ಎನ್‌.ಎಲ್‌. ಶಿವಮಾದು

ಬೆಂಗಳೂರು[ಡಿ.15]: ರಾಜ್ಯ ಸರ್ಕಾರವು ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಕುರಿತು ಇನ್ನೂ ತನ್ನ ಸ್ಪಷ್ಟನಿಲುವು ಪ್ರಕಟಿಸಿಲ್ಲ. ಇದರಿಂದಾಗಿ ರಾಜ್ಯದ ಕೆಲವು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಎರಡು ವಿಭಿನ್ನ ಪಠ್ಯಕ್ರಮವನ್ನು ಅಭ್ಯಸಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ರಾಜ್ಯದ ಕೆಲವು ಶಾಲೆಗಳು ತಮ್ಮದೇ ಆದ ಪಠ್ಯಕ್ರಮವನ್ನು ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿವೆ. ಈ ನಡುವೆ ಸರ್ಕಾರ ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಘೋಷಣೆ ಮಾಡಿದ್ದರಿಂದ ಈ ಶಾಲೆಗಳ ಆಡಳಿತ ಮಂಡಳಿಗಳು ಇದೀಗ ಸರ್ಕಾರಿ ಪಠ್ಯಕ್ರಮವನ್ನು ಕೂಡ ಮಕ್ಕಳಿಗೆ ಬೋಧಿಸಲು ಆರಂಭಿಸಿವೆ. ಇದರಿಂದಾಗಿ ಒಂದೇ ವರ್ಷದಲ್ಲಿ ಎರಡೆರಡು ಪಠ್ಯಕ್ರಮವನ್ನು ಅಭ್ಯಾಸ ಮಾಡಬೇಕಾದ ಸಂಕಷ್ಟಕ್ಕೆ ಈ ಶಾಲೆಗಳ ಮಕ್ಕಳು ಸಿಲುಕಿದ್ದಾರೆ.

ಖಾಸಗಿ ಶಾಲೆಗಳ ದಂಧೆ:

ನಿಯಮಗಳ ಪ್ರಕಾರ ಕೇಂದ್ರ ಪಠ್ಯಕ್ರಮ ಬೋಧಿಸುವ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು. ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಪಠ್ಯಕ್ರಮ ಬೋಧಿಸಬೇಕು. ಆದರೆ, ಕೆಲವು ಶಾಲೆಗಳು ಈ ಎರಡನ್ನೂ ಹೊರತುಪಪಡಿಸಿ ತಮ್ಮದೇ ಪಠ್ಯಕ್ರಮ ಅಳವಡಿಸಿಕೊಂಡಿವೆ. ಎಕ್ಸೀಡ್‌, ಐ ಮ್ಯಾಕ್ಸ್‌, ಪಿಯರ್‌ಸನ್‌ ಸೇರಿದಂತೆ ವಿವಿಧ ಬಗೆಯ ಪಠ್ಯಕ್ರಮಗಳನ್ನು ಕೆಲವು ಶಾಲೆಗಳು ಅಳವಡಿಸಿಕೊಂಡಿವೆ. ಇಂತಹ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಇದೀಗ ಪಬ್ಲಿಕ್‌ ಪರೀಕ್ಷೆಗಾಗಿ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಹೆಚ್ಚುವರಿಯಾಗಿ ಓದಬೇಕಿದೆ.

ಪಠ್ಯಪುಸ್ತಕ, ಶಾಲಾ ಸಮವಸ್ತ್ರ, ನೋಟ್‌ ಪುಸ್ತಕಗಳ ಮಾರಾಟವನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವ ಶಾಲಾ ಆಡಳಿತ ಮಂಡಳಿಗಳು ತಾವು ಸೂಚಿಸಿದ ಪುಸ್ತಕಗಳನ್ನೇ ಖರೀದಿ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡುತ್ತವೆ. ಇಂತಹ ಶಾಲೆಗಳು ತಮ್ಮದೇ ಪಠ್ಯಕ್ರಮ ಅಳವಡಿಸಿಕೊಂಡಿವೆ. ಶಾಲಾ ಆಡಳಿತ ಮಂಡಳಿ ಸೂಚಿಸಿದ ಪುಸ್ತಕದ ಅಂಗಡಿಗಳನ್ನು ಹೊರತುಪಡಿಸಿ ಬೇರೆಡೆ ಪುಸ್ತಕ ಸಿಗುವುದಿಲ್ಲ. ಇದರಿಂದ ಮನಸೋಇಚ್ಛೆ ದರ ನಿಗದಿ ಮಾಡಿ ದುಪ್ಪಟ್ಟು ಹಣಕ್ಕೆ ಪಠ್ಯಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆರ್ಥಿಕವಾಗಿಯೂ ಹೊರೆಯಾಗುತ್ತಿದೆ.

ಸಂದಿಗ್ಧ ಪರಿಸ್ಥಿತಿ ನಿರ್ಮಾಣ:

ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ಇಕ್ಕಟ್ಟಿಗೆ ಸಿಲುಕಿರುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಎರಡೂ ಪಠ್ಯಕ್ರಮಗಳನ್ನು ಓದಲೇಬೇಕಿದೆ. ದಿನನಿತ್ಯದ ಹತ್ತಾರು ಹೋಮ್‌ವರ್ಕ್ ಜತೆಗೆ ಹೆಚ್ಚುವರಿಯಾಗಿ ಎಲ್ಲಾ ಪುಸ್ತಕಗಳನ್ನು ಮತ್ತೊಮ್ಮೆ ಅಧ್ಯಯನ ಮಾಡುವುದು ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವಾಗಿದೆ.

ಡಿಡಿಪಿಐ, ಬಿಇಒಗಳು ವಿಫಲ

ಖಾಸಗಿ ಶಾಲೆಗಳು ತಮ್ಮದೇ ಪಠ್ಯಕ್ರಮ ಅಳವಡಿಸಿಕೊಳ್ಳುವುದನ್ನು ತಡೆಯುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಹಾಗೂ ಜಿಲ್ಲಾ ಉಪ ನಿರ್ದೇಶಕರು (ಡಿಡಿಪಿಐ) ಖಾಸಗಿ ಶಾಲೆಗಳು ಎನ್‌ಸಿಇಆರ್‌ಟಿ ಹಾಗೂ ಡಿಎಸ್‌ಇಆರ್‌ಟಿ ಪಠ್ಯಕ್ರಮಗಳನ್ನು ಬೋಧಿಸುತ್ತಿವೆಯೇ ಅಥವಾ ತಮ್ಮದೇ ಪಠ್ಯಕ್ರಮ ಅಳವಡಿಸಿಕೊಂಡಿವೆಯೇ ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಿದೆ. ಹೀಗೆ ಪತ್ತೆಹಚ್ಚದಿರುವುದು ಇದೀಗ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಿದೆ.

ಇನ್ನು ಕೆಲವು ಪ್ರಭಾವಿ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ಸಡ್ಡು ಹೊಡೆದು ತಮ್ಮ ಪಠ್ಯಕ್ರಮಗಳನ್ನು ಅಳವಡಿಸಿಕೊಂಡು ಬೋಧಿಸುತ್ತಿವೆ. ಇದನ್ನು ನೋಡಿಯೂ ಕೆಲವು ಬಿಇಒ ಹಾಗೂ ಡಿಡಿಪಿಐಗಳು ಸುಮ್ಮನಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.