ಬೆಂಗಳೂರು(ಮೇ.31): ಕೋವಿಡ್‌-19 ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು, ಜಗಿಯುವ ತಂಬಾಕು ಉತ್ಪನ್ನಗಳು ಮತ್ತು ಪಾನ್‌ ಮಸಾಲ ಉತ್ಪನ್ನಗಳ ಸೇವನೆಯನ್ನು ಆರೋಗ್ಯ ಇಲಾಖೆಯು ನಿಷೇಧಿಸಿ ಆದೇಶ ಹೊರಡಿಸಿದೆ. ಉಗಿದರೆ ಭಾರತೀಯ ಅಪರಾಧ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಕೇಸು ಹಾಕಲಾಗುತ್ತದೆ ಹಾಗೂ ಆರೋಪ ಸಾಬೀತಾದರೆ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

‘ಕೊರೋನಾ ಸೋಂಕು ತಡೆಯುವ ಸಂಬಂಧ ರಾಜ್ಯ ಸರ್ಕಾರವು ದಿಟ್ಟಕ್ರಮಗಳನ್ನು ಕೈಗೊಂಡಿದ್ದು, ಮತ್ತಷ್ಟುಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಜಗಿಯುವ ತಂಬಾಕು ಉತ್ಪನ್ನ, ಪಾನ್‌ ಮಸಾಲ ಉತ್ಪನ್ನಗಳ ಸೇವೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಎಫೆಕ್ಟ್‌: ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾರ್ವಜನಿಕ ಸ್ಥಳದಲ್ಲಿ ಜಗಿಯುವ ತಂಬಾಕು ಮತ್ತು ಪಾನ್‌ ಮಸಾಲ ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್‌-19 ಪ್ರಕರಣಗಳು ಮತ್ತು ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಇರುತ್ತದೆ. ಬಿಹಾರ, ಜಾರ್ಖಂಡ್‌ ಸೇರಿದಂತೆ ಇತರೆ ಕೆಲ ರಾಜ್ಯದಲ್ಲಿ ಎಲ್ಲಾ ರೀತಿಯ ಜಗಿಯುವ ತಂಬಾಕು ಮತ್ತು ಪಾನ್‌ ಮಸಾಲ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ನಿಷೇಧಿಸಿ ಆದೇಶಿಸಲಾಗಿದೆ’ ಎಂದು ಹೇಳಿದರು.

ಇಂದು ತಂಬಾಕು ರಹಿತ ದಿನ:

ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸಾವು-ನೋವುಗಳು ಸಂಭವಿಸುವುದರಿಂದ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿದೆ. ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಧ್ಯೇಯ ವಾಕ್ಯವೆಂದರೆ ‘ತಂಬಾಕು ಉದ್ಯಮಗಳ ಕುತಂತ್ರ ಮತ್ತು ತಂಬಾಕು ಮತ್ತು ನಿಯೋಟಿನ್‌ ಬಳಕೆಯಿಂದ ಯುವ ಪೀಳಿಗೆಗಳ ರಕ್ಷಣೆ ಮಾಡುವುದು’ ಆಗಿದೆ ಎಂದು ರಾಮುಲು ಹೇಳಿದರು.

21 ವರ್ಷಕ್ಕಿಂತ ಕೆಳಗಿನವರಿಗೆ ಸಿಗರೆಟ್‌, ತಂಬಾಕು ನಿಷಿದ್ಧ?

‘ತಂಬಾಕು ಮತ್ತುಪಾನ್‌ ಮಸಾಲ ಉತ್ಪನ್ನಗಳ ಸೇವನೆ ಮಾಡುವುದರಿಂದ ಮನುಷ್ಯರ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿ ಕೋವಿಡ್‌-19 ಸೋಂಕಿಗೆ ತುತ್ತಾಗುವ ಅಪಾಯ ಅಧಿಕವಾಗಿರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮತ್ತು ಉಗುಳಿವಿಕೆಯಿಂದಾಗಿ ಕೋವಿಡ್‌-19 ಹರಡುವ ಸಾಧ್ಯತೆ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ತಿಳಿಸಿದರು.

ಯಾವ ಕೇಸು? ಎಷ್ಟುಶಿಕ್ಷೆ?

ಐಪಿಸಿ ಸೆಕ್ಷನ್‌ 188: ಸರ್ಕಾರದ ಆದೇಶಕ್ಕೆ ಧಿಕ್ಕಾರ: ದಂಡ/6 ತಿಂಗಳ ವರೆಗೆ ಜೈಲು

ಐಪಿಸಿ ಸೆಕ್ಷನ್‌ 268: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ, ಇತರರಿಗೆ ತೊಂದರೆ ಮಾಡುವುದು

ಐಪಿಸಿ ಸೆಕ್ಷನ್‌ 269: ಇನ್ನೊಬ್ಬರಿಗೆ ಸೋಂಕು ತಗುಲಿಸುವುದು: 6 ತಿಂಗಳವರೆಗೆ ಜೈಲು/ದಂಡ

ಐಪಿಸಿ ಸೆಕ್ಷನ್‌ 270: ಇನ್ನೊಬ್ಬರಿಗೆ ಪ್ರಾಣಕ್ಕೆ ಅಪಾಯವಾಗಬಲ್ಲ ಸೋಂಕು ತಗುಲಿಸುವುದು: 2 ವರ್ಷವರೆಗೆ ಜೈಲು/ದಂಡ