ಲಿಂಗರಾಜು ಕೋರಾ

ಬೆಂಗಳೂರು[ಜ.13]: ಕಳೆದ ವರ್ಷ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಬೆಳೆ ನಷ್ಟಅನುಭವಿಸಿದ 5.36 ಲಕ್ಷ ರೈತರಿಗೆ 1011 ಕೋಟಿ ರು. ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಸ್ವತಃ ಮುಖ್ಯಮಂತ್ರಿಗಳ ಹೆಸರಲ್ಲಿ ಪ್ರತಿಯೊಬ್ಬ ರೈತರಿಗೂ ಬೆಳೆ ಪರಿಹಾರ ಪಾವತಿಯ ಮಾಹಿತಿ ಪತ್ರ ರವಾನಿಸಲಾಗಿದೆ.

ವೈಯಕ್ತಿಕವಾಗಿ ಪ್ರತಿಯೊಬ್ಬ ರೈತನ ಹೆಸರಿಗೂ ಮುಖ್ಯಮಂತ್ರಿಗಳ ಪರವಾಗಿ ಜಿಲ್ಲಾಧಿಕಾರಿಗಳ ಮೂಲಕ ಪತ್ರ ಕಳುಹಿಸಿರುವ ಸರ್ಕಾರ, ಅತಿವೃಷ್ಟಿ​- ಪ್ರವಾಹದಿಂದ ಆದ ಬೆಳೆ ನಷ್ಟಕ್ಕೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ತಮ್ಮ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದೆ. ಅಲ್ಲದೆ, ಪತ್ರದಲ್ಲಿ ಸಂಬಂಧಿಸಿದ ರೈತನ ಹೆಸರು, ಆತನ ಒಡೆತನದ ಭೂಮಿಯ ಸರ್ವೆ ನಂಬರ್‌, ಯಾವ ಬೆಳೆಯ ನಷ್ಟಕ್ಕಾಗಿ ಯಾವ ಆಧಾರದಲ್ಲಿ ಎಷ್ಟುಪರಿಹಾರ ನೀಡಲಾಗಿದೆ ಎಂಬುದು ಸೇರಿದಂತೆ ಎಲ್ಲಾ ಮಾಹಿತಿಯನ್ನೂ ನೀಡಲಾಗಿದೆ.

ಅಲ್ಲದೆ, ರೈತರ ಕಷ್ಟಗಳನ್ನು ತಗ್ಗಿಸಲು ಪ್ರವಾಹದಿಂದಾದ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್‌/ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿಯಾಗಿ 10 ಸಾವಿರ ರು. ಪರಿಹಾರ ನೀಡಲಾಗಿದೆ. ಮಳೆ ಆಧಾರಿತ, ನೀರಾವರಿ ಹಾಗೂ ದೀರ್ಘಕಾಲಿಕ ಅಥವಾ ತೋಟಗಾರಿಕಾ ಬೆಳೆ ಎಂದು ವಿಂಗಡಿಸಿ ಪರಿಹಾರ ಒದಗಿಸಲಾಗಿದೆ. ಇದು ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ರೈತರ ಕಷ್ಟ ನಿವಾರಣೆಗೆ ಸಹಕಾರಿಯಾಗಲಿದೆ. ರೈತರು ಒಂದು ವೇಳೆ ತಮಗೆ ಪರಿಹಾರ ಪಾವತಿಯಾಗದಿದ್ದಲ್ಲಿ ಚಿಂತಿಸುವ ಅಗತ್ಯವಿಲ್ಲ.

ಕೇಂದ್ರದ ಬಳಿ ಪ್ರವಾಹ ಪರಿಹಾರ ಕೇಳುವುದು ಹೇಗೆಂಬ ಗೊಂದಲದಲ್ಲಿ ರಾಜ್ಯ ಸರ್ಕಾರ!

ಅಂತಹವರು ತಮ್ಮ ತಾಲೂಕು ಮತ್ತು ಜಿಲ್ಲಾಧಿಕಾರಿ ಕಾರ್ಯಾಲಯವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅಥವಾ ಕಂದಾಯ ಇಲಾಖೆಯ https://landrecords.karnataka.gov.in/pariharapayment ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಈ ಸಂಬಂಧ ಸದ್ಯದಲ್ಲೇ ಸಹಾಯವಾಣಿಯನ್ನೂ ತೆರೆಯಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಎಲ್ಲ ಅರ್ಹ ರೈತರಿಗೂ ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಪರಿಹಾರ ವರ್ಗಾವಣೆಯಾಗಲಿದೆ ಎಂಬ ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.

ನಿಮಗೆ ಪರಿಹಾರ ಬಂದಿದೆಯೇ? ಹೀಗೆ ಪರೀಕ್ಷಿಸಿ

ರೈತರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಮೊತ್ತ ತಲುಪಿದೆಯೇ ಎಂಬುದನ್ನು ಕಂದಾಯ ಇಲಾಖೆ ವೆಬ್‌ಸೈಟ್‌ https://landrecords.karnataka.gov.in/pariharapayment ಮೂಲಕ ತಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ಅಥವಾ ಪರಿಹಾರ ಅರ್ಜಿ ಸಂಖ್ಯೆ ನಮೂದಿಸಿ ಬೆರಳ ತುದಿಯಲ್ಲೇ ಪಡೆದುಕೊಳ್ಳಬಹುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಅಲ್ಲಿ ‘ಪರಿಹಾರ’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿದರೆ, ಮುಂದಿನ ಪುಟದ ಎಡಭಾಗದಲ್ಲಿ ‘ಪರಿಹಾರ ಪೇಮೆಂಟ್‌’ ಎಂಬ ಆಯ್ಕೆಯನ್ನು ಒತ್ತಿದರೆ ಅಲ್ಲಿ ರೈತರು ತಮ್ಮ ಆಧಾರ್‌ ಕಾರ್ಡ್‌ ನಂಬರ್‌ ಅಥವಾ ಎಂಟು ಅಂಕಿಗಳ ಅರ್ಜಿ ಸಂಖ್ಯೆ ನಮೂದಿಸಿ ಮಾಹಿತಿ ಪಡೆಯಬಹುದು. ತಮ್ಮ ಅರ್ಜಿ ಪರಿಗಣನೆಯಾಗಿದೆಯಾ, ತಿರಸ್ಕಾರವಾಗಿದೆಯಾ? ತಿರಸ್ಕಾರವಾಗಿದ್ದರೆ ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ? ಅಥವಾ ಪರಿಹಾರ ಈಗಾಗಲೇ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಿದ್ದರೆ ಎಷ್ಟುಮೊತ್ತದ ಪರಿಹಾರ ವರ್ಗಾವಣೆಯಾಗಿದೆ, ರೈತರ ಜಮೀನಿನ ಸರ್ವೆ ನಂಬರ್‌, ಪರಿಹಾರವನ್ನು ನೀರಾವರಿ, ಮಳೆ ಆಧಾರಿತ ಅಥವಾ ಖುಷ್ಕಿ ಎಂಬ ಬಗ್ಗೆ ಪ್ರತಿಯೊಂದು ಮಾಹಿತಿಯೂ ದೊರೆಯಲಿದೆ.

1070ಗೆ ಕರೆ ಮಾಡಿ:

ಮೊಬೈಲ್‌, ಇಂಟರ್‌ನೆಂಟ್‌, ಕಂಪ್ಯೂಟರ್‌ನಂತಹ ಸೌಲಭ್ಯಗಳಿಲ್ಲ ಎನ್ನುವಂತಹ ರೈತರು 1070 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ತಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ವಿಭಾಗದ ಮೂಲಗಳು ಮಾಹಿತಿ ನೀಡಿವೆ.

ರಾಜ್ಯದ ಎಲ್ಲಾ ಪ್ರವಾಹಪೀಡಿತ ಪ್ರದೇಶಗಳಲ್ಲಿನ ರೈತರಿಗೆ ಬೆಳೆ ನಷ್ಟಕ್ಕೆ ಸಂಬಂಧಿಸಿದ ಪರಿಹಾರ ಮೊತ್ತ ಡಿಸೆಂಬರ್‌ ತಿಂಗಳಿನಿಂದಲೇ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಿದೆ. ಪರಿಹಾರ ಮೊತ್ತ ಜಮೆಯಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಮೂಲಕ ಎಲ್ಲ ರೈತರಿಗೂ ಮುಖ್ಯಮಂತ್ರಿಗಳ ಹೆಸರಲ್ಲಿ ಪರಿಹಾರ ಮೊತ್ತ ಪಾವತಿಯ ಮಾಹಿತಿಯನ್ನೊಳಗೊಂಡ ಪತ್ರವನ್ನೂ ರವಾನಿಸಲಾಗಿದೆ.

- ಅನಿಲ್‌ಕುಮಾರ್‌, ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)

10 ಸಾವಿರ ರು. ಹೆಚ್ಚುವರಿ ಪರಿಹಾರ

ಕಳೆದ ಆಗಸ್ಟ್‌ನಲ್ಲಿ ಪ್ರವಾಹಕ್ಕೆ ಉತ್ತಾದ ಜಿಲ್ಲೆಗಳಲ್ಲಿ ಬೆಳೆ ನಷ್ಟಅನುಭವಿಸಿದ 5.36 ಲಕ್ಷ ರೈತರಿಗೆ ಈಗಾಗಲೇ 1011 ಕೋಟಿ ರು. ಬೆಳೆ ನಷ್ಟಪರಿಹಾರವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ. ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಒಬ್ಬ ರೈತನ ಜಮೀನಿನಲ್ಲಿ ಎಷ್ಟೇ ಬೆಳೆ ನಷ್ಟವಾಗಿದ್ದರೂ, 2 ಹೆಕ್ಟೇರ್‌ ಅಂದರೆ 5 ಎಕರೆಗೆ ಮಾತ್ರ ಬೆಳೆ ನಷ್ಟಪರಿಹಾರ ನೀಡಲಾಗುತ್ತದೆ. ಅದರಂತೆ, ಪ್ರತಿ ಹೆಕ್ಟೇರ್‌ ಬೆಳೆ ನಷ್ಟಕ್ಕೆ ಒಣ ಭೂಮಿಗೆ 16,800 ರು., ನೀರಾವರಿ ಭೂಮಿಗೆ 23,500 ರು. ಮತ್ತು ತೋಟಗಾರಿಕಾ ಬೆಳೆಗಳಿಗೆ 26,000 ರು. ನೀಡಬೇಕು. ಆದರೆ, ರಾಜ್ಯ ಸರ್ಕಾರ ಮಾರ್ಗಸೂಚಿದರಕ್ಕಿಂತ ಹೆಚ್ಚುವರಿಯಾಗಿ 10 ಸಾವಿರ ರು. ಸೇರಿಸಿ ಪರಿಹಾರ ನೀಡಲಾಗಿದೆ ಎಂದು ಕಂದಾಯ ಇಲಾಖೆ ವಿಪ್ಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.