ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ ಡಾ .ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ!
ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ| ಏಟ್ಸ್, ಎಲಿಯಟ್, ಷೇಕ್ಸ್ ಪಿಯರ್ ಕಾವ್ಯವನ್ನು ಅನನ್ಯವಾಗಿ ಕನ್ನಡಕ್ಕೆ ತಂದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ| ಬನಶಂಕರಿಯ ಮನೆಯಲ್ಲಿ ಬೆಳಿಗ್ಗೆ ಹತ್ತು ಮೂವತ್ತರವರೆಗೆ ಅಂತಿಮ ದರ್ಶನ
ಬೆಂಗಳೂರು(ಮಾ.06): ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಾಧ್ಯಾಪಕ, ಏಟ್ಸ್, ಎಲಿಯಟ್, ಷೇಕ್ಸ್ ಪಿಯರ್ ಕಾವ್ಯವನ್ನು ಅನನ್ಯವಾಗಿ ಕನ್ನಡಕ್ಕೆ ತಂದ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ದೀರ್ಘ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಇಂದು ಶನಿವಾರ ಮುಂಜಾನೆ ನಾಲ್ಕು ಮುಕ್ಕಾಲು ಗಂಟೆಗೆ ವಿಧಿವಶರಾಗಿದ್ದಾರೆ.
ಬನಶಂಕರಿಯ ಮನೆಯಲ್ಲಿ ಬೆಳಿಗ್ಗೆ ಹತ್ತು ಮೂವತ್ತರವರೆಗೆ ಅಂತಿಮ ದರ್ಶನ ಪಡೆಯಬಹುದಾಗಿದೆ.
ಭಾವಗೀತೆ, ಸಾಹಿತ್ಯ ವಿಮರ್ಶೆ, ನವ್ಯಕವಿತೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ ಎನ್.ಎಸ್.ಎಲ್.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 1936 ರ ಅಕ್ಟೋಬರ್ 29 ರಂದು ಶಿವಮೊಗ್ಗದಲ್ಲಿ ಜನಿಸಿದ್ದರು. ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ., ಎಲ್ಲಿ ಜಾರಿತೋ ಮನವು. , ಎಲ್ಲ ನಿನ್ನ ಲೀಲೆ ತಾಯೆ, ನನ್ನ ಇನಿಯನ ನೆಲೆಯ. ಮೊದಲಾದ ಗೀತೆ ರಚಿಸಿದ್ದಾರೆ
ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಾಧ್ಯಾಪಕರು. ಇವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಎಲಿಯಟ್ಸ್, ಷೇಕ್ಸ್ಪಿಯರ್ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ‘ಹೊರಳು ದಾರಿಯಲ್ಲಿ ಕಾವ್ಯ’ ಈ ‘ವಿಮರ್ಶಾಗ್ರಂಥ’ಕ್ಕೆ 1974ರಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ.ನಾಲ್ಕುಬಾರಿ ಅಮೆರಿಕದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಅವರು ಕೊಟ್ಟ ಉಪನ್ಯಾಸಗಳ ಸಂಖ್ಯೆ 80. ನ್ಯೂಯಾರ್ಕ್, ನ್ಯೂಜರ್ಸಿ, ಶಿಕಾಗೊ, ಲಾಸ್ ಎಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಮುಂತಾದ ನಗರಗಳಲ್ಲಿ ಭಟ್ಟರು ಮನೆ ಮಾತಾಗಿದ್ದರು