ಬೆಂಗಳೂರು (ಫೆ.20):  ಕೊರೋನಾ ಸೋಂಕು ಹೆಚ್ಚಳವಿರುವ ರಾಜ್ಯಗಳಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ ಹಾಗೂ ಮುಕ್ತ ಸಂಚಾರಕ್ಕೆ ನಿರ್ಬಂಧ ಸೇರಿದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಆರೋಗ್ಯ ಇಲಾಖೆ ಸ್ಪಷ್ಟಆದೇಶ ನೀಡಿದೆ. ಆದರೆ, ಗಡಿ ಜಿಲ್ಲೆಗಳ ಸ್ಥಳೀಯ ಆಡಳಿತ ಸದರಿ ಆದೇಶ ಜಾರಿ ಕುರಿತು ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ರಾಜ್ಯದಲ್ಲಿ ಕರೋನಾ ಪಿಡುಗು ಉಲ್ಬಣದ ಭೀತಿ ನಿರ್ಮಿಸಿದೆ.

ವಿಶೇಷವಾಗಿ ಸೋಂಕು ವಿಪರೀತ ಹೆಚ್ಚಿರುವ ಕೇರಳದಿಂದ ಆಗಮಿಸುವವರ ಬಗ್ಗೆ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆಗೆ ಆರೋಗ್ಯ ಇಲಾಖೆ ಸ್ಪಷ್ಟಆದೇಶ ನೀಡಿದೆ. ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯ ಮಾಡಿದೆ. ಆದರೆ, ಈ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳ ಸ್ಥಳೀಯ ಆಡಳಿತ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಕೇವಲ ನಾಮ್‌ಕೆವಾಸ್ತೆ ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಿವೆ. ಅಧಿಕಾರಿಗಳಿಗೆ ಚಾಟಿ ಬೀಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ವಿಚಾರದಲ್ಲಿ ಹೆಚ್ಚಿನ ಆಸ್ಥೆ ವಹಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

ಕೇರಳದಿಂದ ರಾಜ್ಯ ಪ್ರವೇಶಿಸುತ್ತಿರುವವರಿಗೆ ಕೇವಲ ದೇಹದ ಉಷ್ಣತೆ ಮಾತ್ರ ಪರೀಕ್ಷಿಸಿ ರಾಜ್ಯದಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತಿದೆ. ಉಷ್ಣತೆ ಪರೀಕ್ಷೆಯಿಂದ ಸೋಂಕು ಇದೆಯೋ ಇಲ್ಲವೋ ಎಂಬುದು ದೃಢಪಡುವುದಿಲ್ಲ. ಸೋಂಕಿನ ಬಗ್ಗೆ ಖಚಿತತೆ ಬರಬೇಕು ಎಂದರೆ ಆರ್‌ಟಿಪಿಸಿಆರ್‌ ಪರೀಕ್ಷೆಯೇ ನಡೆಯಬೇಕು. ಆದರೆ, ಈ ಬಗ್ಗೆ ಅಧಿಕಾರಿಗಳು ಹೆಚ್ಚು ಪ್ರಾಮುಖ್ಯತೆ ನೀಡದಿರುವುದು ಆತಂಕಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

ಕೊರೊನಾ ಹೋಯ್ತು ಅಂತ ಮೈಮರೆಯಬೇಡಿ, 2 ನೇ ಅಲೆ ಶುರುವಾಗಬಹುದು: ಸುಧಾಕರ್ ಎಚ್ಚರಿಕೆ

ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಡಳಿತಗಳು ಗಡಿ ಭಾಗದಲ್ಲಿ ಕೇರಳದಿಂದ ಬರುವವರನ್ನು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ತಪಾಸಣೆಗೆ ಒಳಪಡಿಸಬೇಕು. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳು ಹಾಗೂ ಸಂಬಂಧಪಟ್ಟಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಜ್ಞರು ಆಗ್ರಹಿಸುತ್ತಾರೆ.

ಮಹಾರಾಷ್ಟ್ರದಿಂದ ಬರುವವರಿಗೆ ಯಾವ ನಿಯಮವೂ ಇಲ್ಲ!

ಮಹಾರಾಷ್ಟ್ರದಲ್ಲೂ ಕೇರಳದಂತೆ ಅಧಿಕ ಪ್ರಕರಣ ವರದಿಯಾಗುತ್ತಿದೆ. ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಪ್ರಕರಣದಲ್ಲಿ ಶೇ.70ರಷ್ಟುಪ್ರಕರಣಗಳು ಕೇರಳ, ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿವೆ. ಮಹಾರಾಷ್ಟ್ರದಿಂದ ರಾಜ್ಯದ ಗಡಿ ಜಿಲ್ಲೆಗಳಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಅಂತಹವರ ಮೇಲೆ ಯಾವುದೇ ನಿಗಾ ವ್ಯವಸ್ಥೆಯಿಲ್ಲ. ಅವರಿಗೂ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಬೇಕು ಹಾಗೂ ಬಂದು ಹೋಗುವವರ ಮೇಲೆ ನಿಗಾ ವಹಿಸಬೇಕು ಎಂದು ವರದಿ ನೀಡಿದೆ. ಆದರೂ, ಆರೋಗ್ಯ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಆದೇಶ ಹೊರಡಿಸಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎನ್ನುತ್ತಾರೆ ತಜ್ಞರು.