ಕರ್ನಾಟಕ ಭವನದಲ್ಲಿ ಕುಡಿದು ದಾಂಧಲೆ| ಸುಪ್ರೀಂ ನ್ಯಾಯಮೂರ್ತಿಗಳಿಂದ ದೂರು| ರಾತ್ರೋರಾತ್ರಿ ದಾಳಿ ನಡೆಸಿದ ಪೊಲೀಸರು
ನವದೆಹಲಿ[ಫೆ.08]: ರಾಷ್ಟ್ರರಾಜಧಾನಿ ನವದೆಹಲಿಗೆ ಕನ್ನಡದ ಕೆಲಸಕ್ಕೆಂದು ಬಂದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಸದಸ್ಯರು ಕರ್ನಾಟಕ ಭವನದಲ್ಲಿ ಮದ್ಯಪಾನ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ದೂರನ್ನು ಪಡೆದ ದೆಹಲಿ ಪೊಲೀಸರು ಕರ್ನಾಟಕ ಭವನಕ್ಕೆ ದಾಳಿ ನಡೆಸಿದ ವಿದ್ಯಮಾನ ಬುಧವಾರ ತಡರಾತ್ರಿ ನಡೆದಿದೆ. ಈ ವಿದ್ಯಮಾನದ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಭವನದ ಸ್ಥಾನಿಕ ಆಯುಕ್ತರಿಂದ ವರದಿಯನ್ನೂ ಕೇಳಿದ್ದಾರೆ.
ಕನ್ನಡ ಮತ್ತು ಕರ್ನಾಟಕದ ಕೆಲ ಬೇಡಿಕೆಗಳನ್ನು ಹಿಡಿದುಕೊಂಡು ರಾಜ್ಯದ ಬುದ್ಧಿಜೀವಿಗಳು, ಚಿಂತಕರು, ಪ್ರಾಧ್ಯಾಪಕರನ್ನು ಒಳಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗವು ಫೆ.5ರಂದು ದೆಹಲಿಗೆ ಆಗಮಿಸಿತ್ತು. ಫೆ.6ರಂದು ನಿಯೋಗದ ಸದಸ್ಯರು ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ…, ಪ್ರಕಾಶ್ ಜಾವಡೇಕರ್ ಮತ್ತು ಸದಾನಂದ ಗೌಡರನ್ನು ಭೇಟಿಯಾಗಿತ್ತು.
ಘಟನೆ ವಿವರ:
ನಿಯೋಗದ ಬಹುತೇಕ ಸದಸ್ಯರು ಕರ್ನಾಟಕ ಭವನದಲ್ಲಿ ತಂಗಿದ್ದರು. ದೆಹಲಿ ನಿವಾಸಿಯಾಗಿರುವ ಜೆಎನ್‌ಯು ಪ್ರಾಧ್ಯಾಪಕ, ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಅವರಿಗೆ ಕರ್ನಾಟಕ ಭವನದ ಮೊದಲ ಮಹಡಿಯಲ್ಲಿ ರೂಂ ನೀಡಲಾಗಿತ್ತು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ, ಇತ್ತೀಚೆಗಷ್ಟೆಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿರುವ ನ್ಯಾಯಮೂರ್ತಿಯೊಬ್ಬರಿಗೂ ಇದೇ ಮಹಡಿಯಲ್ಲಿ ಕೊಠಡಿ ನೀಡಲಾಗಿತ್ತು.
ರಾತ್ರಿ ರಂಗೇರುತ್ತಿದ್ದಂತೆ ಪಾರ್ಟಿ ಮೂಡಿನಲ್ಲಿದ್ದ ಸಾಹಿತಿಗಳು ಮತ್ತು ಅವರ ದೆಹಲಿಯ ಕೆಲ ಸ್ನೇಹಿತರು ಧ್ವನಿಯೇರಿಸಿ ಮಾತನಾಡಿದ್ದಾರೆ. ಆಗ ಪಕ್ಕದ ಕೊಠಡಿಯಲ್ಲಿದ್ದ ನ್ಯಾಯಮೂರ್ತಿಗಳು ತಮ್ಮ ಆಪ್ತ ಸಿಬ್ಬಂದಿಯ ಹತ್ತಿರ ಧ್ವನಿ ತಗ್ಗಿಸಿ ಮಾತನಾಡುವಂತೆ ತಿಳಿಸಿ ಎಂದು ಹೇಳಿದ್ದಾರೆ. ಅದೇ ರೀತಿ ನ್ಯಾಯಮೂರ್ತಿಗಳ ಭದ್ರತಾ ಸಿಬ್ಬಂದಿ ಸಹ ಧ್ವನಿ ತಗ್ಗಿಸಿ ಮಾತನಾಡುವಂತೆ ಒಂದೆರಡು ಬಾರಿ ವಿನಂತಿಸಿದ್ದಾರೆ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಸಾಹಿತಿಗಳು ನಿಯೋಗದ ಜೊತೆಯಲ್ಲಿದ್ದ ಒಬ್ಬರು ಭದ್ರತಾ ಸಿಬ್ಬಂದಿಯನ್ನೆ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.
ಸಾಹಿತಿಗಳ ಗಲಾಟೆ ಜೋರಾದಾಗ ನ್ಯಾಯಮೂರ್ತಿಗಳು ಕರ್ನಾಟಕ ಭವನದ ಸ್ವಾಗತ ಕಕ್ಷೆಗೆ ಬಂದು ಪೊಲೀಸ್ ನಿಯಂತ್ರಣ ಕಚೇರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸಿ ದೆಹಲಿ ಪೊಲೀಸ್‌ನ ಡಿಸಿಪಿ ಸೇರಿದಂತೆ ಸುಮಾರು 15 ಪೊಲೀಸರು ಕರ್ನಾಟಕ ಭವನಕ್ಕೆ ದಾಳಿ ನಡೆಸಿ ಗೇಟ್‌ಗಳನ್ನು ಬಂದ್ ಮಾಡಿ, ತಪಾಸಣೆ ನಡೆಸಿದ್ದಾರೆ.
ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಕೆಲವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಉಳಿದಂತೆ ಪಾರ್ಟಿ ನಡೆಸುತ್ತಿದ್ದ ಕೊಠಡಿಗೆ ದಾಳಿ ನಡೆಸಿದ ಪೊಲೀಸರು ಸಾಹಿತಿಗಳ ವೈದ್ಯಕೀಯ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಪರಿಸ್ಥಿತಿ ಕೈ ತಪ್ಪುತ್ತಿರುವುದನ್ನು ಅರಿತ ಸಾಹಿತಿಗಳು ನ್ಯಾಯಮೂರ್ತಿಗಳ ಕ್ಷಮೆ ಕೇಳಿದ್ದಾರೆ. ಘಟನೆ ಮಾಹಿತಿ ಪಡೆದ ಸ್ಥಾನಿಕ ಆಯುಕ್ತ ನಿಲಾಯ್ ಮಿಥಾಸ್ ಕೂಡ ಭವನಕ್ಕೆ ದೌಡಾಯಿಸಿ ನ್ಯಾಯಮೂರ್ತಿಗಳಲ್ಲಿ ಕ್ಷಮೆ ಕೋರಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 8, 2019, 5:00 PM IST