ಮರಾಠಿಗರ ಪುಂಡಾಟಿಕೆ ಖಂಡಿಸಿ ವಾಟಾಳ್ ನಾಗರಾಜ್ ಮಾ.22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ, ರಕ್ಷಣಾ ವೇದಿಕೆಯ ಬಣಗಳು ಬೆಂಬಲ ನೀಡುವಲ್ಲಿ ಭಿನ್ನಾಭಿಪ್ರಾಯ ಹೊಂದಿವೆ. ಪ್ರವೀಣ್ ಶೆಟ್ಟಿ ಬಣ ಬೆಂಬಲಿಸಿದರೆ, ನಾರಾಯಣಗೌಡ ಬಣ ಬೆಂಬಲಿಸುವುದಿಲ್ಲ.
ಬೆಂಗಳೂರು (ಫೆ.26): ಕರ್ನಾಟಕದಲ್ಲಿ ಮರಾಠಿಗಳ ಪುಂಡಾಟ ಹತ್ತಿಕ್ಕುವುದು, ಎಂಇಎಸ್ ನಿಷೇಧ, ಶಿವಸೇನೆ ಸದಸ್ಯರ ಗಡಿಪಾರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾ.22ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇದೀಗ ಕರ್ನಾಟಕದ ಹೋರಾಟಕ್ಕೂ ರಕ್ಷಣಾ ವೇದಿಕೆಯ ಬಣಗಳು ಒಂದಾಗಲಿಲ್ಲ. ಕರವೇ ಪ್ರವೀಣ್ ಶೆಟ್ಟಿ ಅವರ ಬಣದಿಂದ ಬೆಂಬಲ ಸೂಚಿಸಿದರೆ, ನಾರಾಯಣಗೌಡರ ಬಣದಿಂದ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್‌ಗೆ ಬೆಂಬಲ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು, ವಾಟಾಳ್ ನಾಗರಾಜ್ ಅವರು ಹಿರಿಯ ಮುಖಂಡರು. ಅವರ ಬಗ್ಗೆ ತುಂಬಾ ಗೌರವವಿದೆ. ನಮ್ಮ ಹೋರಾಟಗಳಿಗೆ ಬೆಂಬಲ ಕೊಟ್ಟಿದ್ದಾರೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಅವರ ಜೊತೆ ಇದ್ದೇವೆ. ಆದರೆ, ಯಾವ ರೀತಿ ಬೆಂಬಲ ಕೊಡಬೇಕು ಅಂತ ಚರ್ಚೆ ಮಾಡಬೇಕು. ನಮ್ಮ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕು ಎಂದರು.
ರಾಜ್ಯದಲ್ಲಿ ಇವತ್ತು ಹೋರಾಟದ ಅನಿವಾರ್ಯತೆ ಎಷ್ಟಿದೆ ಅಂತ ನೋಡಬೇಕು. ನಮ್ಮಲ್ಲಿ ಅನೇಕ ಕಾರ್ಯಕರ್ತರು ಹೋರಾಟ ಮಾಡಿ ಕೇಸ್ ಹಾಕಿಸ್ಕೊಂಡು, ಇವತ್ತಿಗೂ ಪೊಲೀಸ್ ಠಾಣೆ ಮತ್ತು ಕೋರ್ಟ್‌ಗೆ ಓಡಾಡುತ್ತಿದ್ದಾರೆ. ಆದರೆ, ಒಂದು ವಿಚಾರವೇನೆಂದರೆ ನಾವು ಯಾವ ಲಾಠಿ ಏಟಿಗೆ ಜಗ್ಗೋದಿಲ್ಲ. ಇದರ ಜೊತೆಗೆ ತಳಮಟ್ಟದಲ್ಲಿ ಹೋರಾಟ ಮಾಡುವ ಕಾರ್ಯಕರ್ತರ ಸ್ಥಿತಿಯ ಬಗ್ಗೆಯೂ ಆಲೋಚಿಸಬೇಕು. ಆದ್ದರಿಂದ ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೋ ಅದರಂತೆ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಪ್ರವೀಣ್ ಶೆಟ್ಟಿ ಅವರು ಹೇಳಿದರು.
ಇದನ್ನೂ ಓದಿ: ಮಾ.22 ಕರ್ನಾಟಕ ಬಂದ್; ಮಾ.3ರಿಂದಲೇ ವಿವಿಧೆಡೆ ಮುತ್ತಿಗೆ, ಗಡಿಗಳ ಬಂದ್‌ಗೆ ನಿರ್ಧಾರ!
ಮತ್ತೊಂದು ಬಣವಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಮಾತನಾಡಿ, ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಮಾ.22ರ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ನಾನು ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ) ವಿದ್ಯಾರ್ಥಿಗಳ ಪರ ಹೋರಾಟ ಮಾಡಬೇಕು. ವಿದ್ಯಾರ್ಥಿಗಳ ಪರವಾಗಿ ನಾನು ಮಾ.3 ರಿಂದ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುತ್ತೇನೆ. ಈ ಕರ್ನಾಟಕ ಬಂದ್‌ಗೆ ನನ್ನ ಬೆಂಬಲವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮರಾಠ ಸಂಘದಿಂದ ಬೆಂಬಲ: ರಾಜ್ಯದ ದಕ್ಷಿಣ ಭಾಗದಲ್ಲಿ ಅಸ್ತಿತ್ವದಲ್ಲಿರುವ ಕರ್ನಾಟಕ ಮರಾಠ ಸಂಘದಿಂದ ಮಾ.22ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲವನ್ನು ಸೂಚಿಸಿದೆ. ಕರ್ನಾಟಕ ಮರಾಠ ವೆಲ್ಪೇರ್ ಅಸೋಸಿಯೇಷನ್ ಖಜಾಂಚಿ ಹಾಗೂ ನಟ ಗಣೇಶ್ ರಾವ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಎಂಇಎಸ್ ಪುಂಡರು ಕರ್ನಾಟಕದ ಬಸ್‌ಗಳು, ಅದರ ಸಿಬ್ಬಂದಿ ಮೇಲೆ ನಡೆಸುತ್ತಿರುವ ಪುಂಡಾಟಿಕೆಯನ್ನು ತಡೆಗಟ್ಟಬೇಕಿದೆ. ವಾಟಾಳ್ ನಾಗರಾಜ್ ಅವರ ಹೋರಾಟದಲ್ಲಿ ನಮ್ಮ ಸಂಘದ ಎಲ್ಲ ಸದಸ್ಯರು ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾರ್ಚ್ 22ರಂದು ಕರ್ನಾಟಕ ಬಂದ್, Vatal Nagaraj ನೇತೃತ್ವದಲ್ಲಿ ಕರ್ನಾಟಕ ಬಂದ್
ಕನ್ನಡ ಒಕ್ಕೂಟದಿಂದ ಹಂತ ಹಂತವಾಗಿ ಪ್ರತಿಭಟನೆ
ಮಾರ್ಚ್ 3 - ಬೆಳಿಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ.
ಮಾರ್ಚ್ 7 - ರಂದು ಬೆಳಗಾವಿ ಚಲೋ.
ಮಾರ್ಚ್ 11 - ಅತ್ತಿಬೆಲೆ ತಮಿಳುನಾಡು ಗಡಿ ಬಂದ್.
ಮಾರ್ಚ್ 14 - ಮಂಡ್ಯ ಮೈಸೂರು, ರಾಮನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮಾರ್ಚ್ 16 - ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್.
ಮಾರ್ಚ್ 22 - ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅಖಂಡ ಕರ್ನಾಟಕ ಬಂದ್
