ಬೆಂಗಳೂರು(ಮೇ.14): ಮೇ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಸಾಕಷ್ಟುಏರುಪೇರಾಗಿದೆ ಎಂಬ ಸಾರ್ವಜನಿಕರ ಆರೋಪದ ಬಗ್ಗೆ ಇಂಧನ ಇಲಾಖೆ ಮೌನ ಮುರಿದಿದೆ. ‘ರಾಜ್ಯದಲ್ಲಿ ವಿವಿಧ ಎಸ್ಕಾಂಗಳಿಂದ ನೀಡಿರುವ ವಿದ್ಯುತ್‌ ಬಿಲ್‌ನಲ್ಲಿ ಯಾವುದೇ ಲೋಪ ಉಂಟಾಗಿಲ್ಲ. ಮಾಚ್‌ರ್‍ ತಿಂಗಳಿಗೆ ಮೊದಲಿನ ವಿದ್ಯುತ್‌ ಬಳಕೆ ಹಾಗೂ ಮೇ ತಿಂಗಳಲ್ಲಿ ನೀಡಿರುವ ಬಿಲ್‌ನಲ್ಲಿನ ವಿದ್ಯುತ್‌ ಬಳಕೆ ನೋಡಿ ಬಳಸಿರುವ ವಿದ್ಯುತ್‌ ಪ್ರಮಾಣ ಹಾಗೂ ಶುಲ್ಕವನ್ನು ಸಾರ್ವಜನಿಕರೇ ಲೆಕ್ಕ ಹಾಕಿಕೊಳ್ಳಿ. ಯಾವುದೇ ವ್ಯತ್ಯಾಸ ಕಂಡು ಬಂದರೂ ವಿದ್ಯುತ್‌ ಶುಲ್ಕವನ್ನು ಪಾವತಿಸಬೇಡಿ’ ಎಂದು ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ.

ವಿದ್ಯುತ್‌ ಬಿಲ್‌ ಶಾಕ್: ಜೂನ್‌ವರೆಗೆ ವಿದ್ಯುತ್‌ ಕಡಿತವಿಲ್ಲ..?

ಅಲ್ಲದೆ, ‘ಬಿಲ್‌ನಲ್ಲಿ ಗೊಂದಲ ಉಂಟಾಗಿದ್ದರೆ 1902 ಗೆ ದೂರು ನೀಡಿದರೆ ಮತ್ತೊಮ್ಮೆ ಮೀಟರ್‌ ರೀಡ್‌ ಮಾಡಿ ಗೊಂದಲ ಬಗೆಹರಿಸಲಾಗುವುದು. ವಿದ್ಯುತ್‌ ಶುಲ್ಕ ಪಾವತಿ ಮಾಡದಿದ್ದರೂ ಜೂನ್‌ 30ರವರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಿಲ್ಲ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಸ್ಪಷ್ಟಪಡಿಸಿದ್ದಾರೆ.

ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ರಾಜೇಶ್‌ಗೌಡ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಏಪ್ರಿಲ್‌ ತಿಂಗಳಲ್ಲಿ ಮೀಟರ್‌ ರೀಡರ್‌ಗಳು ಮನೆ-ಮನೆಗೆ ಹೋಗಿ ಬಿಲ್‌ ನೀಡಲು ಆಗಿರಲಿಲ್ಲ. ಹೀಗಾಗಿ ಡಿಸೆಂಬರ್‌, ಜನವರಿ ಹಾಗೂ ಫೆಬ್ರುವರಿ ತಿಂಗಳಿನ ಬಿಲ್‌ ಆಧಾರದ ಮೇಲೆ ಸರಾಸರಿ ಬಿಲ್‌ ವಿಧಿಸಲಾಗಿತ್ತು. ಮೇ ಮೊದಲ ವಾರದಲ್ಲಿ ಮನೆ-ಮನೆಗೂ ಹೋಗಿ ಮೀಟರ್‌ ರೀಡರ್‌ಗಳು ವಾಸ್ತವ ವಿದ್ಯುತ್‌ ಬಳಕೆ ಆಧಾರದ ಮೇಲೆ ಬಿಲ್‌ ನೀಡಿದ್ದಾರೆ. ಅಲ್ಲದೆ, ಸ್ಲಾ್ಯಬ್‌ಗಳಿಂದಾಗಿ ಗೊಂದಲವಾಗದಂತೆ ಎರಡು ತಿಂಗಳ ಬಿಲ್‌ನ್ನು ಸೇರಿಸಿ ಸ್ಲಾ್ಯಬ್‌ಗಳ ಮಿತಿಯನ್ನು ದುಪ್ಪಟ್ಟು ಮಾಡಲಾಗಿದೆ’ ಎಂದು ಹೇಳಿದರು.

ಇನ್ನು ಮೀಟರ್‌ನ ಸಮಸ್ಯೆಯಿಂದ ಬಿಲ್‌ ವ್ಯತ್ಯಾಸವಾಗಿದ್ದರೆ ಅಥವಾ ಮೀಟರ್‌ ರೀಡರ್‌ಗಳು ಬಿಲ್ಲಿಂಗ್‌ ಮಿಷನ್‌ನಲ್ಲಿ ನೀಡಿರುವ ಬಿಲ್ಲಿನಲ್ಲಿ ಸ್ಲಾ್ಯಬ್‌ ಆಧಾರದ ಲೆಕ್ಕಾಚಾರದಲ್ಲಿ ತಪ್ಪಾಗಿದ್ದರೆ ಹೊಸದಾಗಿ ಬಿಲ್‌ ವಿತರಿಸಲಾಗುವುದು. ಹೀಗಾಗಿ ಸಾರ್ವಜನಿಕರು ಹೆದರಬೇಡಿ ಎಂದು ಮನವಿ ಮಾಡಿದರು.

ಅಯ್ಯೋ ದುರ್ವಿಧಿಯೇ..! ತಂಗಿ ರಕ್ಷಿಸಲು ಹೋಗಿ ವಿದ್ಯುತ್‌ ತಂತಿ ತಗುಲಿ ಅಕ್ಕ ಸಾವು

ವಿದ್ಯುತ್‌ ಬಳಕೆ ಹೆಚ್ಚಾಗಿದೆ:

ಕೊರೋನಾ ಸಮಯದಲ್ಲಿ ಬಹುತೇಕರು ಮನೆಯಲ್ಲೇ ಇದ್ದರು. ಐಟಿ-ಬಿಟಿ ಇತರೆ ಕ್ಷೇತ್ರದ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಫ್ಯಾನ್‌, ಎಸಿ ಮತ್ತು ಹಲವು ವಿದ್ಯುತ್‌ ಉಪಕರಣಗಳನ್ನು ಹೆಚ್ಚಾಗಿ ಉಪಯೋಗಿಸಿರುವುದರಿಂದ ವಿದ್ಯುತ್‌ ಬಳಕೆ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದರು.

ಉಳಿದಂತೆ, ಎಂಎಸ್‌ಎಂಇ ಕೈಗಾರಿಕಾ ಗ್ರಾಹಕರಿಗೆ ಏಪ್ರಿಲ್‌ ಮತ್ತು ಮೇ 2020ರ ತಿಂಗಳ ಬಿಲ್ಲುಗಳಿಗೆ ಕನಿಷ್ಠ ನಿಗದಿತ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಹೀಗಾಗಿ ಮಾಚ್‌ರ್‍ ತಿಂಗಳ ಶುಲ್ಕ ಹಾಗೂ ಉಳಿದ ಮೊತ್ತವನ್ನು ಮಾತ್ರ ಪಾವತಿಸಬೇಕು. ಇತರೆ ಕೈಗಾರಿಕೆಗಳ ಏಪ್ರಿಲ್‌ ಹಾಗೂ ಮೇ ಬಳಕೆಯ ಬಿಲ್ಲುಗಳಿಗೆ ನಿಗದಿತ ಶುಲ್ಕವನ್ನು ಜೂ.30ರವರೆಗೆ ಮುಂದೂಡಲಾಗಿದೆ.

ಲಾಕ್‌ಡೌನ್‌ ಹಾಗೂ ಬೇಸಿಗೆಯಿಂದಾಗಿ ಹೆಚ್ಚು ವಿದ್ಯುತ್‌ ಉಪಕರಣ ಬಳಕೆಯಿಂದ ಮನೆಗಳಲ್ಲಿ ಶೇ. 30 ರಷ್ಟುಹೆಚ್ಚು ವಿದ್ಯುತ್‌ ಬಳಕೆಯಾಗಿರುವ ಅಂದಾಜಿದೆ ಎಂದರು.

ವಿಧಿ ಇಲ್ಲದೆ ಸರಾಸರಿ ಬಿಲ್‌

ಬೆಂಗಳೂರು: ಏಪ್ರಿಲ್‌ ತಿಂಗಳಲ್ಲಿ ವಿಧಿಸಿರುವ ಸರಾಸರಿ ಬಿಲ್‌ನಿಂದ ಉಂಟಾಗಿರುವ ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ನೀಡಿದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಪ್ರತಿ ತಿಂಗಳು ಎಸ್ಕಾಂಗಳು ವಿದ್ಯುತ್‌ ಪೂರೈಕೆಗೆ 4,235 ಕೋಟಿ ರು. ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ವಿಧಿ ಇಲ್ಲದೆ ಸರಾಸರಿ ಬಿಲ್‌ ನೀಡಬೇಕಾಯಿತು ಎಂದು ಹೇಳಿದರು.

ಎಸ್ಕಾಂಗಳು ವಿದ್ಯುತ್‌ ಖರೀದಿಗೆ 2,956 ಕೋಟಿ ರು., ವೇತನ ಪಾವತಿಗೆ 650 ಕೋಟಿ ರು., ಸಾಲದ ಮೇಲಿನ ಬಡ್ಡಿ ಪಾವತಿಗೆ 727 ಕೋಟಿ ರು., ಹೀಗೆ 4,235 ಕೋಟಿ ರು. ಪಾವತಿಸಬೇಕಾಗುತ್ತದೆ. ಸರ್ಕಾರದಿಂದ 700 ಕೋಟಿ ರು. ಮಾತ್ರ ಸಬ್ಸಿಡಿ ಬರುತ್ತದೆ. ನಾವು ವಿದ್ಯುತ್‌ ಖರೀದಿ ಮಾಡುವಾಗ ಹಣ ಪಾವತಿಸದಿದ್ದರೆ ಕಂಪೆನಿಗಳು ವಿದ್ಯುತ್‌ ನೀಡುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹಠಾತ್‌ ಮಳೆ,ಸಜ್ಜಾಗದ ಬೆಸ್ಕಾಂ: ವರ್ಕ್‌ ಫ್ರಂ ಹೋಂಗೆ ಪವರ್‌ ಕಟ್‌ ಕಾಟ!

ಬೆಸ್ಕಾಂ ವ್ಯಾಪ್ತಿಯಲ್ಲಿ 1.8 ಲಕ್ಷ ಮನೆಗಳಿಗೆ ಬೀಗ

ಬೆಂಗಳೂರು: ಬೆಸ್ಕಾಂ ಮೀಟರ್‌ ರೀಡರ್‌ಗಳು ಮನೆ-ಮನೆಗೆ ಹೋಗಿ 79.80 ಲಕ್ಷ ಮನೆಗಳಿಗೆ ಬಿಲ್‌ ನೀಡಿದ್ದಾರೆ. ಉಳಿದಂತೆ ಮನೆಗಳಿಗೆ ಬೀಗ ಹಾಕಿದ್ದರೂ ಮೀಟರ್‌ ಮನೆ ಹೊರ ಭಾಗದಲ್ಲಿದ್ದರೆ ಮೀಟರ್‌ ಓದಿ ಬಿಲ್‌ ಜನರೇಟ್‌ ಮಾಡಲಾಗಿದೆ. ಆದರೆ, ಮೀಟರ್‌ ಒಳಭಾಗದಲ್ಲಿದ್ದು ಬೀಗ ಜಡಿದಿರುವ 1.8 ಲಕ್ಷ ಮನೆಗಳಿಗೆ ‘ಡಿಎಲ್‌’ ಎಂದು ನಮೂದಿಸಿ ಸರಾಸರಿ ಬಿಲ್‌ ನೀಡಲಾಗಿದೆ. ಇಂತಹವರು ಮನೆಗಳಿಗೆ ವಾಪಸು ಬಂದಾಗ ಕರೆ ಮಾಡಿದರೆ ಮೀಟರ್‌ ರೀಡರ್‌ಗಳು ಬಂದು ಬಿಲ್‌ ನೀಡುತ್ತಾರೆ. ಇಲ್ಲದಿದ್ದರೆ, ಸಾರ್ವಜನಿಕರೇ ಮೀಟರ್‌ನ ಫೋಟೊ ತೆಗೆದು ಬೆಸ್ಕಾಂನ ವಾಟ್ಸಾಪ್‌ ಸಂಖ್ಯೆ 94498 44640 ಗೆ ಕಳುಹಿಸಬಹುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ರಾಜೇಶ್‌ಗೌಡ ಹೇಳಿದ್ದಾರೆ.

* ಬೆಸ್ಕಾಂ ಸಹಾಯವಾಣಿ - 1912

* ವಾಟ್ಸಪ್‌ ಸಂಖ್ಯೆ - 94498 44640