ಮೋದಿ ಸೇರಿ ಗಣ್ಯರಿಂದ ಕನ್ನಡ ರಾಜ್ಯೋತ್ಸವದ ಶುಭಾಶಯ: ಕನ್ನಡದಲ್ಲೇ ಪಿಎಂ ಟ್ವೀಟ್!
* 66ನೇ ಕನ್ನಡ ರಾಜ್ಯೋತ್ಸವ, ಕನ್ನಡಿಗರಿಗೆ ಸಂಭ್ರಮದ ದಿನ
* ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ಕೋರಿದ ಮೋದಿ
* ಟ್ವೀಟ್ ಮಾಡಿ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್
ಬೆಂಗಳೂರು(ನ.01): 66ನೇ ಕನ್ನಡ ರಾಜ್ಯೋತ್ಸವದ (Karnataka Rajyotsava) ಮಾಸ ಆರಂಭವಾಗಿದೆ. ನವೆಂಬರ್ 1 ಕನ್ನಡಿಗರೆಲ್ಲ ಸಂಭ್ರಮಿಸುವ ದಿನ. ಭಾಷಾವಾರು ರಾಜ್ಯ ವಿಂಗಡಣೆಯ ವೇಳೆ ದಕ್ಷಿಣ ಭಾರತದಲ್ಲಿ ಕನ್ನಡ ಮಾತನಾಡುವ ಪ್ರಾಂತಗಳನ್ನೆಲ್ಲ ಒಗ್ಗೂಡಿಸಿ 1956ರಲ್ಲಿ ಈ ದಿನ ಕರ್ನಾಟಕ (ಅಂದು ಮೈಸೂರು ರಾಜ್ಯ)ವನ್ನು ರಚಿಸಲಾಗಿತ್ತು. ಅದರ ನೆನಪಿಗಾಗಿ ಆಚರಿಸುವ ಕನ್ನಡ ರಾಜ್ಯೋತ್ಸವವೆಂದರೆ ಕನ್ನಡದ ಎಲ್ಲ ಮನಸ್ಸುಗಳು ಈ ನಾಡಿನ ಭವ್ಯ ಇತಿಹಾಸವನ್ನು ಸ್ಮರಿಸಿ, ಗೌರವಿಸುವ ನಾಡ ಹಬ್ಬವಿದ್ದಂತೆ. ಸಂಭ್ರಮದ ಹೊರತಾಗಿ ಇದು ಕನ್ನಡನಾಡಿನ ಏಳ್ಗೆಗೆ ಹಾಗೂ ಕನ್ನಡದ ಉಳಿವಿಗೆ ಎಲ್ಲರೂ ಸೇರಿ ನಿಭಾಯಿಸಬೇಕಾದ ಜವಾಬ್ದಾರಿಯನ್ನು ನೆನಪಿಸುವ ದಿನ ಕೂಡ ಹೌದು. ಇಂತಹ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ (Prime Minister Narendra Modi) ಸೇರಿ ಹಲವಾರು ರಾಜಕೀಯ ಗಣ್ಯರು ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರಿಗೆ ಶುಭ ಕೋರಿದ್ದಾರೆ.
Kannada Rajyotsava| ಕನ್ನಡ ಬೆಳೆಸಲು ಕನ್ನಡಿಗರೇನು ಮಾಡಬಹುದು?
ಹೌದು ಈ ಬಗ್ಗೆ ಟ್ವೀಟ್ ಮಾಡಿದ ಪಿಎಂ ಮೋದಿ (PM Narendra Modi) 'ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ' ಎಂದು ಬರೆದಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಕೂಡಾ ಟ್ವಿಟ್ ಮಾಡಿ ಏಕೀಕರಣ ದಿನದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಕೋವಿಂದ್ ಆಂಧ್ರಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಪಂಜಾಬ್, ಲಕ್ಷದ್ವೀಪ ಮತ್ತು ಪುದುಚೇರಿ ಜನರಿಗೆ ಏಕೀಕರಣ ದಿನದ ಶುಭಾಶಯಗಳು. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭಾಶಯಗಳು ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡಾ ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಹಾರೈಸಿದ್ದು, ಸಮಸ್ತ ಕನ್ನಡಿಗರಿಗೆ 66ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾಡು-ನುಡಿ ರಕ್ಷಣೆಯ ಜೊತೆಗೆ ಸಮೃದ್ಧ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ! ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (BS Yediyurappa) ಕೂಡಾ ‘ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡು, ನುಡಿ, ಜನಪದ, ಇತಿಹಾಸ, ಪರಂಪರೆ, ಸಂಸ್ಕೃತಿಗಳನ್ನು ಉಳಿಸುವ, ಬೆಳೆಸುವ ದೃಢ ಸಂಕಲ್ಪ ನಮ್ಮದಾಗಿರಲಿ. ಸಮೃದ್ಧ, ಆರೋಗ್ಯಪೂರ್ಣ, ಪ್ರಗತಿಶೀಲ ನವಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ.’ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕವನ್ನು ಒಳಗೊಂಡ ಒಟ್ಟು ಕನ್ನಡತನದ ಬದುಕು ಹಸನಾಗಿಸುವ ಗುರಿ ನಮ್ಮದಾಗಿರಲಿ. ಕನ್ನಡವನ್ನು ಉಳಿಸೋಣ, ಬೆಳೆಸೋಣ. ರಾಜ್ಯದ ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೂಡ ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಕೋರಿದ್ದು, ‘ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಲಿ. ಉಸಿರಿನ ಪ್ರತಿ ಕಣಕಣದಲ್ಲೂ ಕನ್ನಡವಿರಲಿ. ನಮ್ಮ ಆಶಯವೇ ಇದಾಗಿರಲಿ ಎಂದು ಹಾರೈಸಿದ್ದಾರೆ. ಅಲ್ಲದೇ, 1,500 ವರ್ಷಗಳಿಗೂ ಹೆಚ್ಚು ಘನ ಇತಿಹಾಸವುಳ್ಳ ಕನ್ನಡ, ಶಾಸ್ತ್ರೀಯ ಸ್ಥಾನ ಅಲಂಕರಿಸಿದ ಅಭಿಜಾತ ಕನ್ನಡ, ಅಷ್ಟ ಜ್ಞಾನಪೀಠಗಳ ಮೇರುಗನ್ನಡ, ನಮ್ಮ ಬದುಕು- ಬಾಳ್ವೆಯ ತಾಯ್ಗನ್ನಡ. ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವಭಾಷೆ. ನಮ್ಮ ಮನಸು- ಕನಸುಗಳನ್ನು ಅರಳಿಸಿ ಭವಿಷ್ಯದ ರೆಕ್ಕೆಕೊಟ್ಟು ಹಾರಲು ಶಕ್ತಿ ತುಂಬುವ ಜೀವಭಾಷೆ ಎಂದಿದ್ದಾರೆ.
Kannada Rajyotsava| ಕನ್ನಡ ಉಳಿಸಿ, ಬೆಳೆಸಲು ಸರ್ಕಾರ ಏನು ಮಾಡಬೇಕು?
ಅಲ್ಲದೇ ಕನ್ನಡಿಗರ ಮನೆ-ಮನದಲ್ಲೂ ಕನ್ನಡ ಬೆಳಗುತ್ತಿದೆ, ನಿಜ. ಆದರೆ, ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್ ರಾಜಕುಮಾರ್ ಅವರು ಕನ್ನಡ ಹಬ್ಬಕ್ಕೆ ಮುನ್ನ ನಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದುಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಆ ಮೂಲಕ ಪುನೀತರಾಗೋಣ ಎಂದಿರುವ ಕುಮಾರಸ್ವಾಮಿ, ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಈ ವರ್ಷ ಕನ್ನಡದ ಹಬ್ಬವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಾ, ಮತ್ತೊಮ್ಮೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿ, 'ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅವಿರತ ಪ್ರಯತ್ನದಿಂದಾಗಿ ಹರಿದುಹೋಗಿದ್ದ ಕರುನಾಡು ಕರ್ನಾಟಕ ರಾಜ್ಯವಾಗಿ ರೂಪುಗೊಂಡಿತು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ರಾಜ್ಯೋತ್ಸವ ದಿನವಾದ ಇಂದು ನಮನಗಳನ್ನು ಅರ್ಪಿಸುತ್ತೇನೆ.' ಎಂದು ಹೇಳಿದ್ದಾರೆ.