ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು(ಆ.05): 1992 ಡಿಸೆಂಬರ್‌ ತಿಂಗಳ ಮೊದಲ ವಾರ. ಮಂದಿರವಲ್ಲೇ ಕಟ್ಟುವೆವು ಎಂದು ಘೋಷಣೆ ಕೂಗುತ್ತಾ ನಮ್ಮ ರಾಜ್ಯದ ವಿವಿಧ ಭಾಗಗಳಿಂದ ರಾಮಭಕ್ತರು ಅಯೋಧ್ಯೆಯ ರಾಮಜನ್ಮ ಭೂಮಿಗೆ ತಲುಪಿಯಾಗಿತ್ತು. ನಮ್ಮ ಹಾಗೆ ದೇಶದ ವಿವಿಧ ಪ್ರದೇಶಗಳಿಂದ ರಾಮಭಕ್ತರು ಆ ಪುಣ್ಯಭೂಮಿಯಲ್ಲಿ ಕಾಲಿಟ್ಟಾಗಿತ್ತು. ಡಿಸೆಂಬರ್‌ 6ರಂದು ಮಧ್ಯಾಹ್ನದಿಂದ ಸಂಜೆಯೊಳಗೆ ಏನು ನಡೆಯಿತು ಎನ್ನುವುದನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡಿದೆ.

ಅದು ನಡೆದು ಬಹುತೇಕ 28 ವರ್ಷಗಳಾಗುತ್ತಿವೆ. ಆವತ್ತು ಬೆಳಗ್ಗೆ 10 ಗಂಟೆಯ ಸಮಯ. ಪೂಜ್ಯ ಜಗದ್ಗುರುಗಳು, ಸಾಧು, ಸಂತ ಮಹಾರಾಜರು, ರಾಜಕೀಯ-ಸಾಮಾಜಿಕ ನಾಯಕರ ಉಪಸ್ಥಿತಿಯಲ್ಲಿ ಅಯೋಧ್ಯೆಯ ರಾಮಚಬೂತದ ಮೇಲೆ ಪೂಜೆ-ಭಜನೆ ಹೋಮ, ಹವನಗಳು ಆರಂಭಗೊಂಡಿದ್ದವು. ಉಡುಪಿಯ ಪರಮಪೂಜ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಉಡುಪಿಯ ಅಷ್ಟಮಠದ ಯತಿವರೇಣ್ಯರು, ಬೇಲಿ ಮಠಾಧೀಶರು, ಕೇರಳ ಮತ್ತು ತಮಿಳುನಾಡಿನ ವಿವಿಧ ಮಠಾಧಿಪತಿಗಳು, ಕಾಶಿ-ಹರಿದ್ವಾರ-ಪ್ರಯಾಗ-ಚಿತ್ರಕೂಟ ಕ್ಷೇತ್ರಗಳ ಸಾಧು, ಸಂತ, ಮಹಂತರು, ಪೂಜ್ಯ ವಾಸುದೇವಾನಂದಜಿಯವರು ಮತ್ತು ಅನೇಕ ಸಾಧು ಸಂತರು ವಿರಾಜಮಾನರಾಗಿದ್ದರು.

ರಾಮ ಮಂದಿರ ಹೋರಾಟ: ಆ ಕಾಲದ ಮಸುಕು ನೆನಪುಗಳು!

ವಿಶ್ವ ಹಿಂದೂ ಪರಿಷತ್‌ನ ಅಶೋಕ್‌ ಸಿಂಘಾಲ್‌, ವಿಷ್ಣು ಹರಿದ್ಮಾಲಿಯಾ, ಗಿರಿರಾಜ್‌ ಕಿಶೋರ್‌, ಶ್ರೀಶ ಚಂದ್ರ ದೀಕ್ಷಿತ್‌, ವಿನಯ ಕಟಿಯಾರ್‌ ಉಪಸ್ಥಿತರಿದ್ದರು. ಬಿಜೆಪಿಯ ಭೀಷ್ಮ ಎಂದೇ ಕರೆಯಲ್ಪಡುವ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಉಮಾ ಭಾರತಿ, ರಾಜಮಾತಾ, ಹೂ.ವೆ. ಶೇಷಾದ್ರಿ, ಸಾಧ್ವಿರಿತಂಬರಾ, ಪ್ರೇಮ್‌ಜಿ ಇದ್ದರು. ಎರಡು ಲಕ್ಷ ಕರಸೇವಕರು ರಾಮಚಬೂತದಿಂದ ಹೊರಗೆ ಪವಿತ್ರ ಕರಸೇವೆಯಲ್ಲಿ ಭಾಗಿಯಾಗಲು ಕಾದು ನಿಂತಿದ್ದರು. ಸುಮಾರು 11.50ರ ಹೊತ್ತಿಗೆ ಅಯೋಧ್ಯೆಯ ಆಗ್ನೇಯ ದಿಕ್ಕಿನ ಸಾಕ್ಷಿಗೋಪಾಲ ಮಂದಿರದ ದಿಕ್ಕಿನಲ್ಲಿ ಪೊಲೀಸ್‌ ಅಡೆತಡೆ, ನಿಯಂತ್ರಕ ಪ್ರಮುಖರ ಕೋಟೆಯನ್ನು ಮುರಿದು ಅಂದಾಜು 500ರಷ್ಟಿದ್ದ ಕರಸೇವಕರು ರಾಮಚಬೂತದೊಳಗೆ ನುಗ್ಗಿ ಆಗಿತ್ತು.

ಎಲ್ಲರಲ್ಲಿ ಆ ಕ್ಷಣಗಳಲ್ಲಿ ಕಂಡು ಬರುತ್ತಿದ್ದದ್ದು ಆವೇಶ, ಘೋಷಣೆ ಮತ್ತು ರಾಮದೇವರ ಆಶೀರ್ವಾದದ ಕಂಪನ. ತೋಡೇಂಗೆ, ತೋಡೇಂಗೆ ಎಂದು ಹೇಳುತ್ತಾ ಏರು ಧ್ವನಿಯ ಘೋಷಣೆಗಳು ಚಬೂತರದೊಳಗೆಲ್ಲ ಪ್ರತಿ ಧ್ವನಿಸುತ್ತಿದ್ದವು. ಅನೇಕರದ್ದು ಕೈಯಲ್ಲಿ ರೋಷ ಬಿಟ್ಟರೆ ಏನೂ ಇರಲಿಲ್ಲ. ಕೆಲವರು ಕೈಕೊಡಲಿ ಹಿಡಿದುಕೊಂಡಿದ್ದರು. ಸಾಧುಗಳು, ಸಂತರು ಅವರನ್ನು ಶಾಂತರನ್ನಾಗಿಸಲು ಮಾಡುತ್ತಿದ್ದ ವಿನಂತಿಗಳನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಗುಂಬಜ್‌ಗಳ ಮುಂಭಾಗದ ಅಡ್ಡಗಟ್ಟೆಗಳ ಕಡೆಗೆ ಹಲವರು ದೌಡಾಯಿಸಿದರು. ಕಟಕಟೆಯ ಒಳಗೆ ನುಗ್ಗಿದರು. ಕೂಡಲೇ ಹತ್ತಾರು ಜನ ಮೂರು ಗುಂಬಜ್‌ಗಳ ಮೇಲೇರಿ ಕಾವಿಧ್ವಜ ಏರಿಸಿ ಜಯಘೋಷಗಳನ್ನು ಹಾಕಿದಾಗ ಅದಕ್ಕೆ ಇಡೀ ಅಯೋಧ್ಯೆಯಲ್ಲಿ ಘೋಷಣೆ ಮಾರ್ದನಿಸುತ್ತಿದೆಯೋ ಎನಿಸುವಷ್ಟುರೋಮಾಂಚನ. ಅಂತಹ ಕ್ಷಣಕ್ಕೆ ನಮ್ಮ ರಾಜ್ಯದ ಅಸಂಖ್ಯಾತ ಕರಸೇವಕರು ಕೂಡ ಸಾಕ್ಷಿಯಾಗಿದ್ದರು.

ಅಯೋಧ್ಯೆಯಲ್ಲಿ ರಾಮನಾಮ ಜಪ ಮೊಳಗಿಸಿದ ಮೋದಿ, ಶ್ರವಣ ಬೆಳಗೊಳದ ಉಲ್ಲೇಖ!

ಅಂದಿನ ಸಂಭ್ರಮ ಹೇಗೆ ಮರೆಯಲಿ!

ಇಂದು ರಾಮ ಜನ್ಮಭೂಮಿಯಲ್ಲಿಯೇ ರಾಮಚಂದ್ರ ದೇವರ ಭವ್ಯ ದೇಗುಲ ನಿರ್ಮಾಣವಾಗುವ ಕಾಲಘಟ್ಟದಲ್ಲಿ ನಾವು ಜೀವಿಸಿದ್ದೇವೆ ಎನ್ನುವುದೇ ನಮ್ಮ ಭಾಗ್ಯ. ನಮ್ಮ ಎಷ್ಟೋ ಹಿರಿಯರ ತ್ಯಾಗ, ಹೋರಾಟ ಮತ್ತು ಶ್ರದ್ಧೆಯಿಂದಲೇ ಇವತ್ತು ನಮಗೆ ಈ ಅದೃಷ್ಟಒದಗಿರುವುದು ನೂರಕ್ಕೆ ನೂರರಷ್ಟುನಿಜ.

ಆವತ್ತು ಅಡ್ವಾಣಿಜಿ, ಸಿಂಘಾಲ…, ರಾಜಮಾತಾ, ಮುರಳಿ ಮನೋಹರ್‌ ಜೋಷಿ, ಹೂ.ವೆ.ಶೇಷಾದ್ರಿ ಅವರು ಹಿಂದಿ, ಕನ್ನಡ, ತಮಿಳು, ತೆಲುಗು, ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ಗುಂಬಜ್‌ನ ಮೇಲಿರುವವರನ್ನು ಕೆಳಗಿಳಿಯುವಂತೆ ವಿನಂತಿಸಿದರು. ಎಷ್ಟುಮನವಿ ಮಾಡಿದರೂ ಅದು ಗಾಳಿಯಲ್ಲಿ ಸೇರಿತೇ ವಿನಃ ಕರಸೇವಕರನ್ನು ತಡೆಯಲೇ ಇಲ್ಲ.

ಇಡೀ ಅಯೋಧ್ಯೆಯಲ್ಲಿ ಅಂದೇ ಹೋಳಿ-ದಸರಾ-ದೀಪಾವಳಿಗಳ ಸಂಭ್ರಮ. ರಾಮದೇವರಿಗೆ ಅದೇ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ಶತ-ಶತಮಾನಗಳ ಆಶಯ ಸಾಕಾರವಾಗುವ ಕ್ಷಣ ಆವತ್ತೆ ಒದಗಿಬಂದಿತ್ತು. ಕರಸೇವಕರಿಗೆ, ಮಹಂತರಿಗೆ, ವಿಹಿಂಪ, ಭಾಜಪಾ ಪ್ರಮುಖರಿಗೆ ಎಷ್ಟುಧನ್ಯವಾದ ಹೇಳಿದರೂ ಕಡಿಮೆಯಾಗುತ್ತದೆ.

ರಾಮ ಮಂದಿರ ಭೂಮಿ ಪೂಜೆ; ಮರಳು ಶಿಲ್ಪದ ಮೂಲಕ ಸುದರ್ಶನ್ ಪಟ್ನಾಯಕ್ ನಮನ!

ಡಿಸೆಂಬರ್‌ 6ರ ಸಂಜೆ 4.45ರ ವೇಳೆಗೆ ವಿವಾದಿತ ಕಟ್ಟಡವು ಪೂರಾ ನೆಲಸಮವಾದ ಮರುಕ್ಷಣದಲ್ಲೇ ಹೊಸ ಮಂದಿರದ ನಿರ್ಮಾಣದ ಕಾರ್ಯವೂ ಆರಂಭಗೊಂಡಿತು. ಆಗ ಕರಸೇವಕರ ಪಾಲಿಗೆ ಒಂದೊಂದು ಕ್ಷಣವೂ ಮಹತ್ವ ಪೂರ್ಣವಾಗಿತ್ತು. ಕೇಂದ್ರಿಯ ಭದ್ರತಾ ಪಡೆಗಳ ಆಗಮನ ಯಾವುದೇ ಹೊತ್ತಿನಲ್ಲಿ ಆಗುವ ಸಾಧ್ಯತೆ ಇದ್ದ ಕಾರಣ ಎಲ್ಲವೂ ಅವಸರವಸರವಾಗಿ ನಡೆಯಬೇಕಿತ್ತು. ಆ ವಿವಾದಿತ ಕಟ್ಟಡ ಧ್ವಂಸಗೊಂಡ ಮರುದಿನದ ಒಳಗೆ ಕರಸೇವಕರ ನಿರಂತರ ಸೇವೆಯಿಂದಾಗಿ ಪೂಜಿತ ರಾಮಶಿಲೆ ಮತ್ತು ಸಿಮೆಂಟ್‌ ಬಳಸಿ 40*40 ಚೌಕದ, 15 ಅಡಿ ಎತ್ತರದ, 12 ಮೆಟ್ಟಿಲಿನ ತಾತ್ಕಾಲಿಕ ರಾಮ ಮಂದಿರವೊಂದು ನಿರ್ಮಾಣವಾಯಿತು. ರಾಮದೇವರ ಮರು ಪ್ರತಿಷ್ಠಾಪನೆಯೂ ಆಯಿತು. ಅಂದು ಮುಕ್ಕೋಟಿ ದ್ವಾದಶಿ, ಸಂಜೆಯ ಗೋಧೂಳಿ ಮುಹೂರ್ತ.

ಹಳೆಯದೆಲ್ಲ ಈಗ ನೆನಪು ಮಾತ್ರ

ಡಿಸೆಂಬರ್‌ 7ರಂದು ಬಾಬರಿ ಗೋಡೆಯ ಬೆಟ್ಟದೋಪಾದಿಯ ಅವಶೇಷಗಳ ರಾಶಿಯಿಂದ ಐದು ಅಡಿ ಎತ್ತರದ ಬೆಳ್ಳಿಯ ಸಿಂಹಾಸನ, ಎರಡು ಕ್ವಿಂಟಲ… ತೂಕದ ಬೃಹತ್‌ ಗಂಟೆ, ರಾಮ, ಭೈರವಿ, ವರುಣನ ಕಂಚಿನ ವಿಗ್ರಹಗಳು, ನಾಗರ ಲಿಪಿಯ ಕಲ್ಲಿನ ಶಾಸನಗಳು ಸಿಕ್ಕಿದ್ದವಲ್ಲ, ಜನರ ಹರ್ಷೋದ್ಗಾರಗಳು ಮುಗಿಲು ಮುಟ್ಟಿದ್ದವು. ರಾಮ ದೇವಸ್ಥಾನವನ್ನು ಧ್ವಂಸಗೊಳಿಸಿಯೇ ಬಾಬರನು ಮಸೀದಿ ಕಟ್ಟಿದ್ದಕ್ಕೆ ಇವೇ ಅದ್ಭುತ ಸಾಕ್ಷಿಗಳು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಅಯೋಧ್ಯೆಯಿಂದ ವಾಪಸಾಗುತ್ತಿದ್ದ ನಮ್ಮ ರೈಲುಗಳಿಗೆ ಜನರು ಕೈ ಮುಗಿಯುತ್ತಿದ್ದರು. ಎಲ್ಲವೂ ರಾಮದೇವರಿಗೆ ಅರ್ಪಿತ.

ಈ ಘಟನೆಯ ನಂತರ ದೇಶದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತಹ ಸರಣಿ ಪ್ರಕ್ರಿಯೆಗಳು ನಡೆದವು. ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ರಾಜೀನಾಮೆ ನೀಡಬೇಕಾಯಿತು. ಉತ್ತರ ಪ್ರದೇಶ ವಿಧಾನಸಭೆ ವಿಸರ್ಜನೆಯಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಭಾಜಪಾ ನಾಯಕರ ಬಂಧನಗಳಾದವು. ಗುಂಬಜ್‌ ಉರುಳಿದ ಬಗ್ಗೆ ಆಗಿನ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತು. ಜನತಾದಳ, ವಾಮಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿದವು. ವಿಶ್ವದೆಲ್ಲೆಡೆ ದೇವಮಂದಿರಗಳ ಮೇಲೆ ದಾಳಿ ನಡೆದವು. ಪೊಲೀಸರು ಗುಂಡು ಹಾರಿಸುವಂತಹ ಅನಿವಾರ್ಯತೆ ಬಂತು. 1100 ಜನರು ಪ್ರಾಣ ತೆರಬೇಕಾಯಿತು. ಈಗ ಅದೆಲ್ಲ ನೆನಪು ಮಾತ್ರ. ಹೊಸ ಮನ್ವಂತರಕ್ಕೆ ಈಗ ದೇಶ ಸಾಕ್ಷಿಯಾಗಿದೆ.

ದೇಶದೆಲ್ಲೆಡೆಯಿಂದ ಪವಿತ್ರ ಮೃತ್ತಿಕೆ

ದೇಶದ ವಿವಿಧ ತೀರ್ಥ ಕ್ಷೇತ್ರಗಳಿಂದ ಪಾವನ ಮೃತ್ತಿಕೆ ಹಾಗೂ ಹಲವು ನದಿಗಳಿಂದ ಸಂಗ್ರಹಿಸಲಾದ ಜಲವನ್ನು ಅಯೋಧ್ಯೆಯ ರಾಮಜನ್ಮ ಭೂಮಿಗೆ ಕಳುಹಿಸಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನ್ಮಸ್ಥಾನ ನಾಗಪುರವಿರಬಹುದು, ಸಂತ ರವಿದಾಸರ ಪಾವನ ಕ್ಷೇತ್ರ ಕಾಶಿ ಇರಬಹುದು, ಮಹರ್ಷಿ ವಾಲ್ಮೀಕಿಗಳ ಆಶ್ರಮವಾದ ಸೀತಾಮಡಿ ಇರಬಹುದು, ವಿದರ್ಭದ ಗೊಂದಿಯಾ ಜಿಲ್ಲೆಯ ಕಾಚಾರಗಡ್‌ ಇರಬಹುದು, ಜಾರ್ಖಂಡ್‌ನ ರಾಮರೇಖಾಧಾಮ್, ಮಧ್ಯಪ್ರದೇಶದ ಟಂಟ್ಯಾ ಬಿಲ್‌ ಪುಣ್ಯಭೂಮಿ, ಪಂಜಾಬ್‌ನ ಅಮೃತಸರದ ಹರಮಂದಿರ ಸಾಹಿಬ್‌, ಡಾ

ಅಂಬೇಡ್ಕರ್‌ ಅವರ ಜನ್ಮಸ್ಥಳ ಮಹೂ, ದಿಲ್ಲಿಯ ಜೈನ ಲಾಲ್‌ ಮಂದಿರ, ಆದಿಚುಂಚನಗಿರಿಯ ಮಠಾಧಿಪತಿಗಳಾದ ಡಾ.ನಿರ್ಮಲಾನಂದ ಸ್ವಾಮೀಜಿ ಅವರಿಂದ ಹಾಗೂ ಮಹಾತ್ಮ ಗಾಂಧಿ ಅವರು 72 ದಿನಗಳು ನೆಲೆಸಿದ್ದ ವಾಲ್ಮೀಕಿ ಮಂದಿರದಿಂದಲೂ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ.

ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಸಂತೋಷದ ಘಳಿಗೆ: ಹೆಚ್.ಡಿ.ಕುಮಾರಸ್ವಾಮಿ

ಸಾಮಾನ್ಯ ಪರಿಸ್ಥಿತಿಯಾಗಿದ್ದರೆ ನಮ್ಮ ಇಡೀ ದೇಶದಲ್ಲಿರುವ ರಾಮ ಭಕ್ತರಲ್ಲಿ ಬಹುತೇಕರು ಇಂದು ಅಯೋಧ್ಯೆಯಲ್ಲಿರುತ್ತಿದ್ದರು. 1990 ಮತ್ತು 1992ರಲ್ಲಿ ಹೋಗಲಾಗದಿದ್ದವರಿಗೆ ಈಗ ಹೋಗುವ ಆಸೆ ಇದ್ದೇ ಇರುತ್ತದೆ. ಅದರೊಂದಿಗೆ ಆವತ್ತು ಕರಸೇವೆಯಲ್ಲಿ ಭಾಗವಹಿಸಿದವರಿಗೆ ಈ ಬಾರಿ ದ್ವಿಗುಣ ಉತ್ಸಾಹದೊಂದಿಗೆ ಅಲ್ಲಿಗೆ ತೆರಳುವ ಮನಸ್ಸಿತ್ತು. ಕೇಂದ್ರದಲ್ಲಿ ಪ್ರಧಾನಿಯಾಗಿ ಸಂತನಂತೆ ಬದುಕನ್ನು ದೇಶಕ್ಕಾಗಿ ಮುಡಿಪಾಗಿಟ್ಟಿರುವ ನರೇಂದ್ರ ಮೋದಿ, ಅಯೋಧ್ಯೆಯಲ್ಲಿ ಸಂತರೇ ಆಗಿರುವ ಯೋಗಿ ಆದಿತ್ಯನಾಥ ಇದಕ್ಕಿಂತ ಪ್ರಶಸ್ತ ಸಮಯ ಬೇರೆ ಯಾವುದಿದೆ ಅಲ್ಲವೇ? ಎಲ್ಲರೂ ಇಂದು ತಾವಿರುವಲ್ಲಿಯೇ ಕೊರೋನಾ ಮಾರ್ಗಸೂಚಿಯನ್ನು ಪಾಲಿಸುತ್ತಾ ರಾಮ ಮಂದಿರ ಸಾಕಾರವಾಗುತ್ತಿರುವುದರ ಸಂಭ್ರಮವನ್ನು ಆಚರಿಸಬೇಕಿದೆ.

ಅಂದಿನ ಕಲ್ಪನೆ, ಇಂದಿನ ಭವ್ಯ ದೇಗುಲ

ವಿಶ್ವ ಹಿಂದೂ ಪರಿಷತ್‌ ಮುಖಂಡರಾಗಿದ್ದ ಅಶೋಕ್‌ ಸಿಂಘಾಲ… 30 ವರ್ಷಗಳ ಹಿಂದೆಯೇ ರಾಮ ಮಂದಿರದ ನೀಲನಕ್ಷೆ ಸಿದ್ಧಪಡಿಸುವಂತೆ ಅದರ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ ಸೋಂಪುರ ಅವರಿಗೆ ತಿಳಿಸಿದ್ದರು. ಆದರೆ ಆಗ ನಿಜಕ್ಕೂ ಮಂದಿರದ ವಿನ್ಯಾಸ ರೂಪಿಸುವುದು ಸವಾಲಿನ ಕೆಲಸವಾಗಿತ್ತು. 1990ರ ಅವಧಿಯಲ್ಲಿ ಅಯೋಧ್ಯೆಯ ಉದ್ದೇಶಿತ ರಾಮ ಮಂದಿರ ನಿರ್ಮಾಣವಾಗುವ ಜಾಗದಲ್ಲಿ ಭಾರೀ ಭದ್ರತೆ ಇತ್ತು. ದೇಗುಲದ ಪ್ರಾಂಗಣದೊಳಗೆ ಏನನ್ನೂ ತೆಗೆದುಕೊಂಡು ಹೋಗಲು ಭದ್ರತಾ ಅಧಿಕಾರಿಗಳು ಬಿಡುತ್ತಿರಲಿಲ್ಲ. ಅಳತೆ ಪಟ್ಟಿಯನ್ನು ಕೂಡ ಒಳಗೆ ಹೋಗುವಂತೆ ಇರಲಿಲ್ಲ. ಆದರೆ ಪಾದಗಳ ಅಳತೆಯಿಂದ ಸೋಂಪುರ ಅವರು ತಮ್ಮದೇ ಶೈಲಿಯಲ್ಲಿ ಅಳತೆ ತೆಗೆದುಕೊಂಡಿದ್ದರು. ಸೋಂಪುರ ಅವರ ಪುತ್ರ ಆಶಿಶ್‌ ಅವರು ಕಳೆದ ಜೂನ್‌ನಲ್ಲಿ ಪರಿಷ್ಕೃತ ನೀಲನಕ್ಷೆಯನ್ನು ಟ್ರಸ್ಟ್‌ ಮುಂದೆ ಇಟ್ಟು ಅನುಮೋದನೆ ಪಡೆದುಕೊಂಡಿದ್ದಾರೆ. ಆದರೆ ಪ್ರಸ್ತುತ ಹೊಸ ನೀಲ ನಕ್ಷೆ ನೋಡಿದರೆ ಮಂದಿರ ಬಹುತೇಕ ದುಪ್ಪಟ್ಟು ಗಾತ್ರದಲ್ಲಿ ಇರಲಿದೆ. ದೇಗುಲವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ಮೊದಲು ಎರಡು ಗುಮ್ಮಟಗಳ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಆದರೆ ಬದಲಾದ ಯೋಜನೆಯಲ್ಲಿ ಐದು ಗುಮ್ಮಟಗಳು ನಿರ್ಮಾಣವಾಗಲಿವೆ. ಶ್ರೀರಾಮ ಎಂದು ವಿವಿಧ ಭಾಷೆಗಳಲ್ಲಿ ಬರೆಯಲಾಗಿರುವ, 30 ವರ್ಷದ ಹಿಂದೆ ದೇಶಾದ್ಯಂತ ಸಂಗ್ರಹಿಸಲಾದ 2 ಲಕ್ಷ ಇಟ್ಟಿಗೆಗಳನ್ನು ಕೂಡ ಬಳಸಲಾಗುತ್ತದೆ. ಹತ್ತು ಎಕರೆ ವಿಸ್ತೀರ್ಣದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದ್ದು, ಇತರ 57 ಎಕರೆ ದೇವಾಲಯ ಸಂಕೀರ್ಣವಾಗಿ ಅಭಿವೃದ್ಧಿಯಾಗಲಿದೆ. 3 ವರ್ಷಗಳಲ್ಲಿ ಭವ್ಯ ಮಂದಿರ ನಿರ್ಮಾಣಗೊಂಡು ಶ್ರೀರಾಮಚಂದ್ರ ದೇವರು ವಿರಾಜಮಾನರಾಗಲಿದ್ದಾರೆ. ಅದನ್ನು ಕಣ್ತುಂಬ ತುಂಬಿಕೊಳ್ಳಲು ಈಗಲೇ ನಮ್ಮ ಮೈಮನಸ್ಸು ಸಿದ್ಧವಾಗುತ್ತಿದೆ.