ಬೆಳಗಾವಿ[ಜ.13]: ಸಂಕ್ರಾಂತಿ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಆಘಾತವೊಂದು ಬಂದೆರಗಿದೆ. ಎಲ್ಲವೂ ಚೆನ್ನಾಗಿದೆ ಎಂದು ಕೈ ಪಾಳಯದ ನಾಯಕರು ಹೆಳಿಕೆ ನೀಡುತ್ತಿದ್ದರೂ ಸದ್ಯ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನ ಮಗ ಹಾಗೂ ಶಾಸಕ ಸದ್ದಿಲ್ಲದೆ  ಕಮಲ ಪಾಳಯ ಸೇರಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಅಷ್ಟಕ್ಕೂ ಆ ನಾಯಕ ಯಾರು? ಇಲ್ಲಿದೆ ವಿವರ

ಹೌದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ಪುತ್ರ ಮತ್ತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ ಶಾಸಕ ಗಣೆಶ್ ಹುಕ್ಕೇರಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ವಿಪ್ ಕೊಡುವ ಸಚೇತಕನೇ ಈಗ ಬಂಡಾಯ ಎದ್ದಿರುವುದು ಕೈ ಪಾಳಯದಲ್ಲಿ ಗೊಂದಲವೇರ್ಪಡುವಂತೆ ಮಾಡಿದೆ. 

ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಸಿಗದಿರುವುದೇ ಇವರ ಅತೃಪ್ತಿಗೆ ಕಾರಣವೆನ್ನಲಾಗಿದೆ. ಇನ್ನು ಈ ಶಾಸಕರೊಂದಿಗೆ ಕಾಂಗ್ರೆಸ್ ಪಾಳಯದ ಇತರ ಯವ್ಲೆಲ ನಾಯಕರು ಪಕ್ಷಾಂತರ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಬಿಜೆಪಿ ಸೇರಲು ದಿನಾಂಕವೂ ಫಿಕ್ಸ್!

ಗಣೇಶ್ ಹುಕ್ಕೇರಿ ಬಿಜೆಪಿ ಸೇರ್ಪಡೆಗೊಳ್ಳಲು ಜನವರಿ 19ನ್ನು ನಿಗಧಿಪಡಿಸಿದ್ದಾರೆ. ಸದ್ಯ ಶಾಸಕರ ಈ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೀಡು ಮಾಡುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ವಿಪ್ ಜಾರಿಗೊಳಿಸುವ ಪ್ರಮುಖ ನಾಯಕ ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡರೆ ಪಕ್ಷಕ್ಕೆ ಬಹುದೊಡ್ಡ ಆಗಾತವಾಗಲಿದೆ.