ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರ ತನ್ನ ಎರಡನೇ ಬಜೆಟ್‌ನಲ್ಲಿಯೂ ಬಿಯರ್ ಪ್ರಿಯರಿಗೆ ಬರೆ ಹಾಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್‌ನಲ್ಲಿ ಬಿಯರ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಇದರಿಂದ ಇನ್ನು ಮುಂದೆ ಬಿಯರ್ ಮತ್ತಷ್ಟು ಕಹಿಯಾಗಲಿದ್ದು, ಮದ್ಯಪ್ರಿಯರ ಕಿಸೆ ಖಾಲಿ ಮಾಡಲಿದೆ. 

ಐಎಂಎಲ್ ಮೇಲೆ ತೆರಿಗೆ ಹೆಚ್ಚಿಸುವ ಗೋಜಿಗೆ ಹೋಗದೆ ಕೇವಲ ಬಿಯರ್ ಮೇಲೆ ತೆರಿಗೆಯನ್ನು ಕುಮಾರಸ್ವಾಮಿ ತುಸು ಜಾಸ್ತಿಯೇ ಹೆಚ್ಚಿಸಿದ್ದಾರೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150 ರಿಂದ ಶೇ.175 ಕ್ಕೆ ಹೆಚ್ಚಿಸಲಾಗಿದೆ. 

ಡ್ರಾಟ್ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.115 ರಿಂದ ಶೇ.150 ಕ್ಕೆ, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲಿನ ತೆರಿಗೆಯನ್ನು ಪ್ರತಿ ಬಲ್ಕ್ ಲೀಟರ್‌ಗೆ 5 ರು.ನಿಂದ 10 ರು.ಗೆ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀಟರ್‌ಗೆ 12 . 50 ದಿಂದ 25  ರು.ಗೆ ಹೆಚ್ಚಿಸಲಾಗಿದೆ. ಇನ್ನು ಲೋ ಆಲ್ಕೋಹಾಲಿಕ್ ಬಿವರೇಜಸ್ (ಎಲ್.ಎ.ಬಿ) ಮೇಲಿನ ಅಬಕಾರಿ ಸುಂಕವನ್ನು ಹಾಲಿಯಿರುವ ಪ್ರತಿ ಬಲ್ಕ್ ಲೀಟರ್‌ಗೆ 5 ರು.ನಿಂದ ೧೦ ರು.ಗೆ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.122 ರಿಂದ ಶೇ. 150 ಕ್ಕೆ ಹೆಚ್ಚಿಸಿದೆ.

ಸುಂಕ ಹೆಚ್ಚಳದಿಂದ ಪ್ರತಿ ಬಿಯರ್ ಬಾಟಲ್ ಮೇಲಿನ ದರವು 25 ರು.ನಿಂದ 30 ರು.ವರೆಗೆ ಹೆಚ್ಚಳವಾಗಲಿದೆ. ಇದು ಮದ್ಯಪ್ರಿಯರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಆಡಳಿತ ಮತ್ತು ಕಚೇರಿ ಸಂಬಂಧಿತ ಕಾರ್ಯವಿಧಾನಗಳಲ್ಲಿ ‘ಪಾರದರ್ಶಕತೆ’ ಮತ್ತು ‘ಪರಿಣಾಮಕಾರಿತ್ವ’ವನ್ನು ಕಾರ್ಯರೂಪಕ್ಕೆ ತರಲು ಅಬಕಾರಿ ಇಲಾಖೆಯಲ್ಲಿ ಒಟ್ಟು 39 ಸೇವೆಗಳನ್ನೊಳಗೊಂಡ ‘ಸಕಾಲ
ಯೋಜನೆ’ಯನ್ನು 2018 ರ ಸೆ.25 ರಿಂದ ಅನುಷ್ಠಾನಗೊಳಿಸಲಾಗಿದೆ. ಮದ್ಯ ಮಾರಾಟದ ಪರವಾನಗಿ ನವೀಕರಿಸುವ ವ್ಯವಸ್ಥೆ ವಿದ್ಯುನ್ಮಾನ (ಆನ್‌ಲೈನ್) ಮಾಡಲಾಗಿದೆ. ಒಟ್ಟಾರೆ ಮದ್ಯದ ಮೇಲಿನ ತೆರಿಗೆಯಿಂದಾಗ 2019 - 20 ನೇ ಆರ್ಥಿಕ ವರ್ಷದಲ್ಲಿ 20 ,950  ಕೋಟಿ ರು. ರಾಜಸ್ವ ಸಂಗ್ರಹಣೆ ಗುರಿ ಹೊಂದಿದೆ.