ಶ್ರೀಕಾಂತ್ ಪೂಜಾರಿ ಬಂಧಿಸಿದ್ದ ಇನ್ಸ್‌ಪೆಕ್ಟರ್ ಕಾನೂನು ಉಲ್ಲಂಘಿಸಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧನಕ್ಕೊಳಪಡಿಸಿದ ಇನ್ಸ್ ಪೆಕ್ಟರ್ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ .16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ದಾಖಲೆ ಇದೆ. ಆ ಪೈಕಿ ಕೆಲ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ. ಅಂತಹ ವ್ಯಕ್ತಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಅವನೊಬ್ಬನೇ ಹಿಂದೂನಾ? ಬೇರೆ ಹಿಂದೂಗಳೂ ಇದ್ದಾರೆ. ಅವರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ ಗೃಹ ಸಚಿವ
ಬೆಂಗಳೂರು (ಜ.6): ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧನಕ್ಕೊಳಪಡಿಸಿದ ಇನ್ಸ್ ಪೆಕ್ಟರ್ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀಕಾಂತ್ ಪೂಜಾರಿ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ದಾಖಲೆ ಇದೆ. ಆ ಪೈಕಿ ಕೆಲ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ. ಅಂತಹ ವ್ಯಕ್ತಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಅವನೊಬ್ಬನೇ ಹಿಂದೂನಾ? ಬೇರೆ ಹಿಂದೂಗಳೂ ಇದ್ದಾರೆ. ಅವರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ವಿಕಸಿತ ಭಾರತ್ ಯಾತ್ರೆಗೆ ಹೋಗದಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ? ಬಿಜೆಪಿ ಆರೋಪವೇನು?
ಇದೇ ವೇಳೆ ಶ್ರೀಕಾಂತ್ ಬಂಧಿಸಿದ ಪೊಲೀಸ್ ನನ್ನು ಅಮಾನತುಗೊಳಿಸಬೇಕೆಂಬ ಬಿಜೆಪಿ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾವ ಕಾರಣಕ್ಕೆ ಮಾಡಬೇಕು? ಇನ್ಸ್ ಪೆಕ್ಟರ್ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ. ಅವರ ಕರ್ತವ್ಯವನ್ನು ಮಾತ್ರ ನಿಭಾಯಿಸಿದ್ದಾರೆ. ಶ್ರೀಕಾಂತ್ ಬಂಧನ ಕಾನೂನಿಗೆ ವಿರುದ್ಧವಲ್ಲವಾದ್ದರಿಂದ ಈ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯನ್ನು ತಿರಸ್ಕರಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ? ಸುಮ್ಮನೇ ಬಿಜೆಪಿ ನಾಯಕರು ಬಾಯಿಗೆ ಬಂದಂಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನದ ಹಿಂದೆ ಪ್ರಹ್ಲಾದ್ ಜೋಶಿ ಕೈವಾಡ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
ಏನೇ ಆರೋಪ ಮಾಡುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಒಂದೇ ಪ್ರದೇಶದಲ್ಲಿ ಪತಿ-ಪತ್ನಿಯರನ್ನು ಪೊಲೀಸ್ ಇಲಾಖೆಯಲ್ಲಿ ನಿಯೋಜಿಸುವ ಕುರಿತ ವಿಚಾರವಾಗಿ ಮಾತನಾಡಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳು ಮತ್ತು ಇತರ ನಿಯಮಗಳು ಒಂದೇ ಜಿಲ್ಲೆಯಲ್ಲಿ ದಂಪತಿಗಳನ್ನು ನಿಯೋಜಿಸಬೇಕೆಂದು ಹೇಳುತ್ತವೆ. ಇದನ್ನು ಜಾರಿಗೆ ತರುವಂತೆ ಡಿಜಿಪಿಗೆ ಸೂಚಿಸಿದ್ದೇನೆ ಎಂದರು.