ಬೆಂಗಳೂರು(ಜ.18): ರಾಜ್ಯದಲ್ಲಿ ಮತ್ತೆ ಹಿಂದಿ ಹೇರಿಕೆ ವಿಚಾರ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಭದ್ರಾವತಿಯಲ್ಲಿ ನಡೆದ ಕ್ಷಿಪ್ರ ಕಾರ್ಯಪಡೆ ಘಟಕ ಶಂಕುಸ್ಥಾಪನೆ ಕಾರ್ಯಕ್ರಮ ಹಿಂದಿಮಯ ಆಗಿರುವ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯಿಂದ ಭಾನುವಾರ ‘ಹಿಂದಿ ಗುಲಾಮಗಿರಿ ಬೇಡ’ ಹ್ಯಾಶ್‌ಟ್ಯಾಗ್‌ನಲ್ಲಿ ನಡೆಸಿದ ಟ್ವಿಟರ್‌ ಅಭಿಯಾನದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಹಿಂದಿ ಹೇರಿಕೆ ವಿರುದ್ಧ ಕಿಡಿಕಾರಿದ್ದಾರೆ.

ಕನ್ನಡನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು. ತ್ರಿಭಾಷಾ ಸೂತ್ರ ನಮಗೆ ಬೇಡ. ತ್ರಿಭಾಷಾ ಸೂತ್ರದ ನೆಪದಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ಖಂಡನೀಯ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. ‘ಹಿಂದಿ ಗುಲಾಮಗಿರಿ ಬೇಡ’ ಅಭಿಯಾನ ಟ್ವೀಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು.

ಭದ್ರಾವತಿಯಲ್ಲಿ ತಲೆ ಎತ್ತಲಿದೆ RAF ಘಟಕ: ದಿಲ್ಲಿಯಿಂದ ಬಂದು ಗುದ್ದಲಿ ಪೂಜೆ ನೆರವೇರಿಸಿದ ಶಾ

ಶನಿವಾರ ಶಿವಮೊಗ್ಗದಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಘಟಕ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿ ಬ್ಯಾನರ್‌ ಅಳವಡಿಸಿ, ಹಿಂದಿಯಲ್ಲೇ ನಿರೂಪಣೆ ಮಾಡಿರುವುದು ಗಮನಕ್ಕೆ ಬಂದಿದೆ. ಕನ್ನಡಿಗರ ಮೇಲೆ ಹಿಂದಿ ಸಾಮ್ರಾಜ್ಯಶಾಹಿಗಳು ಪರೋಕ್ಷ ಯುದ್ಧ ಹೂಡಿದ್ದಾರೆ. ಕನ್ನಡತನವನ್ನು ನಾಶಗೊಳಿಸುವ ವ್ಯವಸ್ಥಿತ ದಾಳಿ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಹಲವು ಸದಸ್ಯರು ಭಾಗವಹಿಸಿದ್ದರು. ಯಾರೊಬ್ಬರಿಗೂ ಸಹ ಈ ಕನ್ನಡವಿಲ್ಲದ ಹಿಂದಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮುಜುಗರ, ನಾಚಿಕೆ ಆಗಲಿಲ್ಲವೇ?. ಇವರೆಲ್ಲರೂ ತಮ್ಮ ಕನ್ನಡತನವನ್ನು ದಿಲ್ಲಿ ಹಿಂದಿವಾಲಾಗಳಿಗೆ ಅಡವಿಟ್ಟಿದ್ದಾರೆಯೇ?. ಕನ್ನಡನಾಡಿನಲ್ಲಿ ಕನ್ನಡವನ್ನೇ ಬಳಸಬೇಕೆಂಬುದು ಯಾವುದೇ ಸರ್ಕಾರಕ್ಕೆ ಇರಬೇಕಾದ ಸಾಮಾನ್ಯ ಪ್ರಜ್ಞೆ. ಇದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಕನ್ನಡಿಗರ ಮೇಲೆ ಹಿಂದಿ ಹೇರುತ್ತಿರುವ ಈ ದುರಹಂಕಾರವನ್ನು ಕನ್ನಡಿಗರು ಸಹಿಸಬೇಕಿಲ್ಲ. ನಾವು ಸಹಸ್ರಾರು ವರ್ಷಗಳಿಂದ ಕನ್ನಡಿಗರು, ಇಂಥ ಹುನ್ನಾರಗಳಿಗೆ ತಲೆಬಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಅರುಣ್‌ ಅರಿಬೆಂಚಿ ಎಂಬುವರು, ‘ಕರ್ನಾಟಕದಲ್ಲಿ ಕನ್ನಡವೇ ಮೊದಲು, ಕನ್ನಡವೇ ಎಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ನಾಸೀರ್‌ ಅಹಮದ್‌, ‘ಬಿಜೆಪಿ ಸರ್ಕಾರ ರಾಷ್ಟ್ರೀಯತೆಯ ಹೆಸರಿನಲ್ಲಿ ಸ್ಥಳೀಯ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ಅನಿಲ್‌ ಕುಮಾರ್‌, ‘ಶಿವಮೊಗ್ಗದ ಕಾರ್ಯಕ್ರಮದಲ್ಲಿ ತ್ರಿಭಾಷಾ ಸೂತ್ರ ಉಲ್ಲಂಘಿಸಿದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಶ್ರೀಕಾಂತ ಎಂ.ಸಿ., ‘ಉತ್ತರ ಭಾರತದಲ್ಲಿ ಜನಸಂಖ್ಯಾ ಸ್ಫೋಟವಾಗಿದೆ. ಆ ಜನಸಂಖ್ಯೆಯನ್ನು ದಕ್ಷಿಣಕ್ಕೆ ಅಟ್ಟಲು ಕೇಂದ್ರದ ಮುಂದಿರುವ ದಾರಿ ಹಿಂದಿ ಹೇರಿಕೆ’ ಎಂದಿದ್ದಾರೆ.