Asianet Suvarna News Asianet Suvarna News

ಸಿಎಂ ಕುಮಾರಸ್ವಾಮಿಯಿಂದ ರೈತರ ಖಾತೆಗೆ 18 ಸಾವಿರ

ಕೇಂದ್ರ ಸರ್ಕಾರ ರೈತರ ಖಾತೆಗೆ ವಾರ್ಷಿಕವಾಗಿ  6 ಸಾವಿರ ಹಣ ನೀಡಿದರೆ ಕರ್ನಾ​ಟ​ಕವು ವಿದ್ಯುತ್‌ ಸಬ್ಸಿಡಿ ಸೇರಿ​ದಂತೆ ವಿವಿಧ ಬಾಬ್ತುಗಳಲ್ಲಿ ರೈತ​ರಿಗೆ ನೀಡಿ​ರುವ ಲಾಭ​ಗ​ಳನ್ನು ನಗದು ರೂಪಕ್ಕೆ ಪರಿ​ವ​ರ್ತಿ​ಸಿ​ದರೆ ಅದು 17-18 ಸಾವಿರ ರು. ಆಗು​ತ್ತ​ದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. 

Karnataka Budget Is Bigger Than Union Budget 2019
Author
Bengaluru, First Published Feb 9, 2019, 8:13 AM IST

ಬೆಂಗ​ಳೂರು :  ಇಡೀ ದೇಶ​ದಲ್ಲಿ ರೈತ​ರಿಗೆ ಅತ್ಯಂತ ಹೆಚ್ಚು ಪ್ರಯೋ​ಜನ ಒದ​ಗಿ​ಸುವ ಹಾಗೂ ಅವರ ಶ್ರೇಯೋ​ಭಿ​ವೃ​ದ್ಧಿಗೆ ಕಾರ್ಯ​ಕ್ರ​ಮ​ಗ​ಳನ್ನು ರೂಪಿ​ಸಿ​ರು​ವ ರಾಜ್ಯ​ವಿ​ದ್ದರೆ ಅದು ಕರ್ನಾ​ಟಕ. ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಅವರು ಐದು ಎಕರೆ ಜಮೀನು ಹೊಂದಿ​ರು​ವ​ವ​ರಿಗೆ ವರ್ಷಕ್ಕೆ ಆರು ಸಾವಿರ ರು. ನೀಡಿ ಅದನ್ನು ದೊಡ್ಡದು ಎಂದು ಬಿಂಬಿ​ಸು​ತ್ತಾರೆ.

ಕರ್ನಾ​ಟ​ಕವು ವಿದ್ಯುತ್‌ ಸಬ್ಸಿಡಿ ಸೇರಿ​ದಂತೆ ವಿವಿಧ ಬಾಬ್ತುಗಳಲ್ಲಿ ರೈತ​ರಿಗೆ ನೀಡಿ​ರುವ ಲಾಭ​ಗ​ಳನ್ನು ನಗದು ರೂಪಕ್ಕೆ ಪರಿ​ವ​ರ್ತಿ​ಸಿ​ದರೆ ಅದು 17-18 ಸಾವಿರ ರು. ಆಗು​ತ್ತ​ದೆ.

ಹೀಗೆಂದು ಹೇಳುವ ಮೂಲಕ ಕೇಂದ್ರ ಸರ್ಕಾ​ರ​ಕ್ಕಿಂತ ಕರ್ನಾ​ಟಕ ಸರ್ಕಾ​ರವೇ ಕೃಷಿಕ ಪರ ಸರ್ಕಾರ ಎಂದು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಪ್ರಬ​ಲ​ವಾಗಿ ವಾದಿ​ಸಿ​ದ​ರು.

ಶುಕ್ರ​ವಾರ 2019-20ನೇ ಸಾಲಿನ ಮುಂಗ​ಡ​ಪತ್ರ ಮಂಡಿ​ಸಿದ ನಂತರ ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ರಾಜ್ಯ ಸರ್ಕಾ​ರದ ಕೃಷಿ ಸಾಲ​ವನ್ನು ವ್ಯಂಗ್ಯವಾಡುವ ಮೋದಿ ಅವರ ಧೋರ​ಣೆ​ಯನ್ನು ಮತ್ತೊಮ್ಮೆ ಖಂಡಿ​ಸಿ​ದರು. ಜತೆಗೆ, ಕರ್ನಾ​ಟಕವೇ ಅತಿ ಹೆಚ್ಚು ರೈತ ಪರ ರಾಜ್ಯ ಎಂದು ವಾದಿ​ಸಿ​ದರು. ಜತೆಗೆ, ಈ ಬಾರಿಯ ಮುಂಗ​ಡ​ಪ​ತ್ರ​ದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿ​ಸಿದ ಕ್ಷೇತ್ರ​ಗ​ಳಿಗೆ ತಾವು ನೀಡಿ​ರುವ ಕೊಡು​ಗೆ​ಗ​ಳ​ನ್ನು ಪಟ್ಟಿಮಾಡಿ ಸಮ್ಮಿಶ್ರ ಸರ್ಕಾರ ರೈತ ಪರ ಎಂದು ಬಿಂಬಿ​ಸಿ​ಕೊಂಡ​ರು.

ಅಲ್ಲದೆ, ಹಿಂದಿನ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ತಮ್ಮ ಅವ​ಧಿ​ಯಲ್ಲಿ ಹುಬ್ಬ​ಳ್ಳಿ​ಯಲ್ಲಿ ರಾಜೀ​ವ್‌​ಗಾಂಧಿ ಆವಾಸ್‌ ಯೋಜನೆ ಅಡಿ​ಯಲ್ಲಿ ಜಾರಿ​ಗೊ​ಳಿ​ಸಿದ್ದ ಗೃಹ ನಿರ್ಮಾಣ ಯೋಜ​ನೆಯ ಉದ್ಘಾ​ಟ​ನೆಗೆ ಈಗ ಪ್ರಧಾನಿ ನರೇಂದ್ರ ಮೋದಿ ಆಗ​ಮಿ​ಸು​ತ್ತಿ​ದ್ದಾರೆ. ಈ ಯೋಜ​ನೆಗೆ ದೊಡ್ಡ ಮೊತ್ತ​ವನ್ನು ನೀಡಿ​ರುವ ಕರ್ನಾ​ಟಕ ಸರ್ಕಾ​ರಕ್ಕೆ ಈ ಬಗ್ಗೆ ಮಾಹಿ​ತಿಯನ್ನೂ ನೀಡಿಲ್ಲ. ಸಿದ್ದ​ರಾ​ಮಯ್ಯ ಅವರು ಕಾರ್ಯ​ಗ​ತ​ಗೊ​ಳಿಸಿದ ಈ ಯೋಜ​ನೆ ತಮ್ಮದೇ ಕೊಡುಗೆ ಎಂಬಂತೆ ಪ್ರಚಾರ ಪಡೆ​ದು​ಕೊ​ಳ್ಳಲು ಮೋದಿ ಆಗ​ಮಿ​ಸು​ತ್ತಿ​ದ್ದಾರೆ. ರಾಜ್ಯ ಸರ್ಕಾ​ರಕ್ಕೆ ಈ ಬಗ್ಗೆ ಮಾಹಿತಿ ನೀಡುವ ಸೌಜ​ನ್ಯ​ವನ್ನು ಅವರು ತೋರಿಲ್ಲ ಎಂದು ಹೇಳಿ​ದ​ರು.

ಕೃಷಿ ಸಾಲ ಮನ್ನಾ ಯೋಜ​ನೆಗೆ ಒಂದು ಕಂತಿ​ನಲ್ಲಿ ಪೂರ್ಣ​ವಾಗಿ ಏಕೆ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ಅವರು ಈ ಬಾರಿ 12, 650 ಕೋಟಿ ರು.ಗ​ಳನ್ನು ಮೀಸ​ಲಿ​ಡ​ಲಾ​ಗಿದೆ. ಒಟ್ಟಾರೆ ಈ ಯೋಜ​ನೆಗೆ ಅಗ​ತ್ಯ ಹಣ​ವನ್ನು ಒದ​ಗಿಸಿ ಈ ವರ್ಷ​ದೊ​ಳಗೆ ಯೋಜ​ನೆ​ಯನ್ನು ಸಂಪೂ​ರ್ಣ​ಗೊ​ಳಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದ​ರು.

ಔರಾ​ದ​ಕರ್‌ ವರದಿ ಜಾರಿಗೆ ಬದ್ಧ:  ಪೊಲೀ​ಸರ ವೇತನ ಹೆಚ್ಚಳಕ್ಕೆ ಸಂಬಂಧಿ​ಸಿದ ಔರಾ​ದ​ಕರ್‌ ವರದಿ ಬಗ್ಗೆ ಮುಂಗ​ಡ​ಪ​ತ್ರ​ದಲ್ಲಿ ಉಲ್ಲೇ​ಖವೇ ಇಲ್ಲ​ವಲ್ಲ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ಔರಾ​ದ​ಕರ್‌ ವರ​ದಿಯ ಶಿಫಾ​ರ​ಸು​ಗಳನ್ನು ಜಾರಿ ಹೇಗೆ ಮಾಡ​ಬೇಕು ಎಂಬ ಕುರಿತು ಪೊಲೀಸ್‌ ಇಲಾ​ಖೆಯ ಹಿರಿಯ ಅಧಿ​ಕಾ​ರಿ​ಗಳು ಇನ್ನು ವಿಸ್ತೃತ ವರ​ದಿ​ಯನ್ನು ನೀಡಿಲ್ಲ. ಈ ಪ್ರಕ್ರಿ​ಯೆ​ಯಲ್ಲಿ ಅವರು ತೊಡ​ಗಿ​ದ್ದಾರೆ. ಈ ಪ್ರಕ್ರಿಯೆ ಪೂರ್ಣ​ಗೊ​ಳಿಸಿ ಅಧಿ​ಕಾ​ರಿ​ಗ​ಳಿಂದ ವರದಿ ಬಂದ ಕೂಡಲೇ ಅದನ್ನು ಜಾರಿ​ಗೊ​ಳಿ​ಸು​ತ್ತೇನೆ ಎಂದ​ರು.

ಅಲ್ಲದೆ, ಔರಾ​ದ​ಕರ್‌ ವರ​ದಿ​ಯನ್ನು ಬಜೆ​ಟ್‌​ನಲ್ಲೇ ಜಾರಿ​ಗೊ​ಳಿ​ಸ​ಬೇಕು ಎಂದೇ​ನಿಲ್ಲ. ವರದಿ ಯಾವಾಗ ಬಂದರೂ ಅದನ್ನು ಜಾರಿ​ಗೊ​ಳಿ​ಸ​ಬ​ಹುದು. ಅಧಿ​ಕಾ​ರಿ​ಗಳು ನೀಡುವ ತಮ್ಮ ಪ್ರಕ್ರಿಯೆ ಮುಗಿಸಿ ವರದಿ ಮಂಡಿ​ಸಿದ ಕೂಡಲೇ ಜಾರಿ​ಗೊ​ಳಿ​ಸು​ವು​ದಾಗಿ ಸಮ​ಜಾ​ಯಿಷಿ ನೀಡಿ​ದ​ರು.

Follow Us:
Download App:
  • android
  • ios