ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ತರುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಬೆಂಗಳೂರು (ಮಾ.04): ರಾಜ್ಯದಲ್ಲಿ ಅನೈತಿಕ ಶಿಶುವಾಗಿ ಜನಿಸಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಡವರು, ರೈತರು ಸೇರಿದಂತೆ ಎಲ್ಲಾ ವರ್ಗದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಆಫ್ ಆಗಿರುವ ಸರ್ಕಾರವನ್ನು ಕಿತ್ತೊಗೆದು ರಾಜ್ಯ ಉಳಿಸಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ದೇವನಹಳ್ಳಿಯ ಜನಧ್ವನಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಜನರ ಆಶೀರ್ವಾದ ಇಲ್ಲದಿದ್ದರೂ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯ ಸರ್ಕಾರದ ಬಸ್ಸು ನಿಂತುಹೋಗಿದ್ದು, ನಿಂತು ಹೋಗಿರುವ ಬಸ್ಸಿನ ಸ್ಟೇರಿಂಗ್ ತಿರುಗಿಸುತ್ತಾ ಭ್ರಷ್ಟಾಚಾರ ಮಾಡಿ ರಾಜ್ಯ ಲೂಟಿ ಹೊಡೆಯುತ್ತಿದ್ದಾರೆ. ಜನರಿಗೆ ನೀಡಿರುವ ಒಂದು ಭರವಸೆಯನ್ನೂ ಈಡೇರಿಸಿಲ್ಲ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯಗೆ ಆಹ್ವಾನಿಸಿದ BJP ಶಾಸಕ : 10 ಎಕರೆ ಜಮೀನು ನೀಡುವುದಾಗಿ ಹೇಳಿಕೆ ..
ರೈತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಕಷ್ಟಕ್ಕೆ ಸಿಲುಕಿದ್ದಾರೆ. ನರೇಂದ್ರ ಮೋದಿ ಉದ್ಯೋಗ ಸೃಷ್ಟಿಮಾಡುವ ಬದಲು ಪಕೋಡಾ ಮಾರಿ ಎನ್ನುತ್ತಾರೆ. ನೋಟು ಅಮಾನ್ಯೀಕರಣ ಬಳಿಕ ಲಕ್ಷಾಂತರ ಜನ ಬೀದಿಪಾಲಾಗಿದ್ದಾರೆ. ಅಚ್ಛೇ ದಿನ್ ಆಯೇಗಾ ಎಂದವರು ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ದರ ಗಗನಕ್ಕೇರಿಸಿದ್ದಾರೆ. ಕೇವಲ ಅಂಬಾನಿ, ಅದಾನಿ ಅಭಿವೃದ್ಧಿಗೆ ಸೀಮಿತವಾಗಿ ರೈತ ವಿರೋಧಿ ಕಾನೂನು ಜಾರಿಗೆ ತಂದಿದ್ದಾರೆ. ನರೇಂದ್ರ ಮೋದಿಯವರಿಗೆ ಮಾನ, ಮರ್ಯಾದೆ ಎಂಬುದು ಇಲ್ಲದಂತಾಗಿದೆ ಎಂದು ಟೀಕಿಸಿದರು.
ಜನರ ಕಷ್ಟಗಳಿಗೆ ಸ್ಪಂದಿಸದ ಈ ಸರ್ಕಾರವನ್ನು ಕಿತ್ತೊಗೆಯಬೇಕು. ಹೀಗಾಗಿ ಜನರ ನೋವಿಗೆ ಧ್ವನಿಯಾಗಲು 100 ಕ್ಷೇತ್ರಗಳಲ್ಲಿ ಜನಧ್ವನಿ ಜಾಥಾ ಹಮ್ಮಿಕೊಂಡಿದ್ದೇವೆ. ಟಿಪ್ಪು ಸುಲ್ತಾನ್ ಹುಟ್ಟಿದ ದೇವನಹಳ್ಳಿಯಿಂದ ಜಾಥಾ ಪ್ರಾರಂಭಿಸುತ್ತಿದ್ದೇವೆ. ನಾಡು, ದೇಶ ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು ಎಂದರು.
