Asianet Suvarna News Asianet Suvarna News

ಪರಿ​ಷ​ತ್ತಲ್ಲಿ ‘ಕನ್ನಡಪ್ರಭ’ ದಾ​ಖಲೆ ಮಳೆ ವರದಿ ಪ್ರಸ್ತಾಪ

ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದ ಉಡುಪಿಯ ದಾಖಲೆಯ ಮಳೆ ವರದಿ ಚರ್ಚೆಗೆ ಕಾರಣವಾಯಿತು.  ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ಅವರು ಪತ್ರಿಕೆಯ ಈ ವರದಿಯನ್ನು ಪ್ರಸ್ತಾಪಿಸಿದರು.

Kannadaprabha Rain Report Discussed in Karnataka Session snr
Author
Bengaluru, First Published Sep 22, 2020, 9:05 AM IST

ವಿಧಾನ ಪರಿಷತ್‌ (ಸೆ.22): ‘ಕನ್ನಡಪ್ರಭ’ ದಿನಪತ್ರಿಕೆಯು ಸೋಮವಾರ ಮುಖಪುಟದಲ್ಲಿ ಪ್ರಕಟಿಸಿದ್ದ ‘38 ವರ್ಷಗಳ ದಾಖಲೆ ಮಳೆ’ ಶೀರ್ಷಿಕೆಯ ವರದಿ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪವಾಯಿತು.

ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ಅವರು ಪತ್ರಿಕೆಯ ಈ ವರದಿಯನ್ನು ಪ್ರಸ್ತಾಪಿಸಿ, ರಾಜ್ಯದ ಮಳೆ ಅನಾಹುತ ಕುರಿತು ನಿಲುವಳಿ ಸೂಚನೆ ಅಡಿ ಚರ್ಚಿಸಲು ಅವಕಾಶ ನೀಡುವಂತೆ ಆಗ್ರಹಿಸಿದರು.

‘ಪ್ರಸಕ್ತ ಸಾಲಿನಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದ್ದು, ಸಾವಿರಾರು ಮನೆಗಳು ಮುಳುಗಿವೆ. ಲಕ್ಷಾಂತರ ಎಕರೆ ಭೂಮಿಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಸುರಿದ ಶತಮಾನದ ದಾಖಲೆಯ ಮಳೆಯಿಂದ ಸಾಕಷ್ಟುಅನಾಹುತಗಳು ಸಂಭವಿಸಿದ್ದು, ಪ್ರವಾಹ ಸಂತ್ರಸ್ತರು ಇಂದಿಗೂ ಚೇತರಿಸಿಕೊಂಡಿಲ್ಲ. ಈ ಸಂತ್ರಸರಿಗೆ ಪರಿಹಾರ ಹಾಗೂ ಮನೆ ನಿರ್ಮಿಸಲು ಅನುದಾನ ವಿತರಣೆಯಲ್ಲಿ ಹಲವು ನ್ಯೂನ್ಯತೆಗಳಿವೆ. ಈ ಬಾರಿಯೂ ಸುರಿದ ಭಾರೀ ಮಳೆಯಿಂದ ಸಾಕಷ್ಟುಮನೆ, ಬೆಳೆ, ಪ್ರಾಣಹಾನಿಯಾಗಿದೆ. ಹೀಗಾಗಿ ಕಲಾಪದ ಎಲ್ಲ ವಿಚಾರ ಬದಿಗಿಟ್ಟು ನಿಲುವಳಿ ಸೂಚನೆ ಅಡಿಯಲ್ಲಿ ಈ ಮಳೆ ಅನಾಹುತದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು’ ಎಂದು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಅವರನ್ನು ಒತ್ತಾಯಿಸಿದರು.

38 ವರ್ಷಗಳ ದಾಖಲೆ ಮಳೆ, ಉಡುಪಿ ಸಂಪೂರ್ಣ ಜಲಾವೃತ! ...

ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಇದು ಪ್ರಶ್ನೋತ್ತರ ಅವಧಿಯಾಗಿದ್ದು, ಚರ್ಚೆಗೆ ಹಲವು ವಿಚಾರಗಳಿವೆ. ಹೀಗಾಗಿ ಶೂನ್ಯ ವೇಳೆಯಲ್ಲಿ ಈ ವಿಚಾರ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿ ಅವರನ್ನು ಕೋರಿದರು. ಇದಕ್ಕೆ ಸಮ್ಮತಿ ಸೂಚಿಸಿದ ಸಭಾಪತಿ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು.

Follow Us:
Download App:
  • android
  • ios