ಬೆಂಗಳೂರು(ಮಾ.30): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭಾಗಿಯಾಗಿದ್ದಾರೆ ಎನ್ನಲಾದ ಸಿ.ಡಿ. ಪ್ರಕರಣ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ್ದು, ಸಿ.ಡಿ.ಯಲ್ಲಿನ ಯುವತಿ ಮಂಗಳವಾರ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.

ಯುವತಿಯ ಪರ ವಕೀಲರು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಡೆಪ್ಯುಟಿ ರಿಜಿಸ್ಟ್ರಾರ್‌ಗೆ ಸೋಮವಾರ ಅರ್ಜಿ ಸಲ್ಲಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಅರ್ಜಿಯನ್ನು ಪುರಸ್ಕರಿಸಿರುವ ರಿಜಿಸ್ಟ್ರಾರ್‌, ಪ್ರಕರಣವನ್ನು 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಿಸಿಕೊಂಡಿದ್ದು, ಮಂಗಳವಾರ ವಿಚಾರಣೆಗೆ ನಿಗದಿಪಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಯುವತಿಯ ಪರ ವಕೀಲ ಬಿ.ಎನ್‌.ಜಗದೀಶ್‌, ಅತ್ಯಾಚಾರಕ್ಕೊಳಗಾಗಿದ್ದಾರೆ ಎನ್ನಲಾದ ಯುವತಿಗೆ ಪ್ರಾಣ ಬೆದರಿಕೆ ಇದೆ. ಅಲ್ಲದೆ, ಅತ್ಯಾಚಾರ ಎಸಗಿರುವ ಆರೋಪಿ ಅತ್ಯಂತ ಪ್ರಭಾವಿಯಾಗಿದ್ದು, ವಿಶೇಷ ತನಿಖಾ ದಳದ ಮುಂದೆ ಹಾಜರಾದಲ್ಲಿ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಸಿಆರ್‌ಪಿಸಿ 164 ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಲಾಗಿತ್ತು. ನಮ್ಮ ಮನವಿಯನ್ನು ಪುರಸ್ಕರಿಸಿರುವ ರಿಜಿಸ್ಟ್ರಾರ್‌, ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ಅನುಮತಿ ನೀಡಿದ್ದಾರೆ. ಅಲ್ಲದೆ, ನ್ಯಾಯಾಲಯ ತಿಳಿಸಿದ ಸಮಯದಲ್ಲಿ ಸಂತ್ರಸ್ತೆಯನ್ನು ಹಾಜರುಪಡಿಸಲು ಸಿದ್ಧರಿದ್ದೇವೆ ಎಂದರು.

ಆದರೆ, ಎಲ್ಲಿ ಮತ್ತು ಯಾವಾಗ ಹಾಜರುಪಡಿಸಬೇಕು ಎಂಬುದನ್ನು ತಿಳಿಸಿಲ್ಲ. ನ್ಯಾಯಾಧೀಶರ ಮನೆಗೆ ಹಾಜರುಪಡಿಸಬೇಕಾ ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾ ಎಂಬುದನ್ನು ಇ-ಮೇಲ್‌ ಮೂಲಕ ತಿಳಿಸುವುದಾಗಿ ನ್ಯಾಯಾಲಯದ ಅಧಿಕಾರಿಗಳು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.

ಅಲ್ಲದೆ, ಯುವತಿಗೆ ಪ್ರಾಣ ಬೆದರಿಕೆಯಿರುವುದರಿಂದ ಎಲ್ಲಿಂದ ಭದ್ರತೆ ಒದಗಿಸಬೇಕು ಎಂಬುದನ್ನು ಶೀಘ್ರದಲ್ಲಿ ಎಸ್‌ಐಟಿಗೆ ತಿಳಿಸಲಾಗುವುದು ಎಂದು ಇದೇ ವೇಳೆ ಜಗದೀಶ್‌ ಹೇಳಿದರು.

ನಿನ್ನೆ ಕೋರ್‌್ಟಗೆ ಬಾರದ ಯುವತಿ:

ಸೋಮವಾರ ಯುವತಿ ಕೋರ್ಟ್‌ ಮುಂದೆ ಹಾಜರಾಗುವ ಸಾಧ್ಯತೆಗಳಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಸಿಎಂಎಂ ಕೋರ್ಟ್‌ ಸುತ್ತ-ಮುತ್ತ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್‌ ಪಾಟೀಲ್‌ ನೇತೃತ್ವದಲ್ಲಿ 2 ಎಸಿಪಿ, 5 ಇನ್‌ಸ್ಪೆಕ್ಟರ್‌, 10 ಸಬ್‌ ಇನ್‌ಸ್ಪೆಕ್ಟರ್‌ ಸೇರಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಯುವತಿ ಹಾಜರಾಗಲಿಲ್ಲ.