ರಾಜ್ಯದಲ್ಲಿ ಅಶಾಂತಿ ಮೂಡಿಸಲು ಮತಾಂತರ ನಿಷೇಧ ಮಸೂದೆ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ ಯಾರೂ ಮತಾಂತರ ಮಾಡಿಲ್ಲ ಮತಾಂತರ ನಿಷೇಧ ಮಸೂದೆ ವಿರುದ್ಧ ಡಿಕೆಶಿ ಕಿಡಿ, ಕಾಂಗ್ರೆಸ್ ಉಗ್ರ ಹೋರಾಟ

ಬೆಳಗಾವಿ(ಡಿ.22): ರಾಜ್ಯ ಸರ್ಕಾರ ಸಂವಿಧಾನ ವಿರುದ್ಧವಾಗಿರುವ ‘ಮತಾಂತರ ನಿಷೇಧ ಮಸೂದೆ’(Karnataka anti conversion Bill) ಮುಖಾಂತರ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಮುಂದಾಗಿದೆ. ಈ ಮಸೂದೆ ಮಂಡನೆಗೆ ತೀವ್ರ ವಿರೋಧವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾವು ಈ ವಿವಾದಿತ ಮಸೂದೆ ವಿರೋಧಿಸಿದ್ದೇವೆ. ರಾಜ್ಯ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ವಿಷಯಾಂತರ ಮಾಡುವ ಪ್ರಯತ್ನ ಮಾಡುತ್ತಿದೆ. ಬಲವಂತ ಮತಾಂತರ ಮಾಡುವಂತಿಲ್ಲ ಎಂಬ ಕಾನೂನು ಇದ್ದರೂ ಧಾರ್ಮಿಕ ಸ್ವಾತಂತ್ರ್ಯ, ಬದುಕಿನ ಹಕ್ಕನ್ನು ಯಾರು ಕಸಿಯಲು ಸಾಧ್ಯವಿಲ್ಲ. ಇದು ಸರ್ವ ಧರ್ಮಕ್ಕೂ ಸೇರಿದ ವಿಚಾರ. ಬೌದ್ಧ , ಕ್ರೈಸ್ತ ಧರ್ಮ ಸೇರಿದಂತೆ ಎಲ್ಲವೂ ಇದರ ವ್ಯಾಪ್ತಿಯಲ್ಲಿದೆ. ಇಸ್ಕಾನ್‌, ಅಮೃತಾನಂದಮಯಿ ಆಶ್ರಮ ಸೇರಿದಂತೆ ಹಲವೆಡೆ ವಿದೇಶದಿಂದ ಅನ್ಯ ಧರ್ಮದವರು ಬಂದು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುತ್ತಾರೆ. ಹೀಗಿರುವಾಗ ಈ ಮಸೂದೆ ಎಲ್ಲರಿಗೂ ಕಸಿವಿಸಿ ವಾತಾವರಣ ಸೃಷ್ಟಿಸಲಿದೆ ಎಂದರು.

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ನಮ್ಮದು ಜಾತ್ಯಾತೀತ ರಾಜ್ಯ(secular state). ಇಲ್ಲಿ ಎಲ್ಲ ಜನಾಂಗದವರು ಬದುಕಲು ಅವಕಾಶವಿದೆ. ಆದರೆ, ರಾಜ್ಯ ಸರ್ಕಾರ ಈ ಮಸೂದೆ ಮೂಲಕ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಈ ದೇಶವನ್ನು ಮೊಘಲರು, ಪೋರ್ಚುಗೀಸರು ಹಾಗೂ ಬ್ರಿಟಿಷರು ಆಳಿದ್ದಾರೆ. ಕ್ರೈಸ್ತರ ಜನಸಂಖ್ಯೆ ಎಲ್ಲಿ ಹೆಚ್ಚಾಗಿದೆ. ಈಗಲೂ ಸುಮಾರು ಶೇ.2.30 ರಷ್ಟುಜನ ಇದ್ದಾರೆ. ಎಲ್ಲ ನಾಯಕರು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಅಂತಾರೆ. ನಾನು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ. ನನಗೆ ಯಾರೂ ಬಂದು ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಆಗಲಿ, ಮತಾಂತರಕ್ಕೆ ಬಲವಂತ ಮಾಡಿಲ್ಲ ಎಂದು ಹೇಳಿದರು.

Anti Conversion Bill: ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ

ಇಬ್ಬರ ಪ್ರೀತಿ ಲವ್‌ ಜಿಹಾದ್‌ ಆಗುತ್ತಾ?:
ಇಬ್ಬರ ಹೃದಯ ಪರಸ್ಪರ ಇಷ್ಟಪಟ್ಟು ಪ್ರೀತಿಸಿದರೆ ಲವ್‌ ಜಿಹಾದ್‌(Love Jihad) ಆಗುತ್ತಾ? ಅಕ್ಕಿ ಒಂದು ಕಡೆ, ಅರಿಶಿನ ಒಂದು ಕಡೆ ಇರುತ್ತದೆ. ಅವೆರಡೂ ಸೇರಿದರೆ ಮಾತ್ರ ಮಂತ್ರಾಕ್ಷತೆ ಆಗುತ್ತದೆ. ರಾಜಕೀಯಕ್ಕಾಗಿ ವಿವಾದಿತ ಮಸೂದೆ ತರುವುದು ಸರಿಯಲ್ಲ. 21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾದರೂ ಒಂದೇ ಒಂದು ಬಲವಂತದ ಮತಾಂತರ ಪ್ರಕರಣ ಇದೆಯಾ? ಈ ಸಮುದಾಯ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ನಾವು ಈ ಮಸೂದೆಯನ್ನು ಖಂಡಿಸುತ್ತೇವೆ. ಇದು ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದು ಕಾಡಿಕಾರಿದರು.

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 9ರಿಂದ ಜ.19ರವರೆಗೆ ಹತ್ತು ದಿನಗಳ ಕಾಲ ಬರೋಬ್ಬರಿ 169 ಕಿ.ಮೀ. ಉದ್ದದ ಬೃಹತ್‌ ಪಾದಯಾತ್ರೆ ನಡೆಸಲು ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.‘ನಮ್ಮ ನೀರು- ನಮ್ಮ ಹಕ್ಕು’ ಘೋಷ ವಾಕ್ಯದಡಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೆ ಒತ್ತಾಯಿಸಿ ಜ.9ರಂದು ಬೆಳಗ್ಗೆ 9.30 ಗಂಟೆಗೆ ಮೇಕೆದಾಟು ಬಳಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಚಾಲನೆ ದೊರೆಯಲಿದೆ.

ಮೇಕೆದಾಟುವಿನಿಂದ ಕನಕಪುರ, ರಾಮನಗರ, ಬಿಡದಿ ಮೂಲಕ 75 ಕಿ.ಮೀ. ದೂರದಲ್ಲಿರುವ ಕೆಂಗೇರಿಗೆ ಪಾದಯಾತ್ರೆ ಆಗಮಿಸಲಿದೆ. ಬಳಿಕ ನಾಯಂಡಹಳ್ಳಿ ಜಂಕ್ಷನ್‌ ಮೂಲಕ ಬೆಂಗಳೂರು ನಗರದ ವಿವಿಧ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೇಕೆದಾಟುವಿನಿಂದ ಬೆಂಗಳೂರಿಗೆ 5 ದಿನ ಹಾಗೂ ಬೆಂಗಳೂರು ನಗರದಲ್ಲಿ 5 ದಿನ ಪಾದಯಾತ್ರೆ ನಡೆಯಲಿದ್ದು, ಒಟ್ಟು ಹದಿನೈದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 169 ಕಿ.ಮೀ. ಉದ್ದದ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.