ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಯೊಂದು ನಡೆದಿದೆ. ಹೊಟೇಲ್‌ನ ಡಿಸ್ಪ್‌ಲೇ ಬೋರ್ಡ್‌ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯವಾಗಿ ಬರೆಯಲಾದ ಬರಹವೊಂದು ಕಾಣಿಸಿಕೊಂಡಿದ್ದು, ಈ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಮೇ.17): ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಯೊಂದು ನಡೆದಿದೆ. ಹೊಟೇಲ್‌ನ ಡಿಸ್ಪ್‌ಲೇ ಬೋರ್ಡ್‌ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯವಾಗಿ ಬರೆಯಲಾದ ಬರಹವೊಂದು ಕಾಣಿಸಿಕೊಂಡಿದ್ದು, ಈ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ರಾತ್ರಿ ಈ ಅವಹೇಳನಕಾರಿ ಬರಹವು ಡಿಸ್ಪ್‌ಲೇ ಬೋರ್ಡ್‌ನಲ್ಲಿ ಪ್ರದರ್ಶನಗೊಂಡಿದ್ದು, 'KANNAGIDA M*" ಎಂಬ ಶಬ್ದಗಳನ್ನು ಬಳಸಿ ಕನ್ನಡಿಗರನ್ನು ಅವಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೊಟೇಲ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೋರ್ಡ್‌ನ ಬರಹವನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಈ ಕುರಿತು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ಚಿತ್ರರಂಗದಿಂದ ಅಸಹಕಾರ ನಿರ್ಣಯ!
ಅನ್ಯರಾಜ್ಯದಿಂದ ದುಡಿಯಲು ಬಂದ ಜನರಿಂದ ಪದೇಪದೆ ಕನ್ನಡಿಗರ ಅವಹೇಳನ ಮಾಡಲಾಗುತ್ತಿರುವ ಪ್ರಕರಣ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದ್ದು,ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಈ ರೀತಿಯ ಕೃತ್ಯಗಳು ಸಮಾಜದಲ್ಲಿ ಒಡಕು ಮೂಡಿಸುವ ಸಾಧ್ಯತೆ ಇದ್ದು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದಾರೆ.
ಈ ಘಟನೆಯಿಂದ ಕನ್ನಡಿಗರಲ್ಲಿ ಉಂಟಾದ ಆಕ್ರೋಶವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ಘಟನೆಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಕನ್ನಡಿಗರು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಈ ಕೃತ್ಯವನ್ನು ಖಂಡಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಖ್ಯಾತ ಗಾಯಕ ಸೋನು ನಿಗಮ್ ಅವರು ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಲು ಒಬ್ಬ ವಿದ್ಯಾರ್ಥಿಯ ಕೇಳಿದ್ದಕ್ಕೆ, ಕನ್ನಡ ಕನ್ನಡಿಗರನ್ನು ಪೆಹಲ್ಗಾಂ ಭಯೋತ್ಪಾದಕ ದಾಳಿಗೆ ಹೋಲಿಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಕನ್ನಡಿಗರು ಕೆರಳಿ ನಿಂತ ಬಳಿಕ ಸೋನು ನಿಗಮ್ ಕ್ಷಮೆ ಕೇಳಿದ್ದರು. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಾಯಿತು, ಜೊತೆಗೆ ಕನ್ನಡ ಚಿತ್ರರಂಗದಿಂದ ಬಹಿಷ್ಕಾರ ಮತ್ತು ಕ್ಷಮಾಪಣೆಯ ಒತ್ತಾಯವೂ ಎದ್ದಿತು. ಇದೀಗ ಮತ್ತೆ ಕನ್ನಡಿಗರನ್ನು ಅವಮಾನಿಸುವಂಥ ಘಟನೆ ಮರುಕಳಿಸಿದೆ.


