* ಬೆಂಗಳೂರು ಸಮೀಪದ ಚಿನ್ನಕುರ್ತಿಯ ಸೋದರರ ಅಕ್ರಮ* ಒಎಂಆರ್ ಶೀಟ್ ತಿದ್ದಿದ ಆರೋಪ: ಒಬ್ಬ ಸೆರೆ, ಇನ್ನೊಬ್ಬ ನಾಪತ್ತೆ* 1 ಎಕರೆ ಜಮೀನು ಮಾರು 1.2 ಕೋಟಿ ನೀಡಿದ ಆರೋಪ
ಬೆಂಗಳೂರು(ಮೇ.06): ಸಬ್ ಇನ್ಸ್‌ಪೆಕ್ಟರ್ ಆಗುವ ಕನಸು ನನಸು ಮಾಡಿಕೊಳ್ಳಲು ತಮ್ಮ ಕುಟುಂಬಕ್ಕಿದ್ದ ಒಂದು ಎಕರೆ ಜಮೀನು ಮಾರಾಟ ಮಾಡಿ ಹಣ ನೀಡಿದ್ದ ಅಣ್ಣ-ತಮ್ಮ ಈಗ ಪರೀಕ್ಷಾ ಅಕ್ರಮ ಆರೋಪದಡಿ ಜೈಲು ಸೇರುವಂತಾಗಿದೆ.
ಬೆಂಗಳೂರು ಹೊರ ವಲಯದ ಕಗ್ಗಲಿಪುರ ಸಮೀಪದ ಚಿನ್ನಕುರ್ತಿ ಗ್ರಾಮದ ಸಿ.ಎಂ.ನಾಗರಾಜ ಹಾಗೂ ಸಿ.ಎಂ.ನಾರಾಯಣ ಸಿಕ್ಕಿಬಿದ್ದಿದ್ದು, ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಶೀಟ್ ತಿದ್ದಿದ ಆರೋಪದಡಿ ಹೈಗ್ರೌಂಡ್‌್ಸ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಈ ಸೋದರರು ಆರೋಪಿಗಳಾಗಿದ್ದರು. ಪ್ರಕರಣ ದಾಖಲಾದ ಕೂಡಲೇ ನಾಗರಾಜ ಸಿಕ್ಕಿಬಿದ್ದರೆ, ತಲೆಮರೆಸಿಕೊಂಡಿರುವ ಆತನ ಸೋದರ ನಾರಾಯಣನ ಪತ್ತೆಗೆ ಸಿಐಡಿ ಹುಡುಕಾಟ ನಡೆಸಿದೆ ಎಂದು ಮೂಲಗಳು ಹೇಳಿವೆ.
1.2 ಕೋಟಿ ರು. ಕೊಟ್ಟರೇ ಸೋದರರು:
ಚಿನ್ನಕುರ್ಚಿ ಗ್ರಾಮದ ನಾಗರಾಜ ಹಾಗೂ ನಾರಾಯಣ ಸೋದರರು, ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸಿದ್ದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ವಿಚಾರ ತಿಳಿದ ಬಳಿಕ ಅಣ್ಣ-ತಮ್ಮ, ಪಿಎಸ್‌ಐ ಆಗುವ ಕನಸು ಕಂಡಿದ್ದರು. ಈ ಕನಸು ಸಾಕಾರಕ್ಕೆ ಅಡ್ಡದಾರಿ ತುಳಿದು ಈಗ ಇಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತ ಪರಿಸ್ಥಿತಿ ಬಂದಿದೆ. ತಮ್ಮ ಪರಿಚಿತ ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿ ಮೂಲಕ ಪಿಎಸ್‌ಐ ಹುದ್ದೆ ಡೀಲ್ ಕುದುರಿಸಿದ ಸೋದರರು, ಊರಿನಲ್ಲಿ ತಮ್ಮ ಕುಟುಂಬಕ್ಕಿದ್ದ ಒಂದು ಎಕರೆ ಜಮೀನನ್ನು .1.2 ಕೋಟಿ ಹಣ ಮಾರಾಟ ಮಾಡಿದ್ದರು. ಬಳಿಕ ಈ ಹಣವನ್ನು ಪಿಎಸ್‌ಐ ಹುದ್ದೆಗೆ ವ್ಯಯಿಸಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.
ರಾಜಕಾರಣದಲ್ಲೂ ಬೆಳವಣಿಗೆ ಕಾಣುವ ಆಕಾಂಕ್ಷೆ ಹೊಂದಿದ್ದ ನಾಗರಾಜ್, ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುವ ಮುನ್ನ ಗ್ರಾಪಂ ಚುನಾವಣೆಗೆ ನಿಂತು ಸೋಲುಂಡಿದ್ದ. ಈ ಇಬ್ಬರು ಆರೋಪಿಗಳ ಬಗ್ಗೆ ತನಿಖೆ ನಡೆದಿದೆ. ಹಣದ ಮೂಲದ ಕುರಿತು ವಿಚಾರಣೆ ವೇಳೆ ನಾಗರಾಜ ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.
