ಲೋಕಾಯುಕ್ತ ಬಲ ಪಡಿಸಲು ಒಪ್ಪಿಗೆ: ಹೆಚ್ಚುವರಿ ರಿಜಿಸ್ಟ್ರಾರ್ ನೇಮಕಕ್ಕೆ ಸಚಿವ ಸಂಪುಟ ತೀರ್ಮಾನ
ಲೋಕಾಯುಕ್ತ ಬಲಪಡಿಸುವ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಮಹತ್ವದ ತೀರ್ಮಾನಗಳನ್ನ ಕೈಗೊಂಡಿದೆ.
ಬೆಂಗಳೂರು, (ಸೆಪ್ಟೆಂಬರ್.14): ಕರ್ನಾಟಕ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಲೋಕಾಯುಕ್ತ ಬಲ ಪಡಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದ್ದು, ಇಂದು(ಬುಧವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಕರ್ನಾಟಕ ಲೋಕಾಯುಕ್ತ ತಿದ್ದುಪಡಿ (2022) ಕಾಯ್ದೆಗೆ ಕರ್ನಾಟಕ ಸಚಿವ ಸಂಪುಟವು ಒಪ್ಪಿಗೆ ನೀಡಿದ್ದು, ಲೋಕಾಯುಕ್ತಕ್ಕೆ ಹೆಚ್ಚುವರಿ (ಅಡಿಷನಲ್) ರಿಜಿಸ್ಟ್ರಾರ್ ನೇಮಕಕ್ಕೂ ಸಚಿವ ಸಂಪುಟ ತೀರ್ಮಾನಿಸಿದೆ.
ಅಲ್ಲದೇ ಲೋಕಾಯುಕ್ತ ನ್ಯಾಯಮೂರ್ತಿಗಳ ವೇತನ ಹೆಚ್ಚಿಸಿ, ಹೈಕೋರ್ಟ್ ನ್ಯಾಯಮೂರ್ತಿಗಳ ವೇತನಕ್ಕೆ ಸರಿಸಮಾನವಾದ ವೇತನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಕರ್ನಾಟಕ ಲೋಕಾಯುಕ್ತಕ್ಕೆ ಫುಲ್ ಪವರ್, ಹೈಕೋರ್ಟ್ ಆದೇಶಕ್ಕೆ ಸಿದ್ದು ಪಂಚರ್!
ಲೋಕಾಯುಕ್ತ ಬಲವರ್ಧನೆಗೆ ಸೂಚಿಸಿದ್ದ ಕೋರ್ಟ್
ಎಸಿಬಿ ರಚನೆಯನ್ನು ರದ್ದು ಪಡಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಹಿಂದೆ 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಎಸಿಬಿಯನ್ನು ರಚಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ನ್ಯಾಯಪೀಠ, ಎಸಿಬಿಯನ್ನು ರದ್ದುಪಡಿಸಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿ ಲೋಕಾಯುಕ್ತ ಬಲವರ್ಧನೆಗೆ ಆದೇಶ ಹೊರಡಿಸಿತ್ತು.
ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪಿಸಲು ತಿಳಿಸಿದ್ದು, ಎಸಿಬಿಯ ಎಲ್ಲ ಕೇಸ್ ಲೋಕಾಯುಕ್ತಕ್ಕೆ ನೀಡಲು ನ್ಯಾ. ಬಿ. ವೀರಪ್ಪ ನೇತೃತ್ವದಲ್ಲಿ ವಿಭಾಗೀಯ ಪೀಠ,ಮಹತ್ವದ ಆದೇಶಿಸಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು. ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ಹೇಳಿತ್ತು.
ACBಯಲ್ಲಿರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲು ಆದೇಶ
ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತ ಪೊಲೀಸರಿಗೆ ಈ ಹಿಂದೆ ಇದ್ದ ಠಾಣಾಧಿಕಾರವನ್ನು ನೀಡುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಎಸಿಬಿ ರದ್ದುಗೊಳಿಸಿ ಆದೇಶಿಸಿತ್ತು. ಇದೀಗ ಎಸಿಬಿಯಲ್ಲಿರುವ ಎಲ್ಲಾ ಪ್ರಕರಣಗಳನ್ನೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡುವಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಸೆಪ್ಟೆಂಬರ್ 12ರೊಳಗ್ಗೆ ಎಲ್ಲಾ ಪ್ರಕರಣಗಳು, ಇಲಾಖಾ ತನಿಖೆಗಳನ್ನು ವರ್ಗಾವಣೆ ಮಾಡಿ ಕಡತಗಳನ್ನು ಲೋಕಾಯುಕ್ತ ಎಸ್‌ಪಿಗಳಿಗೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಎಸಿಬಿಯಲ್ಲಿರುವ ಎಲ್ಲ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪ್ರಕರಣ ಹಾಗೂ ಖಾಸಗಿ ದೂರು ಪ್ರಕರಣಗಳ ವರ್ಗಾವಣೆ ಮಾಡಬೇಕು. ಸಂಪೂರ್ಣ ಕಡತಗಳನ್ನ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು," ಎಂದು ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ಎಸಿಬಿಯ ಎಲ್ಲ ಘಟಕಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಕಡತಗಳನ್ನ ವರ್ಗಾಯಿಸಲು ಸೂಚನೆ ನೀಡಲಾಗಿದೆ. ತಮ್ಮ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ಲೋಕಾಯುಕ್ತ ಪೊಲೀಸ್ ಅಧೀಕ್ಷಕರುಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. ಸಂಪೂರ್ಣ ಕಡತಗಳನ್ನ ವರ್ಗಾಯಿಸಿ ಸ್ವೀಕೃತಿ ಪಡೆಯಲು ಆದೇಶಿಸಲಾಗಿದೆ. ಸೆಪ್ಟೆಂಬರ್ 12ರ ಸಂಜೆ 5 ಗಂಟೆಯೊಳಗೆ ವರ್ಗಾಯಿಸಿ ಪಾಲನಾ ವರದಿ ಸಲ್ಲಿಸಲು ಸಿಂಗ್ ಸೂಚಿಸಿದ್ದಾರೆ.