪ್ರಕ್ರಿಯೆ, ಭೂ ಸ್ವಾಧೀನ ಪ್ರಕ್ರಿಯೆಗಳು ಕ್ಷಿಪ್ರಗತಿಯಲ್ಲಿ ಆಗಬೇಕು. ಕಾನೂನು ತಿದ್ದುಪಡಿಗಳನ್ನು ಪರಿಗಣಿಸಿ, ಹೊಸ ಕಾನೂನುಗಳನ್ನು ಅಧ್ಯಯನ ಮಾಡಿ ಅನುಷ್ಠಾನಗೊಳಿಸಬೇಕು. ಮಳೆಗಾಲದಲ್ಲಿ ಚಾಲನೆ ನೀಡಬಹುದಾದ ವೆಬ್‌ಸೈಟ್, ಡಿಬಿಟಿ ಮುಂತಾದ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು. ಆಗಸ್ಟ್ ತಿಂಗಳೊಳಗೆ ಎಲ್ಲಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಹೊಸ ಶಾಲಾ ಕೊಠಡಿಗಳ ನಿರ್ಮಾಣ:
6500ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಲೆಗಳ ಗುರುತಿಸುವಿಕೆ ಪ್ರಾರಂಭಿಸಿ, ಜೂನ್-ಜುಲೈ ತಿಂಗಳೊಳಗೆ ಸಿದ್ಧತೆ ಕೈಗೊಂಡು ಆಗಸ್ಟ್‌ನಲ್ಲಿ ಕಾಮಗಾರಿ ಪ್ರಾರಂಭವಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯಬೇಕು. ಗೋಶಾಲೆ, ಪಶು ಚಿಕಿತ್ಸಾಲಯ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರಲು ಸೂಕ್ತ ಯೋಜನೆ ಅಗತ್ಯತೆ ಇದೆ. ಕಾನ್ಸರ್ ರೋಗಿಗಳಿಗೆ 10 ಕಿಮೋಥೆರಪಿ ಕೇಂದ್ರಗಳ ಸ್ಥಾಪಿಸುವ ಯೋಜನೆಗೆ ರೂಪರೇಷೆ ಸಿದ್ಧಪಡಿಸಬೇಕು. ಕಡತ ವಿಲೇವಾರಿಗೆ ಇಲಾಖೆಗಳಿಗೆ ಗಡುವು ನೀಡಬೇಕು ಮತ್ತು ಸಕಾಲ ಯೋಜನೆಯಡಿ ಕಡತ ವಿಲೇವಾರಿ ಮಾಡಬೇಕು. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು. ಯಾವುದೇ ನಿಗಮಗಳಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಬಳಸದೆ ಖಾತೆಗಳಲ್ಲಿ ಇಡಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಉಮೇಶ್ ಕತ್ತಿ, ಮುನಿರತ್ನ, ಎಂ.ಟಿ.ಬಿ.ನಾಗರಾಜ, ನಾರಾಯಣಗೌಡ, ಬೈರತಿ ಬಸವರಾಜ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಿಎಂ ನಿರ್ದೇಶನಗಳು
- ಬಡವರಿಗಾಗಿ ರೂಪಿಸಿರುವ ಕಾರ‍್ಯಕ್ರಮ ಅನುಷ್ಠಾನಗೊಳಿಸಿ
- ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಕಾರ್ಯಕ್ರಮವನ್ನು ಮುಟ್ಟಿಸಿ
- ಭೂಸ್ವಾಧೀನ, ಟೆಂಡರ್ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳಿಸಿ
- ಆಡಳಿತಕ್ಕೆ ವೇಗ ತಂದು ದಕ್ಷತೆಯಿಂದ ಕೆಲಸವನ್ನು ಮಾಡಿ
- ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡಿ
